ಗೌತಮ್ ಗಂಭೀರ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ
(ಪಿಟಿಐ ಚಿತ್ರ)
ನವದೆಹಲಿ: ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಸಲ್ಲಿಸಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಕುರಿತು ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೊನೆಗೂ ಮೌನ ಮುರಿದಿದ್ದಾರೆ.
'ವಿರಾಟ್ ಹಾಗೂ ರೋಹಿತ್ ಅನುಪಸ್ಥಿತಿ ನಿಭಾಯಿಸುವುದು ದೊಡ್ಡ ಸವಾಲು ಆಗಿರಲಿದೆ. ಆದರೂ ಇತರರಿಗೆ ಮುಂದೆ ಬಂದು ಜವಾಬ್ದಾರಿ ವಹಿಸಲು ಉತ್ತಮ ಅವಕಾಶ ಇರಲಿದೆ' ಎಂದು ಹೇಳಿದ್ದಾರೆ.
ಪ್ರಸಕ್ತ ಸಾಗುತ್ತಿರುವ ಐಪಿಎಲ್ ಟೂರ್ನಿಯ ಮಧ್ಯೆ ರೋಹಿತ್ ಹಾಗೂ ಕೊಹ್ಲಿ ಒಬ್ಬರ ಹಿಂದೆ ಒಬ್ಬರಂತೆ ದೀರ್ಘಾವಧಿಯ ಕ್ರಿಕೆಟ್‌ಗೆ ವಿದಾಯ ಸಲ್ಲಿಸಿದ್ದರು. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಸರಣಿಗೂ ಮುನ್ನ ಈ ನಿರ್ಧಾರ ಪ್ರಕಟಿಸಿದ್ದರು.
ಸಿಎನ್‌ಎನ್-ನ್ಯೂಸ್18 ಚಾನೆಲ್‌ಗೆ ಪ್ರತಿಕ್ರಿಯಿಸಿರುವ ಗಂಭೀರ್, 'ನಿಮ್ಮ ಆಟವನ್ನು ಆರಂಭಿಸುವುದು ಹಾಗೂ ನಿಲ್ಲಿಸುವುದು ಸಂಪೂರ್ಣ ವೈಯಕ್ತಿಕ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಯಾವಾಗ ನಿವೃತ್ತಿ ಹೊಂದಬೇಕು ಅಥವಾ ಆಗಬಾರದು ಎಂದು ಹೇಳಲು ಕೋಚ್ ಅಥವಾ ಆಯ್ಕೆದಾರರಿಗೆ ಯಾವುದೇ ಹಕ್ಕು ಇರುವುದಿಲ್ಲ' ಎಂದು ಹೇಳಿದ್ದಾರೆ.
ರೋಹಿತ್ ಹಾಗೂ ವಿರಾಟ್ ಸ್ಥಾನವನ್ನು ತುಂಬುವುದು ಅಷ್ಟು ಸುಲಭವಲ್ಲ ಎಂಬುದನ್ನು ಗಂಭೀರ್ ಒಪ್ಪಿಕೊಂಡಿದ್ದಾರೆ.
'ಹೌದು, ಇಬ್ಬರು ಅನುಭವಿ ಆಟಗಾರರ ಅನುಪಸ್ಥಿತಿ ನಮಗೆ ಕಾಡಲಿದೆ. ಅದೇ ಹೊತ್ತಿಗೆ ಇತರೆ ಆಟಗಾರರಿಗೆ ಜವಾಬ್ದಾರಿ ವಹಿಸಿಕೊಂಡು ಆಡಲು ಉತ್ತಮ ಅವಕಾಶವೂ ಇರಲಿದೆ' ಎಂದು ತಿಳಿಸಿದ್ದಾರೆ.
ಇದಕ್ಕಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಜಸ್‌ಪ್ರೀತ್ ಬೂಮ್ರಾ ಅನುಪಸ್ಥಿತಿಯಲ್ಲಿ ಇತರೆ ಬೌಲರ್‌ಗಳ ಪ್ರದರ್ಶನವನ್ನು ಗಂಭೀರ್ ಉಲ್ಲೇಖಿಸಿದ್ದಾರೆ.
'ಜಸ್‌ಪ್ರೀತ್ ಬೂಮ್ರಾ ಅಲಭ್ಯತೆಯಲ್ಲೂ ನಾನು ಇದನ್ನೇ ಹೇಳಿದ್ದೆ. ಯಾವುದೇ ಆಟಗಾರನ ಅನುಪಸ್ಥಿತಿ ಕಾಡಿದರೆ ದೇಶಕ್ಕಾಗಿ ವಿಶೇಷವಾದದ್ದನ್ನು ಮಾಡಲು ಇನ್ನೊಬ್ಬ ಆಟಗಾರರಿಗೆ ಅವಕಾಶ ಸಿಗಬಹುದು. ಅಂತಹ ಅವಕಾಶಕ್ಕಾಗಿ ಇತರೆ ಆಟಗಾರರು ಹಾತೊರೆಯುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.