ADVERTISEMENT

ವಿಶ್ವಕಪ್ ಕ್ರಿಕೆಟ್ | ತವರು ತಂಡದ ನಾಯಕತ್ವ ಆನಂದಿಸುವೆ: ಹರ್ಮನ್‌ಪ್ರೀತ್ ಕೌರ್

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 14:24 IST
Last Updated 26 ಸೆಪ್ಟೆಂಬರ್ 2025, 14:24 IST
<div class="paragraphs"><p>ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದ ಐಸಿಸಿ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ತಂಡಗಳ ನಾಯಕಿಯ (ಎಡದಿಂದ); ಹರ್ಮನ್‌ ಪ್ರೀತ್ ಕೌರ್ (ಭಾರತ), ಅಲಿಸಾ ಹೀಲಿ (ಆಸ್ಟ್ರೇಲಿಯಾ), ನ್ಯಾಟ್ ಸಿವರ್ ಬ್ರಂಟ್ (ಇಂಗ್ಲೆಂಡ್) ಮತ್ತು ಸೋಫಿ ಡಿವೈನ್ (ನ್ಯೂಜಿಲೆಂಡ್)&nbsp; </p></div>

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದ ಐಸಿಸಿ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ತಂಡಗಳ ನಾಯಕಿಯ (ಎಡದಿಂದ); ಹರ್ಮನ್‌ ಪ್ರೀತ್ ಕೌರ್ (ಭಾರತ), ಅಲಿಸಾ ಹೀಲಿ (ಆಸ್ಟ್ರೇಲಿಯಾ), ನ್ಯಾಟ್ ಸಿವರ್ ಬ್ರಂಟ್ (ಇಂಗ್ಲೆಂಡ್) ಮತ್ತು ಸೋಫಿ ಡಿವೈನ್ (ನ್ಯೂಜಿಲೆಂಡ್) 

   

ಬೆಂಗಳೂರು: ಹನ್ನೆರಡು ವರ್ಷಗಳ ನಂತರ ಭಾರತವು ಐಸಿಸಿ ಏಕದಿನ ಕ್ರಿಕೆಟ್ ಮಹಿಳಾ ವಿಶ್ವಕಪ್ ಟೂರ್ನಿಯನ್ನು ಆಯೋಜಿಸುತ್ತಿದೆ. ಇದರಿಂದಾಗಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡದ ಮೇಲೆ ನಿರೀಕ್ಷೆಯ ಭಾರವೇ ಇದೆ. ಚೊಚ್ಚಲ ಪ್ರಶಸ್ತಿ ಗೆಲುವಿನ ಕನಸು ಗರಿಗೆದರಿದೆ. ಇನ್ನೊಂದೆಡೆ ಇದು ಭಾರತ ತಂಡದ ಆಟಗಾರ್ತಿಯರ ಮೇಲೆ ಒತ್ತಡ ಹೆಚ್ಚಿಸಿದೆಯೇ?

‘ಒತ್ತಡಕ್ಕೆ ಒಳಗಾಗುವುದನ್ನು ತಪ್ಪಿಸಿಕೊಂಡು ಟೂರ್ನಿಯ ಪ್ರತಿಯೊಂದು ಕ್ಷಣವನ್ನೂ ಆಸ್ವಾದಿಸುತ್ತೇವೆ. ಎಲ್ಲವನ್ನೂ ಕಲಿಕೆ ಮತ್ತು ಬೆಳವಣಿಗೆಯ ಭಾಗವಾಗಿ ಸ್ವೀಕರಿಸುತ್ತೇವೆ’ ಎಂದು ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹೇಳಿದರು. 

ADVERTISEMENT

ಗುವಾಹಟಿಯಲ್ಲಿ  ಇದೇ 30ರಂದು ಆರಂಭವಾಗುವ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ಎದುರು ಕಣಕ್ಕಿಳಿಯಲಿದೆ. ಲಂಕಾ ಕ್ರಿಕೆಟ್‌ ಮಂಡಳಿಯು ಟೂರ್ನಿಯ ಜಂಟಿ ಆತಿಥ್ಯ ವಹಿಸಿದೆ.

‘ದೇಶದ ತಂಡವನ್ನು ಮುನ್ನಡೆಸುವುದು ವಿಶೇಷವಾದ ಸಂಗತಿ. ಆದರೆ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಂಡದ ನಾಯಕತ್ವ ವಹಿಸುವುದು  ಇನ್ನೂ ಹೆಮ್ಮೆಯ ವಿಷಯ. ಅದರಲ್ಲೂ ತವರಿನಲ್ಲಿ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು, ಅಭಿಮಾನಿಗಳ ಮುಂದೆ ಆಡುವ ಅನುಭವವೇ ಚೆಂದ’ ಎಂದು ಹರ್ಮನ್  ಶುಕ್ರವಾರ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಆಯೋಜಿಸಿದ್ದ ಎಲ್ಲ ತಂಡಗಳ ನಾಯಕಿಯರ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

‘ನಾನು ಕ್ರಿಕೆಟ್ ಆಡಲು ಆರಂಭಿಸಿದ ಸಂದರ್ಭದಲ್ಲಿ ಇಷ್ಟು ದೊಡ್ಡ ಟೂರ್ನಿಯವರೆಗೂ ಬೆಳೆಯುತ್ತೇನೆ ಎಂದು ಊಹಿಸಿರಲೂ ಇಲ್ಲ. ದೇಶದ ತಂಡದಲ್ಲಿ ಆಡಲು ಅವಕಾಶ ಸಿಗಬಹುದು ಅಂದುಕೊಂಡಿರಲೂ ಇಲ್ಲ. ಆದರೆ ಇವತ್ತು ದೇಶದ ತಂಡದ ನಾಯಕತ್ವ ವಹಿಸುತ್ತಿರುವುದು ಖುಷಿಯ ಸಂಗತಿ’ ಎಂದರು. 

ಭಾರತ ತಂಡವು ಅಕ್ಟೋಬರ್ 5ರಂದು ಕೊಲಂಬೊದಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. 

ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯದಲ್ಲಿ ಆಟಗಾರರ ನಡುವೆ ಮಾತಿನ ಚಕಮಕಿ ಮತ್ತು ಕೆಲವು ಪ್ರಚೋದನಾತ್ಮಕ ಸಂಭ್ರಮಾಚರಣೆಗಳು ನಡೆದವು. ಇವು ವಿವಾದದ ತಿರುವು ಪಡೆದವು. 

ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರ್ಮನ್, ‘ಮೈದಾನದಲ್ಲಿ ಕ್ರಿಕೆಟ್ ಆಡುವುದಷ್ಟೇ ನಮ್ಮ ನಿಯಂತ್ರಣದಲ್ಲಿರುವ ಸಂಗತಿ. ಅದರ ಆಚೆ ನಾವು ಏನೂ ಯೋಚಿಸುವುದಿಲ್ಲ ಮತ್ತು ಅಂತಹ ವಿಷಯ ಕುರಿತು ಮಾತನಾಡುವುದೂ ಇಲ್ಲ. ನಮ್ಮ ಕೈಯಲ್ಲಿರುವುದನ್ನಷ್ಟೇ ನಿಯಂತ್ರಿಸುವುದು ನಮಗೆ ಸಾಧ್ಯ. ಅಂತಹ ಸಂಗತಿಗಳನ್ನು ಡ್ರೆಸಿಂಗ್ ಕೋಣೆಯಲ್ಲಿಯೂ ಮಾತನಾಡುವುದಿಲ್ಲ. ಯಾವ ವಿಷಯದ ಮೇಲೆ ನಮಗೆ ನಿಯಂತ್ರಣವಿಲ್ಲವೋ ಅಂತಹದರ ಕುರಿತು ಯೋಚಿಸುವುದೂ ಇಲ್ಲ’ ಎಂದರು.  

ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ನಾಯಕಿಯರು ಮಾತ್ರ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ತಂಡಗಳ ನಾಯಕಿಯರು ಕೊಲಂಬೊದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಹಾಜರಿದ್ದರು. 

ತವರಿನಂಗಳದಲ್ಲಿ ಆಡುತ್ತಿರುವುದು ಅತ್ಮವಿಶ್ವಾಸ ಹೆಚ್ಚಿಸಿದೆ. ಸ್ಥಳೀಯ ಅಭಿಮಾನಿಗಳ ಪ್ರೋತ್ಸಾಹ ಮತ್ತು ಆ ಚೈತನ್ಯಯುತ ವಾತಾವರಣವು ನಮಗೆ ಅಗತ್ಯವಾಗಿದ.ಎ ಕಳೆದ ಏಷ್ಯಾ ಕಪ್ ಸಂದರ್ಭದಲ್ಲಿ ನಮಗೆ ಇಂತಹದೇ ವಾತಾವರಣದಿಂದ ಅನುಕೂಲವಾಗಿತ್ತು. 
ಚಾಮರಿ ಅಟಪಟ್ಟು ಶ್ರೀಲಂಕಾ ತಂಡದ ನಾಯಕಿ
ಪ್ರಶಸ್ತಿ  ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಈ ವಿಶ್ವಕಪ್‌ನಲ್ಲಿ ಕಣಕ್ಕಿಳಿಯುತ್ತಿರುವ ಪ್ರತಿ ತಂಡವೂ ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ಹೊಂದಿವೆ. ಈ ಟೂರ್ನಿಯಲ್ಲಿ ಪ್ರತಿ ತಂಡದ ಎದುರು ಮೇಲುಗೈ ಸಾಧಿಸಿದರೆ ಮಾತ್ರ ಕಪ್ ಉಳಿಸಿಕೊಳ್ಳಲು ಸಾಧ್ಯ ಎಂಬುದು ನಮಗೆ ಅರಿವು ಇದೆ.
ಅಲೀಸಾ ಹೀಲಿ  ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ನಾಯಕಿ
ನಮ್ಮ ತಂಡದಲ್ಲಿರುವ ಯುವ ಆಟಗಾರ್ತಿಯರು ಹಾಗೂ ಅನುಭವಿಗಳ ಹೊಂದಾಣಿಕೆ ಉತ್ತಮವಾಗಿದೆ. ಈ ಟೂರ್ನಿಯಲ್ಲಿ ಉತ್ಕೃಷ್ಟ ದರ್ಜೆಯ ಕ್ರಿಕೆಟ್ ನಡೆಯಲಿದ್ದು ನಮ್ಮ ತಂಡದ ಯುವ ಮತ್ತು ಅನುಭವಿಗಳು ಇದನ್ನು ಸಮರ್ಥವಾಗಿ ನಿಭಾಯಿಸಬಲ್ಲರು. 
ನ್ಯಾಟ್‌ ಸಿವರ್ ಬ್ರಂಟ್ ಇಂಗ್ಲೆಂಡ್ ತಂಡದ ನಾಯಕಿ
ವಿಶ್ವಕಪ್ ಜಯಿಸಲೆಂದೇ ನಾವು ಇಲ್ಲಿಗೆ ಬಂದಿದ್ದೇವೆ. ಸಂಪೂರ್ಣವಾಗಿ ಉತ್ತಮವಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಜಾಗತಿಕವಾಗಿ ಮಹಿಳಾ ಕ್ರಿಕೆಟ್‌ ಬೆಳವಣಿಗೆಗೆ ಸಿಗುತ್ತಿರುವು ಪ್ರೋತ್ಸಾಹವು ಉತ್ತಮವಾಗಿದೆ. ಭಾರತದಲ್ಲಿ ಕ್ರಿಕೆಟ್ ಆಡುವುದು ಒಂದು ವಿಶಿಷ್ಟ ಅನುಭವ.  
ಸೋಫಿ ಡಿವೈನ್ ನ್ಯೂಜಿಲೆಂಡ್ ತಂಡದ ನಾಯಕಿ
ಕೊಲಂಬೊದಲ್ಲಿ ಪಂದ್ಯಗಳನ್ನು ಆಡುತ್ತಿರುವುದು ನಮಗೆ ಹೆಚ್ಚು ಅನುಕೂಲಕರವಾಗಿದೆ. ನಮ್ಮ ಎಲ್ಲ ಪಂದ್ಯಗಳೂ ಒಂದೇ ತಾಣದಲ್ಲಿ ನಡೆಯುತ್ತಿವೆ. ಉತ್ತಮ ಪ್ರದರ್ಶನ ನೀಡಲು ನಮಗೆ ಸಾಧ್ಯವಾಗಲಿದೆ.
ಫಾತಿಮಾ ಸನಾ  ಪಾಕ್ ತಂಡದ ನಾಯಕಿ
ನಮ್ಮ ತಂಡಕ್ಕೆ ಇದು ಎರಡನೇ ವಿಶ್ವಕಪ್ ಟೂರ್ನಿ. ಅಂತರರಾಷ್ಟ್ರೀಯ ವೇದಿಕೆ ಮತ್ತು ದೊಡ್ಡಮಟ್ಟದ ಪಂದ್ಯಗಳಲ್ಲಿ ಆಡಿ ಗೆಲ್ಲುವ ಅನುಭವ ನಮಗೆ ಇದಕ್ಕೂ ಮುನ್ನ ಇರಲಿಲ್ಲ. ಕಳೆದ ಒಂದೆರಡು ವರ್ಷಗಳಲ್ಲಿ ತವರು ಮತ್ತು ವಿದೇಶಿ ನೆಲದಲ್ಲಿ ಬಹಳಷ್ಟು ಪಂದ್ಯಗಳನ್ನು ಆಡಿರುವ ಅನುಭವ ನಮಗಾಗಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ.
ನಿಜಾರ್ ಸುಲ್ತಾನಾ  ಬಾಂಗ್ಲಾ ತಂಡದ ನಾಯಕಿ
ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಪ್ರತಿ ತಂಡವೂ ಬಲಿಷ್ಠವಾಗಿದೆ. ಅದರಲ್ಲೂ ಉಪಖಂಡದ ಬಳಗಗಳು ತಮ್ಮ ಎದುರಾಳಿಗಳಿಗೆ ಕಠಿಣ ಸವಾಲೊಡ್ಡಲಿವೆ. ಆದ್ದರಿಂದ ನಮ್ಮ ತಂಡವು ಒಂದೊಂದೇ ಮೆಟ್ಟಿಲನ್ನು ಹತ್ತುತ್ತ ಸಾಗಲಿದ್ದೇವೆ. 
ಲಾರಾ ವೊಲ್ವಾರ್ಡ್ಟ್  ದ.ಆಫ್ರಿಕಾ ನಾಯಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.