ಯುಪಿ ವಾರಿಯರ್ಸ್ ತಂಡದ ನಾಯಕಿ ದೀಪ್ತಿ ಶರ್ಮಾ ಬ್ಯಾಟಿಂಗ್ ವೈಖರಿ
–ಪಿಟಿಐ ಚಿತ್ರ
ವಡೋದರ: ಬೌಲಿಂಗ್ ನಂತರ, ಬ್ಯಾಟಿಂಗ್‌ನಲ್ಲೂ ಸಾಂಘಿಕ ಪ್ರದರ್ಶನ ನೀಡಿದ ಗುಜರಾತ್ ಜೈಂಟ್ಸ್ ತಂಡ, ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಭಾನುವಾರ ಯುಪಿ ವಾರಿಯರ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು. ಆ ಮೂಲಕ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿಗೆ ಸೋತಿದ್ದ ಆತಿಥೇಯರು ಗೆಲುವಿನ ಹಳಿಗೆ ಮರಳಿದರು.
ಕೋತಂಬಿ ಕ್ರೀಡಾಂಗಣದಲ್ಲಿ ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ವಾರಿಯರ್ಸ್ ತಂಡ ತನ್ನ ಪಾಲಿನ ಓವರುಗಳಲ್ಲಿ 9 ವಿಕೆಟ್‌ಗೆ 143 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ಲೆಗ್ ಸ್ಪಿನ್ನರ್ ಪ್ರಿಯಾ ಮಿಶ್ರಾ 3 ವಿಕೆಟ್ ಗಳಿಸಿದರೆ, ಆಶ್ಲೆ ಗಾರ್ಡನರ್ ಮತ್ತು ದಿಯಾಂಡ್ರಾ ಡಾಟಿನ್ ತಲಾ ಎರಡು ವಿಕೆಟ್ ಪಡೆದರು.
ಈ ಮೊತ್ತ ಬೆನ್ನಟ್ಟಿದ ಜೈಂಟ್ಸ್ ತಂಡ 18 ಓವರುಗಳಲ್ಲಿ 4 ವಿಕೆಟ್ ನಷ್ಟದಲ್ಲಿ 144 ರನ್ ಹೊಡೆಯಿತು. 34 ರನ್ನಿಗೆ 2 ವಿಕೆಟ್ ಪಡೆದಿದ್ದ ಗಾರ್ಡನರ್ ಬ್ಯಾಟಿಂಗ್‌ನಲ್ಲೂ ಮಿಂಚಿ ಲಗುಬಗನೇ 52 ರನ್ (32 ಎ, 4x5, 6x3) ಹೊಡೆದು ಆರಂಭದಲ್ಲೇ ಕುಸಿದ ತಂಡಕ್ಕೆ ಚೈತನ್ಯ ತುಂಬಿದರು.
ಬೆತ್ ಮೂನಿ (0) ಮತ್ತು ದಯಾಳನ್ ಹೇಮಲತಾ (0) ಅವರನ್ನು ಬರೇ ಎರಡು ರನ್‌ಗಳಾಗಿದ್ದಾಗ ಕಳೆದುಕೊಂಡಿದ್ದ ಜೈಂಟ್ಸ್ ತಂಡವನ್ನು ಆರಂಭ ಆಟಗಾರ್ತಿ ಲಾರಾ ವೋಲ್ವಾರ್ಟ್ (22) ಅವರೊಡನೆ ಗಾರ್ಡನರ್ ಅಪಾಯದಿಂದ ಪಾರು ಮಾಡಿ ಮೂರನೇ ವಿಕೆಟ್‌ಗೆ 55 ರನ್ ಪೇರಿಸಿದರು. ಮೊತ್ತ 86 ಆಗಿದ್ದಾಗ ಗಾರ್ಡನರ್ ನಿರ್ಗಮಿಸಿದರೂ, ಹರ್ಲಿನ್ ಡಿಯೋಲ್ (ಔಟಾಗದೇ 34, 30ಎ) ಮತ್ತು ಡಿಯಾಂಡ್ರ ಡಾಟಿನ್ (ಔಟಾಗದೇ 33, 18ಎ, 4x3, 6x2) ಮುರಿಯದ ಐದನೇ ವಿಕೆಟ್‌ಗೆ 58 ರನ್ ಸೇರಿಸಿ ಎರಡು ಓವರುಗಳಿರುವಂತೆ ತಂಡವನ್ನು ದಡ ಸೇರಿಸಿದರು.
ಇದಕ್ಕೆ ಮೊದಲು ಯುವ ಸ್ಪಿನ್ನರ್ ಪ್ರಿಯಾ ಮಿಶ್ರಾ (25ಕ್ಕೆ3) ನೇತೃತ್ವದಲ್ಲಿ ಜೈಂಟ್ಸ್ ಬೌಲರ್‌ಗಳು ಎದುರಾಳಿಯನ್ನು ಕಟ್ಟಿಹಾಕಿದ್ದರು. ವಾರಿಯರ್ಸ್ ನಾಯಕಿ ದೀಪ್ತಿ (39, 27ಎ) ಮತ್ತು ಉಮಾ ಚೆಟ್ರಿ (24) ಬಿಟ್ಟರೆ ಉಳಿದವರು ವಿಫಲರಾದರು. ಇವರಿಬ್ಬರು ಮೂರನೇ ವಿಕೆಟ್‌ಗೆ 44 ಎಸೆತಗಳಲ್ಲಿ 51 ರನ್ ಸೇರಿಸಿದ್ದು ಬಿಟ್ಟರೆ ಯುಪಿ ಇನಿಂಗ್ಸ್‌ನಲ್ಲಿ ಹೇಳಿಕೊಳ್ಳುವುದೇನೂ ಇರಲಿಲ್ಲ.
ಯುಪಿ ವಾರಿಯರ್ಸ್: 20 ಓವರುಗಳಲ್ಲಿ 9 ವಿಕೆಟ್‌ಗೆ 143 (ಉಮಾ ಚೆಟ್ರಿ 24, ದೀಪ್ತಿ ಶರ್ಮಾ 39; ದಿಯಾಂಡ್ರಾ ಡಾಟಿನ್ 34ಕ್ಕೆ2, ಆಶ್ಲೆ ಗಾರ್ಡನರ್ 39ಕ್ಕೆ2, ಪ್ರಿಯಾ ಮಿಶ್ರಾ 25ಕ್ಕೆ3)
ಗುಜರಾತ್ ಜೈಂಟ್ಸ್: 18 ಓವರುಗಳಲ್ಲಿ 4 ವಿಕೆಟ್‌ಗೆ 143 (ಲಾರಾ ವೊಲ್ವಾರ್ಟ್ 22, ಆಶ್ಲೆ ಗಾರ್ಡನರ್ 52, ಹರ್ಲಿನ್ ಡಿಯೋಲ್ ಔಟಾಗದೇ 34, ದಿಯಾಂಡ್ರ ಡಾಟಿನ್ ಔಟಾಗದೇ 33; ಸೋಫಿ ಎಕ್ಲೆಸ್ಟೋನ್ 16ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.