ADVERTISEMENT

ಮಹಿಳಾ ವಿಶ್ವಕಪ್‌: ಭಾರತಕ್ಕೆ ಪಾಕ್ ಮೊದಲ ಎದುರಾಳಿ

ಪಿಟಿಐ
Published 15 ಡಿಸೆಂಬರ್ 2021, 21:54 IST
Last Updated 15 ಡಿಸೆಂಬರ್ 2021, 21:54 IST
   

ದುಬೈ: ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಎದುರಿಸಲಿದೆ.

ಮೊದಲ ದಿನವಾದ ಮಾರ್ಚ್ 4ರಂದು ಆತಿಥೇಯ ನ್ಯೂಜಿಲೆಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸೆಣಸಲಿದೆ. ಭಾರತ–ಪಾಕಿಸ್ತಾನ ಹಣಾಹಣಿ ಮಾರ್ಚ್ 6ರಂದು ನಡೆಯಲಿದೆ.

31 ದಿನಗಳಲ್ಲಿ ಒಟ್ಟು 31 ಪಂದ್ಯಗಳು ನಡೆಯಲಿದ್ದು ಪ್ರಶಸ್ತಿಗಾಗಿ 8 ತಂಡಗಳು ಸೆಣಸಲಿವೆ. ಆಕ್ಲೆಂಡ್‌, ಕ್ರೈಸ್ಟ್‌ ಚರ್ಚ್‌, ಡ್ಯುನೆಡಿನ್, ಹ್ಯಾಮಿಲ್ಟನ್‌, ತೌರಂಗ ಮತ್ತು ವೆಲಿಂಗ್ಟನ್‌ನಲ್ಲಿ ಪಂದ್ಯಗಳು ನಡೆಯಲಿವೆ.

ADVERTISEMENT

2017ರಿಂದ 2020ರ ವರೆಗೆ ನಡೆದ ಐಸಿಸಿ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ ಗಳಿಸಿದ ಸ್ಥಾನಗಳ ಆಧಾರದಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಅರ್ಹತೆ ಗಳಿಸಿವೆ.

ಆತಿಥೇಯ ನ್ಯೂಜಿಲೆಂಡ್ ನೇರವಾಗಿ ಆಯ್ಕೆಯಾಗಿದೆ.

ಕೋವಿಡ್ ಕಾರಣದಿಂದ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳನ್ನು ರದ್ದು ಮಾಡಿದ್ದರಿಂದಾಗಿ ರ‍್ಯಾಂಕಿಂಗ್ ಆಧಾರದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳು ಅರ್ಹತೆ ಗಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.