ವಿಶಾಖಪಟ್ಟಣ: ಈ ಹಿಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಹಿನ್ನಡೆ ಅನುಭವಿಸಿದ ಭಾರತ ತಂಡ ತಂತ್ರಗಾರಿಕೆಯಲ್ಲಿ ಬದಲಾವಣೆ ತರುವ ಅನಿವಾರ್ಯತೆ ಎದುರಾಗಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಭಾನುವಾರ ಇಲ್ಲಿ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಹೆಚ್ಚುವರಿ ಬೌಲರ್ ಆಡಿಸುವುದು ಇದರಲ್ಲಿ ಸೇರಿದೆ. ಜೊತೆಗೆ ತಂಡದ ಪ್ರಮುಖ ಬ್ಯಾಟರ್‌ಗಳೂ ಲಯ ಕಂಡುಕೊಳ್ಳಬೇಕಿದೆ.
ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಐದು ಬೌಲರ್‌ಗಳನ್ನಿಟ್ಟುಕೊಂಡು ತಂಡ ಆಡಿತ್ತು. ಸಾಂದರ್ಭಿಕ ಬೌಲರ್ ಆಗಿ ನಾಯಕಿ ಹರ್ಮನ್‌ಪ್ರೀತ್ ಕೌರ್ ದಾಳಿಗಿಳಿದಿದ್ದರು ಕೂಡ. ಆದರೆ 40ನೇ ಓವರಿನ ನಂತರ ಹರಿಣಗಳ ಪಡೆ ಭಾರತದ ಅನುಭವಿ ಬೌಲರ್‌ಗಳ ಮೇಲೆ ಸವಾರಿ ನಡೆಸಿ ಏಳು ಎಸೆತಗಳ ಮೊದಲೇ ಜಯಗಳಿಸಿತ್ತು. ವೇಗದ ಬೌಲರ್‌ಗಳಾದ ಕ್ರಾಂತಿ ಗೌಡ್ ಮತ್ತು ಅಮನ್ಜೋತ್ 12 ಎಸೆತಗಳಲ್ಲಿ (47, 49ನೇ ಓವರಿನಲ್ಲಿ) 30 ರನ್ ಬಿಟ್ಟುಕೊಟ್ಟರು. ಮೂವರು ಸ್ಪಿನ್ನರ್‌ಗಳು (ದೀಪ್ತಿ, ಸ್ನೇಹ ರಾಣಾ, ಶ್ರೀಚರಣಿ) ಆ ಪಂದ್ಯದಲ್ಲಿ ಆಡಿದ್ದರು.
ಆಸ್ಟ್ರೇಲಿಯಾದ ಬ್ಯಾಟಿಂಗ್ ಬಲಾಢ್ಯವಾಗಿದೆ. ಎಸಿಎ– ವಿಡಿಸಿಎ ಪಿಚ್‌ನಲ್ಲಿ ಬೆತ್ ಮೂನಿ, ಆಶ್ಲೆ ಗಾರ್ಡನರ್, ಅಲಿಸಾ ಹೀಲಿ, ಎಲಿಸ್ ಪೆರಿ ಅಂಥ ಬಿರುಸಿನ ಬ್ಯಾಟರ್‌ಗಳನ್ನು ನಿಭಾಯಿಸುವುದು ಸುಲಭವಲ್ಲ.
ಕೆಳಕ್ರಮಾಂಕದಲ್ಲಿ ಉಪಯುಕ್ತ ಸಹ ಬ್ಯಾಟರ್ ಆಗಿರುವ ಎಡಗೈ ಸ್ಪಿನ್ನರ್ ರಾಧಾ ಯಾದವ್ ಒಂದು ಆಯ್ಕೆಯಾಗಬಹುದು. ಹರ್ಲೀನ್ ಡಿಯೋಲ್ ಅವರನ್ನು ಬದಲಿಸಲೂ ಯೋಚಿಸಬಹುದು.
ಪರದಾಟ:
ಭಾರತದ ಅಗ್ರ ಆಟಗಾರ್ತಿಯರಾದ ಸ್ಮೃತಿ ಮಂದಾನ, ಹರ್ಮನ್‌ಪ್ರೀತ್ ಕೌರ್, ಜೆಮಿಮಾ ಫೆರ್ನಾಂಡಿಸ್ ಅವರಿಂದ ಉತ್ತಮ ಕಾಣಿಕೆ ಬರಬೇಕಾಗಿದೆ. ಈ ಮೂವರೂ ಶ್ರೀಲಂಕಾ, ಪಾಕಿಸ್ತಾನ ತಂಡಗಳ ವಿರುದ್ಧ ಪರದಾಡಿದ್ದರು. ಆಸ್ಟ್ರೇಲಿಯಾ ವಿರುದ್ಧ ಇವರು ಮತ್ತೆ ವಿಫಲರಾದಲ್ಲಿ ಅಪಾಯ ಆಹ್ವಾನಿಸಿದಂತೆ. ಈ ಟೂರ್ನಿಗೆ ಮೊದಲು ಅಬ್ಬರಿಸಿದ್ದ ಮಂದಾನ ಇಲ್ಲಿ 3 ಪಂದ್ಯಗಳಿಂದ 54 ರನ್ ಮಾತ್ರ ಗಳಿಸಿದ್ದಾರೆ. ಆದರೆ ಆಸ್ಟ್ರೇಲಿಯಾ ವಿರುದ್ಧ ಅವರ ದಾಖಲೆ ಉತ್ತಮವಾಗಿರುವುದು ಸಮಾಧಾನದ ಅಂಶ.
ಪಂದ್ಯ ಆರಂಭ: ಮಧ್ಯಾಹ್ನ 3.00
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.