ADVERTISEMENT

‘ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌’ ಲೋಗೊ ಧರಿಸಲಿರುವ ವಿಂಡೀಸ್‌ ಆಟಗಾರರು

ವರ್ಣಭೇದ ನೀತಿಯ ವಿರುದ್ಧ ಪ್ರತಿಭಟನೆಯ ಉದ್ದೇಶ

ಪಿಟಿಐ
Published 29 ಜೂನ್ 2020, 7:17 IST
Last Updated 29 ಜೂನ್ 2020, 7:17 IST
ಜೇಸನ್‌ ಹೋಲ್ಡರ್‌–ರಾಯಿಟರ್ಸ್‌ ಚಿತ್ರ
ಜೇಸನ್‌ ಹೋಲ್ಡರ್‌–ರಾಯಿಟರ್ಸ್‌ ಚಿತ್ರ   

ಮ್ಯಾಂಚೆಸ್ಟರ್‌: ವೆಸ್ಟ್‌ ಇಂಡೀಸ್‌ ಆಟಗಾರರು ಇಂಗ್ಲೆಂಡ್‌ ವಿರುದ್ಧದ ಕ್ರಿಕೆಟ್‌ ಸರಣಿಯಲ್ಲಿ ‘ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌’ ಲೋಗೊ ಧರಿಸಿ ಕಣಕ್ಕಿಳಿಯಲಿದ್ದಾರೆ. ಕ್ರೀಡೆಯಲ್ಲಿರುವ ವರ್ಣಭೇದ ನೀತಿಯ ವಿರುದ್ಧ ಪ್ರತಿಭಟನಾರ್ಥವಾಗಿ ಅವರು ತಮ್ಮ ಜೆರ್ಸಿಯ ಕೊರಳಪಟ್ಟಿಯ ಮೇಲೆ ಈ ಲೋಗೊ ಧರಿಸಲಿದ್ದಾರೆ.

ಅಮೆರಿಕದಲ್ಲಿ ಆಫ್ರೊ ಅಮೆರಿಕನ್‌ ಸಮುದಾಯದ ಜಾರ್ಜ್‌ ಫ್ಲಾಯ್ಡ್‌ ಅವರ ಸಾವಿನ ಬಳಿಕ ವಿಶ್ವದಾದ್ಯಂತ ವರ್ಣಭೇದ ನೀತಿಯ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ‘ಕಪ್ಪು ಬಣ್ಣದವರ ಜೀವಗಳಿಗೂ ಬೆಲೆಯಿದೆ’ (ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌) ಹೆಸರಿನಲ್ಲಿ ನಡೆಯುತ್ತಿರುವ ಅಭಿಯಾನಕ್ಕೆ ವೆಸ್ಟ್‌ ಇಂಡೀಸ್‌ ತಂಡದ ನಾಯಕ ಜೇಸನ್‌ ಹೋಲ್ಡರ್‌ ಅವರೂ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಭಾನುವಾರ ಮಾತನಾಡಿರುವ ಹೋಲ್ಡರ್‌ ‘ನಾವು ಈಗ ಒಗ್ಗಟ್ಟು ಪ್ರದರ್ಶಿಸಬೇಕಿದೆ. ವರ್ಣಭೇದ ನೀತಿಯ ವಿರುದ್ಧ ಜಾಗೃತಿ ಮೂಡಿಸಬೇಕಿದೆ’ ಎಂದಿದ್ದಾರೆ.

ADVERTISEMENT

ಅಲಿಶಾ ಹೊಸನ್ನಾ ಎಂಬುವವರು ವಿನ್ಯಾಸಗೊಳಿಸಿರುವ ಈ ಲೋಗೊ ಬಳಸಲು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಸಮ್ಮತಿಸಿದೆ. ಈ ತಿಂಗಳ ಆರಂಭದಲ್ಲಿ ಕ್ರೀಡಾ ಚಟುವಟಿಕೆಗಳು ಪುನರಾರಂಭವಾದಾಗ ಎಲ್ಲ 20 ಪ್ರೀಮಿಯರ್‌ ಲೀಗ್‌ ಫುಟ್‌ಬಾಲ್‌ ಕ್ಲಬ್‌ ಆಟಗಾರರ ಜೆರ್ಸಿಗಳಲ್ಲಿ ಇಂಥದ್ದೇ ಲೋಗೊ ಕಾಣಿಸಿಕೊಂಡಿತ್ತು.

‘ಕ್ರಿಕೆಟ್‌ ಇತಿಹಾಸದಲ್ಲಿ ಹಾಗೂ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ನಲ್ಲಿ ಇದೊಂದು ಪ್ರಮುಖ ಕ್ಷಣ. ವಿಸ್ಡನ್‌ ಟ್ರೋಫಿಯನ್ನು ಮರಳಿ ಪಡೆಯಲು ನಾವು ಇಂಗ್ಲೆಂಡ್‌ಗೆ ಬಂದಿದ್ದೇವೆ. ಆದರೆ ಜಗತ್ತಿನ ವಿದ್ಯಮಾನಗಳು ಹಾಗೂ ನ್ಯಾಯ, ಸಮಾನತೆಗಾಗಿ ನಡೆಯುತ್ತಿರುವ ಹೋರಾಟದ ಕುರಿತು ಅರಿವಿದೆ’ ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೊ ಸುದ್ದಿಸಂಸ್ಥೆಗೆ ಹೋಲ್ಡರ್‌ ತಿಳಿಸಿದ್ದಾರೆ.

‘ಕೂಲಂಕಷವಾಗಿ ಚರ್ಚಿಸಿದ ಬಳಿಕವೇ ಸರಣಿಯ ವೇಳೆ ಲೋಗೊ ಧರಿಸುವ ನಿರ್ಧಾರಕ್ಕೆ ಬಂದಿದ್ದೇವೆ.ಸಮಾನ ಹಕ್ಕುಗಳನ್ನು ಹೊಂದಲು ನಾವು ಕೆಲವು ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ ಮತ್ತು ಚರ್ಮದ ಬಣ್ಣ ಅಥವಾ ಜನಾಂಗೀಯ ಹಿನ್ನೆಲೆಯಿಂದಾಗಿ ಜನರನ್ನು ತಾರತಮ್ಯ ದೃಷ್ಟಿಯಿಂದ ನೋಡಬಾರದು’ ಎಂದು ಹೋಲ್ಡರ್‌ ನುಡಿದರು.

ವೆಸ್ಟ್‌ ಇಂಡೀಸ್‌ ಆಟಗಾರರು ಅಭ್ಯಾಸ ಪಂದ್ಯದಿಂದಲೇ ಈ ಲೋಗೊ ಧರಿಸಿ ಆಡುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.