ADVERTISEMENT

AUS vs WI T20 | ವಾರ್ನರ್, ಜಂಪಾ ಅಬ್ಬರ: ವಿಂಡೀಸ್ ವಿರುದ್ಧ ಗೆದ್ದ ಆಸ್ಟ್ರೇಲಿಯಾ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 14:25 IST
Last Updated 9 ಫೆಬ್ರುವರಿ 2024, 14:25 IST
<div class="paragraphs"><p>ಡೇವಿಡ್ ವಾರ್ನರ್</p></div>

ಡೇವಿಡ್ ವಾರ್ನರ್

   

ಹೋಬಾರ್ಟ್‌: ಡೇವಿಡ್ ವಾರ್ನರ್ ತಮ್ಮ ನೂರನೇ ಟಿ20 ಪಂದ್ಯದಲ್ಲಿ 36 ಎಸೆತಗಳಲ್ಲಿ 70 ರನ್ ಸಿಡಿಸಿ ಸಂಭ್ರಮಿಸಿದರೆ,  ಆ್ಯಡಂ ಜಂಪಾ ಮೂರು ವಿಕೆಟ್ ಪಡೆದು ಬೀಗಿದರು. ಇವರಿಬ್ಬರ ಕೊಡುಗೆಗಳ ನೆರವಿನಿಂದ ಆಸ್ಟ್ರೇಲಿಯಾ ತಂಡ, ಶುಕ್ರವಾರ ಉತ್ತಮ ಹೋರಾಟ ಕಂಡ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು 11 ರನ್‌ಗಳಿಂದ ಸೋಲಿಸಿತು.

ಗಾಳಿ ಮತ್ತು ಚಳಿಯಿಂದ ಕೂಡಿದ ಹೋಬಾರ್ಟ್‌ನಲ್ಲಿ ಬ್ಯಾಟಿಂಗಿಗೆ ಕಳುಹಿಸಲ್ಪಟ್ಟ ಆತಿಥೇಯರು 7 ವಿಕೆಟ್‌ಗೆ 213 ರನ್ ಹೊಡೆದರು. ವೆಸ್ಟ್‌ ಇಂಡೀಸ್ ವಿರೋಚಿತ ಹೋರಾಟ ನಡೆಸಿದರೂ 8 ವಿಕೆಟ್‌ಗೆ 202 ರನ್ ಗಳಿಸಿ ಅಲ್ಪದರಲ್ಲಿ ಸೋಲೊಪ್ಪಿತು. ಜಂಪಾ 26 ರನ್ನಿಗೆ 3 ವಿಕೆಟ್ ಪಡೆದರು. ಸರಣಿಯಲ್ಲಿ ಇನ್ನೆರಡು ಪಂದ್ಯಗಳು ಉಳಿದಿವೆ.

ADVERTISEMENT

ವಿರಾಟ್ ಕೊಹ್ಲಿ ಮತ್ತು ರಾಸ್‌ ಟೇಲರ್ ನಂತರ ಮೂರೂ ಮಾದರಿಯಲ್ಲಿ ನೂರು ಅಥವಾ ಅಧಿಕ ಪಂದ್ಯಗಳನ್ನು ಆಡಿರುವ ಮೂರನೇ ಆಟಗಾರ ಎನಿಸಿದ ವಾರ್ನರ್ ಬಿರುಗಾಳಿ ಇನಿಂಗ್ಸ್‌ನಲ್ಲಿ ಒಂದು ಸಿಕ್ಸರ್‌, 12 ಬೌಂಡರಿಗಳನ್ನು ಚಚ್ಚಿ ಪಂದ್ಯದ ಆಟಗಾರ ಗೌರವಕ್ಕೂ ಪಾತ್ರರಾದರು.

ಜೇಸನ್ ಬೆಹ್ರೆನ್‌ಡಾರ್ಫ್ ಅವರ ಮೊದಲ ಓವರ್‌ನಲ್ಲಿ 16 ರನ್ ದೋಚಿದ ವೆಸ್ಟ್‌ ಇಂಡೀಸ್ ಆರಂಭ ಆಟಗಾರರು 72 ರನ್ ಸೇರಿಸಿ ಒಳ್ಳೆಯ ಬುನಾದಿ ಹಾಕಿದ್ದರು. ಆದರೆ ತಂಡ ನಂತರ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಮಾರ್ಕಸ್ ಸ್ಟೊಯಿನಿಸ್‌ ಎರಡು ವಿಕೆಟ್‌ಗಳನ್ನು ಪಡೆದರು.

ಸ್ಕೋರುಗಳು: ಆಸ್ಟ್ರೇಲಿಯಾ: 20 ಓವರುಗಳಲ್ಲಿ 7 ವಿಕೆಟ್‌ಗೆ 213 (ವಾರ್ನರ್ 70, ಇಂಗ್ಲಿಸ್ 39, ಟಿಮ್ ಡೇವಿಡ್ ಔಟಾಗದೇ 37, ಜೋಸೆಫ್ 46ಕ್ಕೆ2, ರಸೆಲ್ 42ಕ್ಕೆ3); ವೆಸ್ಟ್ ಇಂಡೀಸ್‌: 20 ಓವರುಗಳಲ್ಲಿ 8 ವಿಕೆಟ್‌ಗೆ 202 (ಬ್ರೆಂಡನ್ ಕಿಂಗ್ 53, ಜಾನ್ಸನ್ ಚಾರ್ಲ್ಸ್ 42, ಹೋಲ್ಡರ್‌ ಔಟಾಗದೇ 34; ಜಂಪಾ 26ಕ್ಕೆ3, ಸ್ಟೊಯಿನಿಸ್ 20ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.