ADVERTISEMENT

ಕೊಹ್ಲಿ ಪಾಲಿಗೆ ಐಪಿಎಲ್‌ ನಾಯಕತ್ವ ವೈಫಲ್ಯವಾಗಿ ಕಾಣಲಿದೆ: ಮೈಕಲ್‌ ವಾನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಅಕ್ಟೋಬರ್ 2021, 15:57 IST
Last Updated 12 ಅಕ್ಟೋಬರ್ 2021, 15:57 IST
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ   

ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್‌ ಎನಿಸಿಕೊಂಡಿರುವ ವಿರಾಟ್‌ ಕೊಹ್ಲಿ ಅವರು ಐಪಿಎಲ್‌ನಲ್ಲಿ ಆಡುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಅರ್‌ಸಿಬಿ) ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ.

ಆಟಗಾರನಾಗಿ ಐಪಿಎಲ್‌ನಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಕೊಹ್ಲಿ, ನಾಯಕನಾಗಿ ಒಂದೇಒಂದು ಕಪ್‌ ಗೆಲ್ಲಲು ಸಾಧ್ಯವಾಗಿಲ್ಲ ಎಂಬುದು ಗಮನಾರ್ಹ ಸಂಗತಿ. 2013ರಿಂದಲೂ ನಾಯಕರಾಗಿರುವ ಅವರು ತಂಡವನ್ನು ಒಂದುಬಾರಿಯಷ್ಟೇ ಫೈನಲ್‌ಗೇರಿಸಿದ್ದರು. ಅದೇ ಅವರ ಶ್ರೇಷ್ಠ ಸಾಧನೆ.

ಹೀಗಾಗಿ ಅರ್‌ಸಿಬಿ ತಂಡದ ನಾಯಕತ್ವವು ವಿರಾಟ್‌ ಪಾಲಿಗೆ ವೈಫಲ್ಯವಾಗಿ ಉಳಿಯಲಿದೆ ಎಂದು ಇಂ‌ಗ್ಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಮೈಕಲ್‌ ವಾನ್‌ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಸಂದರ್ಶನವೊಂದರಲ್ಲಿ ಮಾತನಾಡಿರುವ ವಾನ್‌, ಒಬ್ಬ ಬ್ಯಾಟರ್‌ ಆಗಿ ಕೊಹ್ಲಿಯವರ ಬ್ಯಾಟಿಂಗ್‌ ದಾಖಲೆಗಳನ್ನು ಅಲ್ಲಗಳೆಯುವಂತಿಲ್ಲ. ಆದರೆ ನಾಯಕನಾಗಿ ಐಪಿಎಲ್‌ನಲ್ಲಿ ಒಂದೇಒಂದು ಪ್ರಶಸ್ತಿ ಗೆಲ್ಲಲು ಸಾಧ್ಯವಾಗದಿರುವುದು ಕೊಹ್ಲಿ ನಾಯಕತ್ವದ ಬಗೆಗಿನ ಟೀಕೆಗಳಿಗೆ ಪ್ರಮುಖ ಕಾರಣ. ಉನ್ನತ ಮಟ್ಟದ ಟೂರ್ನಿಗಳಲ್ಲಿ ಅದರಲ್ಲೂ ಕೊಹ್ಲಿಯಂತಹ ಶ್ರೇಷ್ಠ ದರ್ಜೆಯ ಆಟಗಾರನಿಗೆ ಪ್ರಶಸ್ತಿ ಗೆಲ್ಲುವುದು ಮುಖ್ಯ. ಒಮ್ಮೆಯಾದರೂ ಪ್ರಶಸ್ತಿ ಗೆಲ್ಲಲು ಆಗಲಿಲ್ಲ ಎಂಬುದು ಕೊಹ್ಲಿಯ ನಾಯಕತ್ವದ ಪ್ರಯಾಣವನ್ನು ಯಶಸ್ವಿಯಾಗದಂತೆ ಮಾಡುತ್ತದೆ ಎಂದು ವಾನ್‌ ಹೇಳಿದ್ದಾರೆ.

ಪ್ರಶಸ್ತಿ ಗೆಲ್ಲಲೇಬೇಕು ಎಂದು ಹೇಳುತ್ತಿಲ್ಲ. ಆದರೆ, ಕೊಹ್ಲಿ ಪಾಲಿಗೆ ಆರ್‌ಸಿಬಿ ನಾಯಕತ್ವವು ವೈಫಲ್ಯವಾಗಿ ಕಾಣಲಿದೆ. ಏಕೆಂದರೆ, ಅಂತಹ ಅತ್ಯುತ್ತಮ ಆಟಗಾರ ಕೊಹ್ಲಿ ಎಂದಿದ್ದಾರೆ.

ವಿರಾಟ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಕಟ್ಟುತ್ತಿರುವ ರೀತಿ ಅದ್ಭುತ. ಭಾರತದ ಪರ ಏಕದಿನ, ಟಿ20 ಕ್ರಿಕೆಟ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿಚಾರದಲ್ಲಿ ತುಂಬಾ ಹಿಂದೆ ಉಳಿದಿದ್ದಾರೆ ಎಂಬುದನ್ನು ಪ್ರಾಮಾಣಿಕವಾಗಿ ಹೇಳಬೇಕಿದೆ ಎಂದೂ ಹೇಳಿದ್ದಾರೆ.

2021ರ ಐಪಿಎಲ್‌ ಟೂರ್ನಿಯ ಪ್ಲೇ ಆಫ್‌ ಪ್ರವೇಶಿಸಿದ್ದ ಆರ್‌ಸಿಬಿ, ಕೋಲ್ಕತ್ತ ನೈಟ್‌ ರೈಡರ್ಸ್‌ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಈ ಟೂರ್ನಿ ಬಳಿಕ ತಂಡದ ನಾಯಕತ್ವ ತೊರೆಯುವುದಾಗಿ ಮತ್ತು ಆಟಗಾರನಾಗಿ ಮುಂದುವರಿಯುವುದಾಗಿ ಕೊಹ್ಲಿ ಈಗಾಗಲೇ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.