ಆಸ್ಟ್ರೇಲಿಯಾ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಸಂಭ್ರಮ
ಪಿಟಿಐ ಚಿತ್ರ
ಕಿಂಗ್ಸ್‌ಟನ್, ಜಮೈಕಾ: ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರ ಬಿರುಗಾಳಿ ವೇಗದ ದಾಳಿಗೆ ಆತಿಥೇಯ ವೆಸ್ಟ್ ಇಂಡೀಸ್ ತರಗೆಲೆಯಂತೆ ಹಾರಿಹೋಯಿತು. ಕೇವಲ 27 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಹೀನಾಯ ಸೋಲಿಗೆ ಶರಣಾಯಿತು.
ಸಬಿನಾ ಪಾರ್ಕ್‌ನಲ್ಲಿ ಸೋಮವಾರ ತಡರಾತ್ರಿ ಮುಕ್ತಾಯವಾದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 176 ರನ್‌ಗಳ ಭಾರಿ ಜಯ ಸಾಧಿಸಿತು. ಹೊನಲು ಬೆಳಕಿನ ಪಂದ್ಯದಲ್ಲಿ 204 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ವಿಂಡೀಸ್ ತಂಡದಲ್ಲಿ ಎರಡಂಕಿ ಸ್ಕೋರ್ ಮಾಡಿದ್ದು ಜಸ್ಟಿನ್ ಗ್ರೀವ್ಸ್ (11; 24ಎ) ಅವರೊಬ್ಬರೇ. ಏಳು ಬ್ಯಾಟರ್‌ಗಳು ಸೊನ್ನೆ ಸುತ್ತಿದರು. ಕೇವಲ 14.3 ಓವರ್‌ಗಳಲ್ಲಿ ಆತಿಥೇಯರ ಇನಿಂಗ್ಸ್‌ಗೆ ತೆರೆ ಬಿತ್ತು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಕನಿಷ್ಠ ಇನಿಂಗ್ಸ್ ಮೊತ್ತವನ್ನು ವೆಸ್ಟ್ ಇಂಡೀಸ್ ದಾಖಲಿಸಿತು.
ಆಸ್ಟ್ರೇಲಿಯಾ ತಂಡವು ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿತು.
ಸ್ಟಾರ್ಕ್ (7.3–4–9–6) ಮತ್ತು ಹ್ಯಾಟ್ರಿಕ್ ಸಾಧಿಸಿದ ಸ್ಕಾಟ್ ಬೊಲ್ಯಾಂಡ್ (2–1–2–3) ಅವರ ದಾಳಿಯ ಮುಂದೆ ವಿಂಡೀಸ್ ಬ್ಯಾಟರ್‌ಗಳ ಆಟ ನಡೆಯಲಿಲ್ಲ.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: 70.3 ಓವರ್‌ಗಳಲ್ಲಿ 225. ವೆಸ್ಟ್ ಇಂಡೀಸ್: 52.1 ಓವರ್‌ಗಳಲ್ಲಿ 143, ಎರಡನೇ ಇನಿಂಗ್ಸ್: ಆಸ್ಟ್ರೇಲಿಯಾ: 37 ಓವರ್‌ಗಳಲ್ಲಿ 121 (ಅಲ್ಝರಿ ಜೋಸೆಫ್ 27ಕ್ಕೆ5, ಶಾಮರ್ ಜೋಸೆಫ್ 34ಕ್ಕೆ4) ವೆಸ್ಟ್ ಇಂಡೀಸ್: 14.3 ಓವರ್‌ಗಳಲ್ಲಿ 27 (ಜಸ್ಟಿನ್ ಗ್ರೀವ್ಸ್ 11, ಮಿಚೆಲ್ ಸ್ಟಾರ್ಕ್ 9ಕ್ಕೆ6, ಸ್ಕಾಟ್ ಬೊಲ್ಯಾಂಡ್ 2ಕ್ಕೆ3) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 176 ರನ್ ಜಯ. ಪಂದ್ಯಶ್ರೇಷ್ಠ: ಮಿಚೆಲ್ ಸ್ಟಾರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.