ADVERTISEMENT

ಪದಾರ್ಪಣೆ ಪಂದ್ಯದಲ್ಲಿ ಕೈಲ್ ದ್ವಿಶತಕ: ಬೃಹತ್ ಗುರಿ ಗೆದ್ದ ವೆಸ್ಟ್ ಇಂಡೀಸ್‌

ಮೊದಲ ಟೆಸ್ಟ್: ಬೃಹತ್ ಗುರಿ ಬೆನ್ನತ್ತಿ ಗೆದ್ದ ವೆಸ್ಟ್ ಇಂಡೀಸ್‌

ಏಜೆನ್ಸೀಸ್
Published 7 ಫೆಬ್ರುವರಿ 2021, 15:26 IST
Last Updated 7 ಫೆಬ್ರುವರಿ 2021, 15:26 IST
ಕೈಲ್ ಮಯರ್ಸ್ ಬ್ಯಾಟಿಂಗ್ ವೈಖರಿ–ಎಎಫ್‌ಪಿ ಚಿತ್ರ
ಕೈಲ್ ಮಯರ್ಸ್ ಬ್ಯಾಟಿಂಗ್ ವೈಖರಿ–ಎಎಫ್‌ಪಿ ಚಿತ್ರ   

ಚಿತ್ತಗಾಂವ್‌:ಕೈಲ್ ಮಯರ್ಸ್ ಅವರು ಪದಾರ್ಪಣೆ ಟೆಸ್ಟ್‌ನ ನಾಲ್ಕನೇ ಇನಿಂಗ್ಸ್‌ನಲ್ಲಿ ದ್ವಿಶತಕ (ಔಟಾಗದೆ 210, 310 ಎಸೆತ, 20 ಬೌಂಡರಿ, 7 ಸಿಕ್ಸರ್‌) ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡರು. ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ವೆಸ್ಟ್ ಇಂಡೀಸ್‌ ತಂಡವು ಭಾನುವಾರ ಕೊನೆಗೊಂಡ ಬಾಂಗ್ಲಾದೇಶ ತಂಡದ ಎದುರಿನ ಮೊದಲ ಪಂದ್ಯವನ್ನು ಮೂರು ವಿಕೆಟ್‌ಗಳಿಂದ ಗೆದ್ದುಕೊಂಡಿತು.

395 ರನ್‌ಗಳ ಗುರಿ ಬೆನ್ನತ್ತಿದ ವೆಸ್ಸ್ ಇಂಡೀಸ್‌, ಐದನೇ ದಿನದಾಟವಾದ ಭಾನುವಾರ ಏಳು ವಿಕೆಟ್‌ ಕಳೆದುಕೊಂಡು ಜಯಭೇರಿ ಮೊಳಗಿಸಿತು. ಟೆಸ್ಟ್ ಮಾದರಿಯಲ್ಲಿ ಇದು ಐದನೇ ಗರಿಷ್ಠ ರನ್‌ ಚೇಸಿಂಗ್ ಆಗಿದೆ.

ಮೊದಲ ಇನಿಂಗ್ಸ್‌ನಲ್ಲಿ 40 ರನ್‌ ಗಳಿಸಿದ್ದ ಕೈಲ್‌ ಒಟ್ಟಾರೆ 250 ರನ್‌ ಕಲೆಹಾಕುವ ಮೂಲಕ, ಪದಾರ್ಪಣೆ ಪಂದ್ಯದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ವೆಸ್ಸ್ ಇಂಡೀಸ್‌ನ ಎರಡನೇ ಆಟಗಾರ ಎನಿಸಿಕೊಂಡರು.

ADVERTISEMENT

ಇದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಮತ್ತೊಬ್ಬ ಆಟಗಾರ ಕ್ರುಮಾ ಬೊನ್ನರ್‌ (86) ಜೊತೆ ಕೈಲ್‌ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 216 ರನ್‌ ಪೇರಿಸಿದರು.

ಬಾಂಗ್ಲಾ ತಂಡದ ಆಫ್‌ಸ್ಪಿನ್ನರ್‌ ಮಹದಿ ಹಸನ್‌ (113ಕ್ಕೆ 4) ಹಾಗೂ ತೈಜುಲ್ ಇಸ್ಲಾಂ (91ಕ್ಕೆ 2) ಬೌಲಿಂಗ್‌ನಲ್ಲಿ ಮಿಂಚಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಬಾಂಗ್ಲಾದೇಶ: 430: ವೆಸ್ಟ್ ಇಂಡೀಸ್: 96.1 ಓವರ್‌ಗಳಲ್ಲಿ 259: ಎರಡನೇ ಇನಿಂಗ್ಸ್: ಬಾಂಗ್ಲಾದೇಶ: 67.5 ಓವರ್‌ಗಳಲ್ಲಿ 8 ವಿಕೆಟ್‌ಗೆ 223 ಡಿಕ್ಲೇರ್ಡ್‌: ವೆಸ್ಟ್ ಇಂಡೀಸ್‌: 127.3 ಓವರ್‌ಗಳಲ್ಲಿ 7 ವಿಕೆಟ್‌ಗೆ 395 (ಕೈಲ್ ಮಯರ್ಸ್‌ ಔಟಾಗದೆ 210, ಕುಮ್ರಾ ಬೊನ್ನರ್‌ 86, ಜಾನ್‌ ಕ್ಯಾಂಪ್‌ಬೆಲ್‌ 23, ಕ್ರೇಗ್ ಬ್ರಾಥ್‌ವೇಟ್‌ 20; ಮಹದಿ ಹಸನ್‌ 113ಕ್ಕೆ 4, ತೈಜುಲ್ ಇಸ್ಲಾಂ 91ಕ್ಕೆ 2). ಫಲಿತಾಂಶ: ವೆಸ್ಟ್ ಇಂಡೀಸ್ ತಂಡಕ್ಕೆ ಮೂರು ವಿಕೆಟ್‌ಗಳ ಗೆಲುವು. ಪಂದ್ಯಶ್ರೇಷ್ಠ: ಕೈಲ್ ಮಯರ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.