ADVERTISEMENT

ಅದೃಷ್ಟ ಶೀಘ್ರವೇ ನಿಮ್ಮತ್ತ ತಿರುಗಲಿದೆ: ವಿರಾಟ್ ಕೊಹ್ಲಿಗೆ ಎದುರಾಳಿ ತಂಡದ ಸಂದೇಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಮೇ 2022, 4:22 IST
Last Updated 15 ಮೇ 2022, 4:22 IST
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ   

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪ್ರಮುಖ ಬ್ಯಾಟರ್‌ ಆಗಿರುವ ವಿರಾಟ್‌ ಕೊಹ್ಲಿ ಇತ್ತೀಚಿನ ದಿನಗಳಲ್ಲಿಸ್ಥಿರ ಪ್ರದರ್ಶನ ತೋರಲು ವಿಫಲವಾಗುತ್ತಿದ್ದಾರೆ. ಇದೀಗ ಅವರಿಗೆ ಪಂಜಾಬ್‌ ಕಿಂಗ್ಸ್‌ ತಂಡ ಶುಭ ಹಾರೈಸಿದೆ.

ಆರ್‌ಸಿಬಿ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಶುಕ್ರವಾರ ಸೆಣಸಾಟ ನಡೆಸಿದ್ದವು. ಈ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಪಂಜಾಬ್‌ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 209 ರನ್ ಗಳಿಸಿತ್ತು.

ಗುರಿ ಬೆನ್ನತ್ತಿದ ಆರ್‌ಸಿಬಿಗೆ 'ಕಿಂಗ್‌' ಕೊಹ್ಲಿ ವೇಗದ ಆರಂಭ ನೀಡಿದ್ದರು. ಬಿರುಸಿನ ಬ್ಯಾಟಿಂಗ್‌ಗೆ ಒತ್ತುಕೊಟ್ಟ ಅವರು 2 ಬೌಂಡರಿ ಮತ್ತು 1 ಸಿಕ್ಸರ್‌ ಸಿಡಿಸಿ ಉತ್ತಮ ಲಯದಲ್ಲಿ ಕಾಣಿಸಿಕೊಂಡರು. ಹೀಗಾಗಿ ಆರ್‌ಸಿಬಿ ಮೊದಲ ಮೂರು ಓವರ್‌ಗಳಲ್ಲಿಯೇ ವಿಕೆಟ್‌ ನಷ್ಟವಿಲ್ಲದೆ 31 ರನ್‌ ಗಳಿಸಿತ್ತು.ಆದರೆ, ಈ ಹಂತದಲ್ಲಿ ಕೊಹ್ಲಿಗೆ ಅದೃಷ್ಟ ಕೈಕೊಟ್ಟಿತು.

ADVERTISEMENT

ಕಗಿಸೊ ರಬಾಡ ಎಸೆದ ಇನಿಂಗ್ಸ್‌ನ 4ನೇ ಓವರ್‌ನ ಮೊದಲ ಎಸೆತದಲ್ಲಿ ಕೊಹ್ಲಿ ಎರಡು ರನ್‌ ಕದ್ದರು. ಎರಡನೇ ಎಸೆತದಲ್ಲಿ ಪುಲ್‌ ಶಾಟ್‌ ಹೊಡೆಯಲು ಯತ್ನಿಸಿದರು. ಚೆಂಡು ವಿರಾಟ್‌ಗ್ಲೌಸ್‌ಗೆ ಸವರಿ, ಥೈ ಪ್ಯಾಡ್‌ಗೆ ಬಡಿದು ಶಾರ್ಟ್‌ ಫೈನ್‌ಲೆಗ್‌ನಲ್ಲಿ ನಿಂತಿದ್ದ ಫೀಲ್ಡರ್‌ ಕೈ ಸೇರಿತು.

ಕಿಂಗ್ಸ್‌ ಪಡೆ, ವಿರಾಟ್‌ ವಿಕೆಟ್‌ಗಾಗಿ ಮನವಿ ಮಾಡಿತಾದರೂ, ಅಂಪೈರ್‌ ಔಟ್‌ ನೀಡಲಿಲ್ಲ. ಆದಾಗ್ಯೂ ನಾಯಕ ಮಯಂಕ್‌ ಅಗರವಾಲ್‌ ಡಿಆರ್‌ಎಸ್‌ ಮೊರೆಹೋದರು. ಚೆಂಡು ವಿರಾಟ್‌ ಗ್ಲೌಸ್‌ ಸವರಿಕೊಂಡು ಹೋಗಿರುವುದು ಸ್ಪಷ್ಟವಾಯಿತು. ಹೀಗಾಗಿ ಆರ್‌ಸಿಬಿಯ ಮಾಜಿ ನಾಯಕನ ಆಟ 20 ರನ್‌ ಗಳಿಗೆ ಅಂತ್ಯವಾಯಿತು.

ನಂತರ, ಆರ್‌ಸಿಬಿ ಪರರಜತ್‌ ಪಟಿದಾರ್‌ (26) ಹಾಗೂ ಗ್ಲೇನ್‌ ಮ್ಯಾಕ್ಸ್‌ವೆಲ್‌ (35) ಹೊರತುಪಡಿಸಿ ಉಳಿದ ಆಟಗಾರರಿಂದ ಉತ್ತಮ ಆಟ ಮೂಡಿಬರಲಿಲ್ಲ. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳನ್ನು ಕಳೆದುಕೊಂಡು 155 ರನ್‌ ಗಳಿಸಿ, 54 ರನ್‌ ಅಂತರದ ಸೋಲೊಪ್ಪಿಕೊಳ್ಳಬೇಕಾಯಿತು.

ವಿರಾಟ್ 'ಹತಾಶೆ'; ವಿಡಿಯೊ ವೈರಲ್‌
ವಿಕೆಟ್‌ ಪತನದ ಬಳಿಕ ಪೆವಿಲಿಯನ್‌ನತ್ತ ಹೆಜ್ಜೆಯಿಟ್ಟ ಕೊಹ್ಲಿ ಆಕಾಶದತ್ತ ಮುಖಮಾಡಿ, ಎರಡೂ ಕೈಗಳನ್ನು ಮೇಲೆತ್ತಿ ಹತಾಶೆಯಿಂದ ಏನನ್ನೋ ಹೇಳುತ್ತಾ ಸಾಗುತ್ತಾರೆ. ಆ ಕ್ಷಣ ಸೆರೆ ಸಿಕ್ಕ ಫೋಟೊ ಹಾಗೂ ವಿಡಿಯೊಗಳು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ.

ಅದೇ ವೇಳೆ ತೆಗೆಯಲಾದ ಚಿತ್ರವೊಂದನ್ನು ಹಂಚಿಕೊಂಡಿರುವ ಪಂಜಾಬ್‌ ಕಿಂಗ್ಸ್‌ ಫ್ರಾಂಚೈಸ್‌ ತನ್ನ ಇನ್‌ಸ್ಟಾಗ್ರಾಂ ಪುಟದಲ್ಲಿ, ನೀವು ಉತ್ತಮ ಲಯದಲ್ಲಿ ಕಂಡುಬಂದದ್ದನ್ನು ನಾವೂ ಸಂಭ್ರಮಿಸಿದ್ದೇವೆ. ಅದೃಷ್ಟ ಶೀಘ್ರವೇ ನಿಮ್ಮತ್ತ ತಿರುಗಲಿದೆ ಎಂದು ಬರೆದುಕೊಂಡಿದೆ.

ವಿರಾಟ್‌ ಕೊಹ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಆಡಿರುವ 13 ಇನಿಂಗ್ಸ್‌ಗಳಿಂದ, ಕೇವಲ 19.66ರ ಸರಾಸರಿಯಲ್ಲಿ 236 ರನ್‌ ಗಳಿಸಿದ್ದಾರೆ. ಒಂದು ಬಾರಿ ಮಾತ್ರವೇ ಅರ್ಧಶತಕ ಗಳಿಸಿದ್ದಾರೆ.

ಆರ್‌ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಪ್ರಬಲ ಗುಜರಾತ್‌ ಟೈಟನ್ಸ್‌ ವಿರುದ್ಧ ಕಣಕ್ಕಿಳಿಯಲಿದ್ದು, ಪ್ಲೇ ಆಫ್‌ ಹಂತಕ್ಕೇರಲು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಈ ಪಂದ್ಯ ಮೇ 19ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.