ರವಿ ಶಾಸ್ತ್ರಿ ಮತ್ತು ಸುನಿಲ್ ಗವಾಸ್ಕರ್
ಸಿಡ್ನಿ: ಇಲ್ಲಿ ಆರಂಭವಾದ ಬಾರ್ಡರ್–ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಫೈನಲ್ ಪಂದ್ಯದಿಂದ ವಿಶ್ರಾಂತಿ ಪಡೆದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ದಿಟ್ಟ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್ ಮತ್ತು ರವಿಶಾಸ್ತ್ರಿ ಬಾಕ್ಸಿಂಗ್ ಡೇ ಟೆಸ್ಟ್ ರೋಹಿತ್ ಶರ್ಮಾ ಅವರ ವೃತ್ತಿ ಜೀವನದ ಅಂತಿಮ ಟೆಸ್ಟ್ ಪಂದ್ಯವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸರಣಿಯ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಡಿರುವ ಅವರು, ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 31 ರನ್ ಗಳಿಸಿ ಕಳಪೆ ಫಾರ್ಮ್‌ನಲ್ಲಿ ಬಳಲುತ್ತಿದ್ದಾರೆ.
‘ಭಾರತವು ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯದಿದ್ದರೆ, ಮೆಲ್ಬರ್ನ್ ಟೆಸ್ಟ್ ರೋಹಿತ್ ಶರ್ಮಾ ಅವರ ಕೊನೆಯ ಪಂದ್ಯವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ’ಎಂದು ಗವಾಸ್ಕರ್ ಸಿಡ್ನಿ ಟೆಸ್ಟ್‌ನ ಮೊದಲ ದಿನದಾಟದ ಭೋಜನ ವಿರಾಮದ ಸಮಯದಲ್ಲಿ ಹೇಳಿದ್ದಾರೆ.
‘ಮುಂದಿನ ಡಬ್ಲ್ಯುಟಿಸಿ ಆವೃತ್ತಿಯ ಪಂದ್ಯಗಳು ಇಂಗ್ಲೆಂಡ್ ಸರಣಿಯೊಂದಿಗೆ ಪ್ರಾರಂಭವಾಗುತ್ತವೆ. 2027ರಲ್ಲಿ ಫೈನಲ್ ನಡೆಯುತ್ತದೆ. ಭಾರತವು ಅಲ್ಲಿಗೆ ಬರುತ್ತದೋ ಇಲ್ಲವೋ ಎಂಬುದು ಬೇರೆಯದ್ದೇ ವಿಷಯ, ಆದರೆ ಅಲ್ಲಿಯವರಗೆ ಆಡಬಲ್ಲವರನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಸಮಿತಿಯು ನಿರ್ಧಾರಗಳನ್ನು ಮಾಡುವ ಸಾಧ್ಯತೆಯಿದೆ. ಹಾಗಾಗಿ, ರೋಹಿತ್ ಶರ್ಮಾ ಅವರಿಗೆ ಮೆಲ್ಬರ್ನ್ ಪಂದ್ಯ ಕೊನೆಯ ಟೆಸ್ಟ್ ಆಗಿರಬಹುದು’ಎಂದಿದ್ದಾರೆ.
ಇದೇ ರೀತಿಯ ಮಾತುಗಳನ್ನಾಡಿರುವ ರವಿಶಾಸ್ತ್ರಿ, ಈ ಸರಣಿ ಬಳಿಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ಕಾಲು ಹೊರಗಿಡುವ ಸಾಧ್ಯತೆ ಇದೆ. ಪಂದ್ಯದಿಂದ ಹೊರಗಿರಲು ರೋಹಿತ್ ಶರ್ಮಾ ಸ್ವಯಂ ನಿರ್ಧಾರ ಮಾಡಿದ್ದಾರೆ ಎಂದು ನಾನು ಕೇಳುವುದಕ್ಕೂ ಮುನ್ನವೇ ಟಾಸ್ ಸಂದರ್ಭ ಬೂಮ್ರಾ ಹೇಳಿರುವುದಾಗಿ ಶಾಸ್ತ್ರಿ ತಿಳಿಸಿದ್ದಾರೆ. ಅಲ್ಲದೆ, ಗಿಲ್ ಆಡಿದರೆ ತಂಡ ಬಲಿಷ್ಠವಾಗಿರುತ್ತದೆ ಎಂದು ರೋಹಿತ್ ಅಭಿಪ್ರಾಯಪಟ್ಟಿದ್ದಾರೆ ಎಂಬುದಾಗಿ ಶಾಸ್ತ್ರಿ ಹೇಳಿದ್ದಾರೆ.
‘ನೀವು ಕಳಪೆ ಫಾರ್ಮ್‌ನಲ್ಲಿದ್ದಾಗ, ಮಾನಸಿಕವಾಗಿ ಕುಸಿದಿದ್ದಾಗ ಇಂತಹ ನಿರ್ಧಾರಗಳು ಆಗುತ್ತವೆ. ಈ ಪಂದ್ಯದಲ್ಲಿ ಹೊರಗಿರಲು ನಿರ್ಧರಿಸಿದ್ದೇನೆ ಎಂಬುದು ನಾಯಕನ ಅತ್ಯಂತ ಧೈರ್ಯಶಾಲಿ ನಿರ್ಧಾರವಾಗಿದೆ’ ಎಂದಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ರೋಹಿತ್, ಕಳೆದ 8 ಪಂದ್ಯಗಳಲ್ಲಿ ಎರಡು ಬಾರಿ ಮಾತ್ರ 20ರ ಗಡಿ ದಾಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.