ADVERTISEMENT

ಮಹಿಳೆಯರ ತ್ರಿಕೋನ ಟ್ವೆಂಟಿ–20 ಕ್ರಿಕೆಟ್‌ ಸರಣಿ: ಭಾರತದ ಬೌಲರ್‌ಗಳ ಮಿಂಚು

ಶುಭಾರಂಭ ಮಾಡಿದ ಹರ್ಮನ್‌ಪ್ರೀತ್‌ ಪಡೆ

ಪಿಟಿಐ
Published 31 ಜನವರಿ 2020, 19:30 IST
Last Updated 31 ಜನವರಿ 2020, 19:30 IST
ರಾಜೇಶ್ವರಿ ಗಾಯಕವಾಡ್‌
ರಾಜೇಶ್ವರಿ ಗಾಯಕವಾಡ್‌   

ಕ್ಯಾನ್‌ಬೆರಾ: ರಾಜೇಶ್ವರಿ ಗಾಯಕವಾಡ್‌ (19ಕ್ಕೆ2), ಶಿಖಾ ಪಾಂಡೆ (33ಕ್ಕೆ2) ಮತ್ತು ದೀಪ್ತಿ ಶರ್ಮಾ (30ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಭಾರತ ಮಹಿಳಾ ತಂಡ ತ್ರಿಕೋನ ಟ್ವೆಂಟಿ–20 ಕ್ರಿಕೆಟ್‌ ಸರಣಿಯಲ್ಲಿ ಶುಭಾರಂಭ ಮಾಡಿದೆ.

ಮನುಕಾ ಓವಕ್‌ ಮೈದಾನದಲ್ಲಿ ಶುಕ್ರವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ತಂಡ 5 ವಿಕೆಟ್‌ಗಳಿಂದ ಇಂಗ್ಲೆಂಡ್‌ ತಂಡವನ್ನು ಪರಾಭವಗೊಳಿಸಿದೆ.

ಮೊದಲು ಬ್ಯಾಟ್‌ ಮಾಡಿದ ಹೀಥರ್‌ ನೈಟ್‌ ನೇತೃತ್ವದ ಇಂಗ್ಲೆಂಡ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 147ರನ್‌ ಕಲೆಹಾಕಿತು. ಭಾರತದ ಬೌಲರ್‌ಗಳ ಎದುರು ಪರದಾಡಿದ ಈ ತಂಡ 10 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 59ರನ್‌ ಗಳಿಸಿತ್ತು.

ADVERTISEMENT

ನಾಯಕಿ ಹೀಥರ್‌ (67; 44ಎ, 8ಬೌಂ, 2ಸಿ) ಮತ್ತು ಟಾಮಿ ಬ್ಯೂಮೊಂಟ್‌ (37; 27ಎ, 4ಬೌಂ, 1ಸಿ) ಅವರು ಉತ್ತಮ ಆಟ ಆಡಿ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು.

ಭಾರತ ತಂಡವು 19.3 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ಭಾರತ ಕೂಡ ಆರಂಭಿಕ ಆಘಾತ ಕಂಡಿತ್ತು. ಶಫಾಲಿ ವರ್ಮಾ (30; 25ಎ, 4ಬೌಂ) ಮತ್ತು ಜೆಮಿಮಾ ರಾಡ್ರಿಗಸ್‌ (26; 20ಎ, 4ಬೌಂ) ಅವರು ತಂಡಕ್ಕೆ ಆಸರೆಯಾದರು.

ಬಳಿಕ ನಾಯಕಿ ಹರ್ಮನ್‌ಪ್ರೀತ್‌ (ಔಟಾಗದೆ 42; 34ಎ, 5ಬೌಂ, 1ಸಿ) ಸ್ಫೋಟಕ ಆಟ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌; 20 ಓವರ್‌ಗಳಲ್ಲಿ 7 ವಿಕೆಟ್‌ಗೆ 147 (ನಟಾಲಿಯಾ ಶೀವರ್‌ 20, ಹೀಥರ್‌ ನೈಟ್‌ 67, ಟಾಮಿ ಬ್ಯೂಮೊಂಟ್‌ 37; ರಾಜೇಶ್ವರಿ ಗಾಯಕವಾಡ್‌ 19ಕ್ಕೆ2, ಶಿಖಾ ಪಾಂಡೆ 33ಕ್ಕೆ2, ರಾಧಾ ಯಾದವ್‌ 33ಕ್ಕೆ1, ದೀಪ್ತಿ ಶರ್ಮಾ 30ಕ್ಕೆ2).

ಭಾರತ: 19.3 ಓವರ್‌ಗಳಲ್ಲಿ 5 ವಿಕೆಟ್‌ಗೆ 150 (ಶಫಾಲಿ ವರ್ಮಾ 30, ಸ್ಮೃತಿ ಮಂದಾನ 15, ಜೆಮಿಮಾ ರಾಡ್ರಿಗಸ್‌ 26, ಹರ್ಮನ್‌ಪ್ರೀತ್‌ ಕೌರ್‌ ಔಟಾಗದೆ 42, ತಾನಿಯಾ ಭಾಟಿಯಾ 11, ದೀಪ್ತಿ ಶರ್ಮಾ ಔಟಾಗದೆ 12; ಸೋಫಿ ಎಕ್ಸಲೆಸ್ಟೋನ್‌ 24ಕ್ಕೆ1, ಕ್ಯಾಥರಿನ್‌ ಬ್ರುಂಟ್‌ 33ಕ್ಕೆ2, ನಟಾಲಿಯಾ ಶೀವರ್‌ 34ಕ್ಕೆ1, ಹೀಥರ್‌ ನೈಟ್‌ 20ಕ್ಕೆ1).

ಫಲಿತಾಂಶ: ಭಾರತ ತಂಡಕ್ಕೆ 5 ವಿಕೆಟ್‌ ಗೆಲುವು. ಪಂದ್ಯಶ್ರೇಷ್ಠ: ಹೀಥರ್‌ ನೈಟ್‌.

ಭಾರತದ ಮುಂದಿನ ಪಂದ್ಯ: ಫೆಬ್ರುವರಿ 2ಕ್ಕೆ ಆಸ್ಟ್ರೇಲಿಯಾ ವಿರುದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.