ಹೈದರಾಬಾದ್: ಆಸ್ಟ್ರೇಲಿಯಾ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಗೆಲುವು ಸಾಧಿಸುತ್ತಿದ್ದಂತೆಯೇ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪರಸ್ಪರ ಸಂಭ್ರಮಾಚರಣೆ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದು ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ ಆಸ್ಟ್ರೇಲಿಯಾವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 186 ರನ್ ಗಳಿಸಿ ಕಠಿಣ ಸವಾಲೊಡ್ಡಿತ್ತು. ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಇನ್ನೂ ಒಂದು ಎಸೆತ ಬಾಕಿಯಿರುವಾಗಲೇ 6 ವಿಕೆಟ್‌ಗಳಿಂದ ಜಯಿಸಿತು.
ಅಂತಿಮ ಓವರ್‌ನಲ್ಲಿ 11 ರನ್‌ಗಳು ಬೇಕಿದ್ದವು. ಮೊದಲ ಎಸೆತವನ್ನೇ ಭರ್ಜರಿ ಸಿಕ್ಸರ್ ಆಗಿ ಪರಿವರ್ತಿಸಿ ತಂಡದ ಒತ್ತಡ ಕಡಿಮೆ ಮಾಡಿದ ಕೊಹ್ಲಿ ಎರಡನೇ ಎಸೆತದಲ್ಲಿ ಔಟ್ ಆದರು. ಆಗ ತಂಡಕ್ಕೆ 4 ಎಸೆತಗಳಲ್ಲಿ 6 ರನ್‌ಗಳು ಬೇಕಿದ್ದವು. ಹಾರ್ದಿಕ್ ಪಾಂಡ್ಯ ಬೌಂಡರಿ ಬಾರಿಸುವ ಮೂಲಕ ಫಿನಿಷರ್ ಆಗಿ ಹೊರಹೊಮ್ಮಿದರು.
ಗೆಲುವಿನ ಹೊಡೆತ ಬೌಂಡರಿ ಗೆರೆ ದಾಟುತ್ತಿದ್ದಂತೆಯೇ ಪೆವಿಲಿಯನ್‌ನ ಡಗೌಟ್‌ನಲ್ಲಿ ಅಕ್ಕ–ಪಕ್ಕ ಕುಳಿತಿದ್ದ ವಿರಾಟ್ ಹಾಗೂ ರೋಹಿತ್ ಸಂಭ್ರಮ ಮುಗಿಲುಮುಟ್ಟಿತು. ಕುಳಿತಲ್ಲಿಂದಮೇಲೆದ್ದ ಕೊಹ್ಲಿ ಆತ್ಮೀಯವಾಗಿ ರೋಹಿತ್ ಬೆನ್ನು ತಟ್ಟಿ ಆಲಿಂಗಿಸಿಕೊಂಡರು.
‘ಅಭಿಮಾನಿಗಳ ದೃಷ್ಟಿಯಲ್ಲಿ ಪ್ರತ್ಯೇಕವಾಗಿದ್ದಾರೆ ಎನ್ನಲಾಗಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ದೇಶ ಹಾಗೂ ಟೀಮ್ ಇಂಡಿಯಾದೆಡೆಗಿನ ಪ್ರೀತಿ, ಉತ್ಸಾಹದಿಂದ ಒಗ್ಗೂಡಿದ ಬಗೆ ಇದು’ ಎಂದು ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದಾರೆ.
ಭಾನುವಾರದ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ (69; 36ಎ, 4X5, 6X5) ಹಾಗೂ ವಿರಾಟ್ ಕೊಹ್ಲಿ (63; 48ಎ, 4X3, 6X4) ಮೂರನೇ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 104 ರನ್‌ಗಳಿಂದಾಗಿ ತಂಡದ ಗೆಲುವು ಸಾಧ್ಯವಾಯಿತು. ಹಾರ್ದಿಕ್ ಪಾಂಡ್ಯ (ಔಟಾಗದೆ 25; 16ಎ) ಕೂಡ ಮಹತ್ವದ ಕಾಣಿಕೆ ನೀಡಿದರು.
ಈ ಗೆಲುವಿನೊಂದಿಗೆ, ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದಿರುವ ಸಾಧನೆ ಭಾರತದ್ದಾಗಿದೆ. ಭಾರತ ತಂಡವು ಈ ವರ್ಷ ಒಟ್ಟಾರೆ 21 ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 2021ರಲ್ಲಿ 20 ಟಿ20 ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಕಿಸ್ತಾನ ವಿಶ್ವ ದಾಖಲೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.