ADVERTISEMENT

ಭಾರತ ವಿರುದ್ಧ ಸರಣಿಯಲ್ಲಿ ಪುಟಿದೇಳುವ ವಿಶ್ವಾಸ: ಪೂರನ್‌

ಪಿಟಿಐ
Published 2 ಜುಲೈ 2019, 19:29 IST
Last Updated 2 ಜುಲೈ 2019, 19:29 IST
ನಿಕೋಲಸ್‌ ಪೂರನ್‌
ನಿಕೋಲಸ್‌ ಪೂರನ್‌    

ಚೆಸ್ಟರ್‌ ಲಿ ಸ್ಟ್ರೀಟ್‌: ವಿಶ್ವಕಪ್‌ನಲ್ಲಿ ಅಸ್ಥಿರ ಪ್ರದರ್ಶನ ನೀಡಿ ಹೊರಬಿದ್ದಿರುವ ವೆಸ್ಟ್‌ ಇಂಡೀಸ್‌ ತಂಡ, ಮುಂದಿನ ತಿಂಗಳು ಭಾರತ ವಿರುದ್ಧದ ಸರಣಿಯಲ್ಲಿ ಘನತೆಯನ್ನು ಮರಳಿ ಪಡೆಯುವ ಗುರಿ ಹೊಂದಿದೆ ಎಂದು ಯುವ ಬ್ಯಾಟ್ಸ್‌ಮನ್‌ ನಿಕೋಲಸ್‌ ಪೂರನ್‌ ಹೇಳಿದ್ದಾರೆ.

ವಿಶ್ವಕಪ್‌ ಆರಂಭದ ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ಜಯಗಳಿಸಿದ್ದ ವೆಸ್ಟ್‌ ಇಂಡೀಸ್‌ ನಂತರ ಏಳು ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಅಪಘಾನಿಸ್ತಾನ ವಿರುದ್ಧ ಒಂದು ಪಂದ್ಯ ಆಡಲು ಬಾಕಿಯಿದೆ.

ಶ್ರೀಲಂಕಾ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಸೋತರೂ, ಚೊಚ್ಚಲ ಶತಕ (118) ಗಳಿಸಿದ ಪೂರನ್‌, ವಿಶ್ವಕಪ್‌ ಪಂದ್ಯಾವಳಿಯನ್ನು ಕಲಿಕಾ ಪ್ರಕ್ರಿಯೆ ಎಂದು ಭಾವಿಸಿದ್ದಾರೆ.

ADVERTISEMENT

‘ನಮ್ಮದು ಯುವ ಆಟಗಾರರ ತಂಡ. ನನ್ನ ರೀತಿ, ಶಿಮ್ರಾನ್‌ ಹೆಟ್ಮೆಯರ್‌, ಶಾಯ್‌ ಹೋಪ್‌ ಮತ್ತು ಫ್ಯಾಬಿಯನ್‌ ಅಲೆನ್‌ ಕೂಡ ಈ ಟೂರ್ನಿಯಿಂದ ಸಾಕಷ್ಟು ಅನುಭವವಾಗಿದೆ. ಭಾರತ ವಿರುದ್ಧ ಮುಂದಿನ ಸರಣಿ ಆಡುವಾಗ ನಾವು ಸರಿಯಾದ ದಿಕ್ಕಿನಲ್ಲಿ ಸಾಗುವ ಮತ್ತು ವೆಸ್ಟ್‌ ಇಂಡೀಸ್ ಕ್ರಿಕೆಟ್‌ ಹಿರಿಮೆಯನ್ನು ಮರಳಿ ಪಡೆದುಕೊಳ್ಳುವ ವಿಶ್ವಾಸವಿದೆ’ ಎಂದು ಹೇಳಿದರು.

ವೆಸ್ಟ್‌ ಇಂಡೀಸ್‌, ಸೋಮವಾರದ ಪಂದ್ಯವನ್ನು ಅಲ್ಪ ಅಂತರದಿಂದ ಸೋಲುವ ಮೊದಲು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ತಂಡಗಳ ವಿರುದ್ಧವೂ ಹೋರಾಟ ತೋರಿತ್ತು. ಗೆಲುವಿನ ಹೊಸ್ತಿಲಲ್ಲಿದ್ದಾಗ ಎಡವಿಬಿದ್ದಿತ್ತು.

‘ಶ್ರೀಲಂಕಾ ವಿರುದ್ಧ ಪಂದ್ಯವನ್ನು ನಾನು ಮತ್ತು ಫ್ಯಾಬಿಯನ್‌ ಅಲೆನ್‌ ನಿಯಂತ್ರಿಸಿದ್ದೆವು. ಬೌಲರ್‌ಗಳು ಪರದಾಡುತ್ತಿದ್ದರು. ರನ್‌ಗಳು ಹರಿದುಬರುತ್ತಿದ್ದವು. ಅಲೆನ್‌ ರನ್‌ಔಟ್‌ ಆಗಿದ್ದು ದುರದೃಷ್ಟಕರ. ನನಗೆ ನಿರಾಶೆಯಾಯಿತು’ ಎಂದು ಪೂರನ್‌ ಹೇಳಿದರು. ಲಾರಾ ಜೊತೆಗೆ ತಮ್ಮನ್ನು ಹೋಲಿಸುತ್ತಿರುವುದು ಅವರಿಗೆ ಖುಷಿ ತಂದಿದೆ.

ಭಾರತ ತಂಡದ ವೆಸ್ಟ್‌ ಇಂಡೀಸ್‌ ಪ್ರವಾಸ ಆಗಸ್ಟ್‌ 3ರಂದು ಆರಂಭವಾಗಲಿದೆ. ಅಲ್ಲಿ ಮೂರು ಟಿ–20 ಪಂದ್ಯ, ಮೂರು ಏಕದಿನ ಪಂದ್ಯ, ಎರಡು ಪಂದ್ಯಗಳ ಟೆಸ್ಟ್ ಸರಣಿ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.