ADVERTISEMENT

ದುಲೀಪ್‌ ಮತ್ತು ದೇವಧರ್‌ ಟ್ರೋಫಿ ತೆಗೆದುಹಾಕಿ: ವಾಸೀಂ ಜಾಫರ್‌

ಭಾರತದ ಹಿರಿಯ ಕ್ರಿಕೆಟಿಗ ಅನಿಸಿಕೆ

ಪಿಟಿಐ
Published 15 ಜೂನ್ 2020, 11:50 IST
Last Updated 15 ಜೂನ್ 2020, 11:50 IST
ವಾಸೀಂ ಜಾಫರ್‌ 
ವಾಸೀಂ ಜಾಫರ್‌    

ಮುಂಬೈ: ‘ಈ ಋತುವಿನ ದೇಶಿಯ ಕ್ರಿಕೆಟ್‌ ವೇಳಾಪಟ್ಟಿಯಿಂದ ವಿಜಯ್‌ ಹಜಾರೆ, ದುಲೀಪ್‌ ಮತ್ತು ದೇವಧರ್ ಟ್ರೋಫಿಗಳನ್ನು ತೆಗೆದುಹಾಕುವುದು ಒಳಿತು’ ಎಂದು ಭಾರತದ ಹಿರಿಯ ಕ್ರಿಕೆಟಿಗ ವಾಸೀಂ ಜಾಫರ್‌ ಅಭಿಪ್ರಾಯಪಟ್ಟಿದ್ದಾರೆ.

‘ಈ ಟೂರ್ನಿಗಳನ್ನು ರದ್ದು ಮಾಡಿದರೆ ಬಹಳಷ್ಟು ಸಮಯ ಉಳಿಯಲಿದೆ. ಆಗ ರಣಜಿ ಟ್ರೋಫಿ ಮತ್ತು ಸೈಯದ್‌ ಮುಷ್ತಾಕ್‌ ಅಲಿ ಟ್ವೆಂಟಿ–20 ಟೂರ್ನಿಯನ್ನು ಪೂರ್ಣ ಪ್ರಮಾಣದಲ್ಲಿ ಆಯೋಜಿಸಬಹುದು’ ಎಂದು ತಿಳಿಸಿದ್ದಾರೆ.

ಆಗಸ್ಟ್‌ನಲ್ಲಿ ದೇಶಿಯ ಕ್ರಿಕೆಟ್‌ ಋತು ಆರಂಭವಾಗುವ ನಿರೀಕ್ಷೆ ಇದ್ದು, ಕೋವಿಡ್‌–19 ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕಾರಣ,ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಈಗ ಕಾದು ನೋಡುವ ತಂತ್ರ ಅನುಸರಿಸುತ್ತಿದೆ.

ADVERTISEMENT

‘ಕೊರೊನಾ ಬಿಕ್ಕಟ್ಟು ಬಗೆಹರಿದ ಕೂಡಲೇ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 13ನೇ ಆವೃತ್ತಿಯ ಕ್ರಿಕೆಟ್‌ ಟೂರ್ನಿಯನ್ನು ಆಯೋಜಿಸುವುದಕ್ಕೆ ಬಿಸಿಸಿಐ ಮೊದಲ ಆದ್ಯತೆ ನೀಡಲಿದೆ’ ಎಂದು ಜಾಫರ್‌ ಹೇಳಿದ್ದಾರೆ.

‘ಐಪಿಎಲ್‌ ಮುಗಿದ ಬಳಿಕವೇ ದೇಶಿಯ ಟೂರ್ನಿಗಳಿಗೆ ಚಾಲನೆ ನೀಡುವ ನಿರೀಕ್ಷೆ ಇದೆ. ಮೊದಲು ಇರಾನಿ ಕಪ್‌, ನಂತರ ರಣಜಿ ಟ್ರೋಫಿ ನಡೆಸುವ ಸಾಧ್ಯತೆ ಇದೆ. ಐಪಿಎಲ್‌ 14ನೇ ಆವೃತ್ತಿಯ ಆಟಗಾರರ ಹರಾಜಿಗೂ ಮುನ್ನ ಮುಷ್ತಾಕ್‌ ಅಲಿ ಟ್ರೋಫಿ ಆಯೋಜಿಸಿದರೆ ಉತ್ತಮ. ಈ ಮೂರು ಟೂರ್ನಿಗಳಿಗೆ ಮಹತ್ವ ನೀಡಿದರೆ ಸಾಕು’ ಎಂದು ಅವರು ವಿವರಿಸಿದ್ದಾರೆ.

‘ಸತತವಾಗಿ ಟೂರ್ನಿಗಳನ್ನು ನಡೆಸಿದರೆ ಆಟಗಾರರಿಗೂ ವಿಶ್ರಾಂತಿ ಸಿಗುವುದಿಲ್ಲ. ಏಕದಿನ, ಟ್ವೆಂಟಿ–20 ಮತ್ತು ಟೆಸ್ಟ್‌ ಮಾದರಿಗಳಿಗೆ ಹೊಂದಿಕೊಳ್ಳುವುದಕ್ಕೂ ಕಷ್ಟವಾಗುತ್ತದೆ. ವಿಜಯ್‌ ಹಜಾರೆ ಮತ್ತು ದುಲೀಪ್‌ ಟ್ರೋಫಿ ರದ್ದು ಮಾಡಿದರೆ ಎರಡು ತಿಂಗಳು ಸಮಯ ಉಳಿಯಲಿದೆ. ಆ ಅವಧಿಯನ್ನು ಆಟಗಾರರ ವಿಶ್ರಾಂತಿಗೆ ಮೀಸಲಿಟ್ಟರೆ ಎಲ್ಲರಿಗೂ ಅನುಕೂಲವಾಗಲಿದೆ’ ಎಂದೂ 42 ವರ್ಷ ವಯಸ್ಸಿನ ಆಟಗಾರ ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.