ADVERTISEMENT

WPL 2025 | UPW vs DCW: ಹೆನ್ರಿ ಮಿಂಚಿನಾಟಕ್ಕೆ ಒಲಿದ ಜಯ

ಗಿರೀಶದೊಡ್ಡಮನಿ
Published 22 ಫೆಬ್ರುವರಿ 2025, 17:39 IST
Last Updated 22 ಫೆಬ್ರುವರಿ 2025, 17:39 IST
<div class="paragraphs"><p>ಚಿನೆಲ್ಲೆ ಹೆನ್ರಿ</p></div>

ಚಿನೆಲ್ಲೆ ಹೆನ್ರಿ

   

(ಚಿತ್ರ ಕೃಪೆ: X/@wplt20)

ಬೆಂಗಳೂರು: ಎಂಟು ಸಿಕ್ಸರ್ ಸಿಡಿಸಿದ ಚೈನೆಲ್ ಹೆನ್ರಿ ಅವರು ಗಳಿಸಿದ ದಾಖಲೆ ವೇಗದ ಅರ್ಧಶತಕದ ಬಲದಿಂದ ಯು.ಪಿ ವಾರಿಯರ್ಸ್ ತಂಡವು ಶನಿವಾರ ಇಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಜಯಿಸಿತು.

ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವಾರಿಯರ್ಸ್ ತಂಡವು 33 ರನ್‌ಗಳಿಂದ ಜಯಿಸಿತು.

ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಎಂಟನೇ ಕ್ರಮಾಂಕದ ಬ್ಯಾಟರ್ ಹೆನ್ರಿ (62; 23ಎಸೆತ) ಹೊಡೆದ ಅರ್ಧಶತಕದ ಬಲದಿಂದ ವಾರಿಯರ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 177 ರನ್ ಗಳಿಸಿತು. ಹೆನ್ರಿ ಅವರು ಕೇವಲ 18 ಎಸೆತಗಳಲ್ಲಿ 50 ರನ್‌ ಗಳಿಸಿದರು. ಇದರೊಂದಿಗೆ 2023ರಲ್ಲಿ ಗುಜರಾತ್ ಜೈಂಟ್ಸ್ ತಂಡದ ಸೋಫಿಯಾ ಡಂಕ್ಲಿ ಅವರು ಹೊಡೆದಿದ್ದ ಅರ್ಧಶತಕವನ್ನು ಸರಿಗಟ್ಟಿದರು.

ಹೆನ್ರಿ ಅವರು ಕ್ರೀಸ್‌ಗೆ ಬರುವ ಮುನ್ನ ವಾರಿಯರ್ಸ್ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಆತಂಕದಲ್ಲಿತ್ತು. ಡೆಲ್ಲಿ ತಂಡದ ಜೆಸ್ ಜೊನಾಸೆನ್ (31ಕ್ಕೆ4) ಅವರ ಬೌಲಿಂಗ್ ಬಲದಿಂದ 89 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ತಂಡದ ಮೊತ್ತ ಶತಕದ ಗಡಿ ದಾಟುವುದೂ ಅನುಮಾನವಾಗಿತ್ತು. ಆಗ ಕ್ರೀಸ್‌ಗೆ ಬಂದ ವೆಸ್ಟ್ ಇಂಡೀಸ್‌ನ ವೇಗದ ಬೌಲರ್ ಹೆನ್ರಿ ಬೌಲರ್‌ಗಳ ಬೆವರಳಿಸಿದರು. ಅದುವರೆಗೂ ಉತ್ತಮ ಲೈನ್, ಲೆಂಗ್ತ್ ಮೂಲಕ ಮೆರೆದಾಡಿದ್ದ ಬೌಲರ್‌ಗಳು ಹೆನ್ರಿ ಆಟಕ್ಕೆ ಬಸವಳಿದರು. 269.57ರ ಸ್ಟ್ರೈಕ್‌ರೇಟ್‌ನಲ್ಲಿ ಅವರು ರನ್‌ ಸೂರೆ ಮಾಡಿದರು. ಅವರಿಗೆ ಸೋಫಿ ಎಕ್ಸೆಲ್‌ಸ್ಟೋನ್ (12; 8ಎ) ಜೊತೆ ನೀಡಿದರು. 8ನೇ ವಿಕೆಟ್ ಜೊತೆಯಾಟದಲ್ಲಿ 57 ರನ್ ಸೇರಿಸಿದರು.

ಇದರಿಂದಾಗಿ ವಾರಿಯರ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 177 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಜೆಮಿಮಾ ರಾಡ್ರಿಗಸ್ (56; 35ಎ, 4X8, 6X1) ಅವರು ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ, ವಾರಿಯರ್ಸ್ ತಂಡದ ಕ್ರಾಂತಿ ಗೌಡ್ ಮತ್ತು ಗ್ರೇಸ್ ಹ್ಯಾರಿಸ್ ಅವರು ತಲಾ 4 ವಿಕೆಟ್ ಗಳಿಸಿದರು. ಇದರಿಂದಾಗಿ ಡೆಲ್ಲಿ ತಂಡವು 19.3 ಓರ್‌ಗಳಲ್ಲಿ 144 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.

ಸಂಕ್ಷಿಪ್ತ ಸ್ಕೋರು:

ಯುಪಿ ವಾರಿಯರ್ಸ್: 20 ಓವರ್‌ಗಳಲ್ಲಿ 9ಕ್ಕೆ177 (ತಹಿಲಿಯಾ ಮೆಕ್‌ಗ್ರಾ 24, ಚೈನೆಲ್‌ ಹೆನ್ರಿ 62, ಸೋಫಿ ಎಕ್ಸೆಲೆಸ್ಟೋನ್‌ 12, ಕಿರಣ್ ನವಿಗೆರೆ 17, ಮೆರಿಝೈನ್ ಕಾಪ್ 18ಕ್ಕೆ2, ಅರುಂಧತಿ ರೆಡ್ಡಿ 52ಕ್ಕೆ2, ಜೆಸ್ ಜೊನಾಸೆನ್ 31ಕ್ಕೆ4)

ಡೆಲ್ಲಿ ಕ್ಯಾಪಿಟಲ್ಸ್: 19.3 ಓವರ್‌ಗಳಲ್ಲಿ 144 (ಶಫಾಲಿ ವರ್ಮಾ 24, ಜೆಮಿಮಾ ರಾಡ್ರಿಗಸ್ 56, ನಿಕಿ ಪ್ರಸಾಧ್ 18, ಶಿಖಾ ಪಾಂಡೆ ಔಟಾಗದೆ 15, ಕ್ರಾಂತಿ ಗೌಡ್ 25ಕ್ಕೆ4, ಗ್ರೇಸ್ ಹ್ಯಾರಿಸ್ 15ಕ್ಕೆ4)

ಫಲಿತಾಂಶ: ಯು.ಪಿ. ವಾರಿಯರ್ಸ್‌ಗೆ 33 ರನ್‌ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.