ADVERTISEMENT

ಮಹಿಳಾ ಕ್ರಿಕೆಟ್ ರ‍್ಯಾಂಕಿಂಗ್: ಸ್ಮೃತಿ, ಯಾಷ್ಟಿಕಾಗೆ ಬಡ್ತಿ; ಮಿಥಾಲಿಗೆ ನಿರಾಸೆ

ಪಿಟಿಐ
Published 23 ಮಾರ್ಚ್ 2022, 15:22 IST
Last Updated 23 ಮಾರ್ಚ್ 2022, 15:22 IST
ಸ್ಮೃತಿ ಮಂದಾನ –ಎಎಫ್‌ಪಿ ಚಿತ್ರ
ಸ್ಮೃತಿ ಮಂದಾನ –ಎಎಫ್‌ಪಿ ಚಿತ್ರ   

ದುಬೈ: ಭಾರತದ ಸ್ಮೃತಿ ಮಂದಾನ ಮತ್ತು ಯಾಷ್ಟಿಕಾ ಭಾಟಿಯಾ ಅವರು ಐಸಿಸಿ ಮಹಿಳೆಯರ ಏಕದಿನ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿದ್ದಾರೆ. ನಾಯಕಿ ಮಿಥಾಲಿ ರಾಜ್ ನಿರಾಸೆಗೆ ಒಳಗಾಗಿದ್ದಾರೆ. ಸ್ಮೃತಿ ಮತ್ತು ಯಾಷ್ಟಿಕಾ ಕ್ರಮವಾಗಿ 10 ಹಾಗೂ 39ನೇ ಸ್ಥಾನದಲ್ಲಿದ್ದು ಮಿಥಾಲಿ ರಾಜ್ 8ನೇ ಸ್ಥಾನಕ್ಕೆ ಕುಸಿದಿದ್ದಾರೆ.

ವಿಶ್ವಕಪ್‌ ಟೂರ್ನಿಯ ಮೂರು ಪಂದ್ಯಗಳಲ್ಲಿ ಕ್ರಮವಾಗಿ 35, 10 ಮತ್ತು 30 ರನ್ ಗಳಿಸಿರುವ ಸ್ಮೃತಿ ಒಂದು ಸ್ಥಾನದ ಬಡ್ತಿ ಗಳಿಸಿದ್ದಾರೆ. ಈ ಮೂಲಕ ಅಗ್ರ 10ರೊಳಗೆ ಸ್ಥಾನ ಗಳಿಸಿದ್ದಾರೆ. ‌ಎಡಗೈ ಬ್ಯಾಟರ್ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ವಿರುದ್ಧ ಅರ್ಧಶತಕ ಗಳಿಸಿ 8 ಸ್ಥಾನಗಳ ಬಡ್ತಿ ಹೊಂದಿದ್ದಾರೆ.

ಹಿಂದಿನ ಎರಡು ವಾರಗಳಲ್ಲಿ ಒಟ್ಟು ಐದು ಸ್ಥಾನಗಳ ಕುಸಿತ ಕಂಡಿದ್ದ ಮಿಥಾಲಿ ಈಗ ಮತ್ತೊಂದು ಸ್ಥಾನ ಕಳೆದುಕೊಂಡಿದ್ದು ನ್ಯೂಜಿಲೆಂಡ್‌ನ ಆ್ಯಮಿ ಸಟೆರ್ಥ್‌ವೇಟ್ ಜೊತೆ ಸ್ಥಾನ ಹಂಚಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ಅಲಿಸಾ ಹೀಲಿ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಎರಡನೇ ಸ್ಥಾನದಲ್ಲಿರುವ ಬೇತ್ ಮೂನಿ,ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ ಮತ್ತು ರಚೆಲ್ ಹೇನ್ಸ್ ಅವರು ಅಲಿಸಾ ಸನಿಯದಲ್ಲಿದ್ದು ತೀವ್ರ ಸ್ಪರ್ಧೆಯೊಡ್ಡಿದ್ದಾರೆ.

ಪೂಜಾಗೆ 13 ಸ್ಥಾನಗಳ ಬಡ್ತಿ

ಬೌಲಿಂಗ್ ವಿಭಾಗದಲ್ಲಿ ಭಾರತದ ಪೂಜಾ ವಸ್ತ್ರಕರ್ 13 ಸ್ಥಾನಗಳ ಬಡ್ತಿಯೊಂದಿಗೆ 56ನೇ ಸ್ಥಾನದಲ್ಲಿದ್ದಾರೆ. ಜೂಲನ್ ಗೋಸ್ವಾಮಿ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ದೀಪ್ತಿ ಶರ್ಮಾ ಕುಸಿತ ಕಂಡಿದ್ದು ಏಳನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.