ADVERTISEMENT

WPL 2025 | ಹರ್ಮನ್‌ಪ್ರೀತ್ ಕೌರ್ ಅಬ್ಬರ: ಮುಂಬೈಗೆ ಮಣಿದ ಗುಜರಾತ್‌ ಜೈಂಟ್ಸ್‌

ಪಿಟಿಐ
Published 10 ಮಾರ್ಚ್ 2025, 20:49 IST
Last Updated 10 ಮಾರ್ಚ್ 2025, 20:49 IST
<div class="paragraphs"><p>ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ </p></div>

ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್

   

–ಪಿಟಿಐ ಚಿತ್ರ

ಮುಂಬೈ: ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅರ್ಧಶತಕ (54; 33ಎ, 4X9)ಮತ್ತು ಬೌಲರ್‌ಗಳ ಪರಿಣಾಮಕಾರಿ ದಾಳಿಯ ನೆರವಿನಿಂದ ಮುಂಬೈ ಇಂಡಿಯನ್ಸ್‌ ತಂಡವು ಸೋಮವಾರ ಮಹಿಳಾ ಪ್ರೀಮಿಯರ್‌ ಲೀಗ್‌ನ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ತಂಡವನ್ನು 9 ರನ್‌ಗಳಿಂದ ಮಣಿಸಿತು.

ADVERTISEMENT

ಈ ಗೆಲುವಿನೊಂದಿಗೆ ಮುಂಬೈ ತಂಡವು 10 ಅಂಕಗಳೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿತು. ಅಷ್ಟೇ ಅಂಕ ಗಳಿಸಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಉತ್ತಮ ರನ್‌ರೇಟ್‌ ಆಧಾರದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಜೈಂಟ್ಸ್‌ ಮೂರನೇ ಸ್ಥಾನದಲ್ಲಿದೆ.

ಅಗ್ರಸ್ಥಾನ ಪಡೆಯುವ ತಂಡವು ಫೈನಲ್‌ಗೆ ನೇರ ಅರ್ಹತೆ ಪಡೆಯಲಿದೆ. ಮುಂಬೈ ಇಂಡಿಯನ್ಸ್‌ ತಂಡವು ಮಂಗಳವಾರ ನಡೆಯುವ ಲೀಗ್‌ನ ಕೊನೆಯ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಪಂದ್ಯವನ್ನು ಗೆದ್ದು ಅಗ್ರಸ್ಥಾನ ಪಡೆಯುವ ಅವಕಾಶ ಮುಂಬೈ ತಂಡದ ಮುಂದಿದೆ. ಎರಡು ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳು ಪ್ಲೇ ಆಫ್‌ನಲ್ಲಿ ಸೆಣಸಲಿವೆ.

ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೌರ್ ಅವರ ಬ್ಯಾಟಿಂಗ್‌ ನೆರವಿನಿಂದ ಮುಂಬೈ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 179 ರನ್ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಜೈಂಟ್ಸ್‌ ತಂಡವು 20 ಓವರ್‌ಗಳಲ್ಲಿ 170 ರನ್‌ ಗಳಿಸಿ ಹೋರಾಟ ಮುಗಿಸಿತು.

ಮುಂಬೈ ಬೌಲರ್‌ಗಳ ದಾಳಿಗೆ ಜೈಂಟ್ಸ್ ತಂಡವು ಆರಂಭದಲ್ಲೇ ತತ್ತರಿಸಿತು. 54 ರನ್‌ಗೆ ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಹಂತದಲ್ಲಿ ಭಾರತಿ ಫುಲ್ಮಾಲಿ (61;25ಎ) ಅಬ್ಬರಿಸಿ ತಂಡಕ್ಕೆ ಕೊಂಚ ಚೇತರಿಕೆ ನೀಡಿದರೂ ಗೆಲುವಿಗೆ ಸಾಕಾಗಲಿಲ್ಲ. ಅವರ ಇನಿಂಗ್ಸ್‌ ಎಂಟು ಬೌಂಡರಿ ಮತ್ತು ನಾಲ್ಕು ಭರ್ಜರಿ ಸಿಕ್ಸರ್‌ ಒಳಗೊಂಡಿತ್ತು. ಅವರಿಗೆ ಉಳಿದ ಆಟಗಾರ್ತಿ ಯರಿಂದ ಸಹಕಾರ ಸಿಗಲಿಲ್ಲ. ಹೆಲಿ ಮ್ಯಾಥ್ಯೂಸ್ ಮತ್ತು  ಅಮೆಲಿಯಾ ಕೆರ್ ತಲಾ ಮೂರು ವಿಕೆಟ್‌ ಪಡೆದು ಜೈಂಟ್ಸ್‌ಗೆ ಕಡಿವಾಣ ಹಾಕಿದರು.

ಇದಕ್ಕೂ ಮೊದಲು ಟಾಸ್ ಗೆದ್ದ ಜೈಂಟ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಅಮೆಲಿಯಾ ಕೆರ್ ಅವರನ್ನು ಗುಜರಾತ್ ತಂಡದ ನಾಯಕಿ ಆ್ಯಷ್ಲೆ ಗಾರ್ಡನರ್ ರನ್‌ಔಟ್ ಮಾಡಿದರು.  3 ಓವರ್‌ಗಳ ನಂತರ ಹೆಲಿ ಮ್ಯಾಥ್ಯೂಸ್ (27; 22ಎ, 4X3, 6X2) ಅವರನ್ನು ಪ್ರಿಯಾ ಮಿಶ್ರಾ ಔಟ್ ಮಾಡಿದರು. ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ನ್ಯಾಟ್ ಶಿವರ್ ಬ್ರಂಟ್ (38; 31ಎ, 4X6) ಅವರೊಂದಿಗೆ ಸೇರಿಕೊಂಡ ಹರ್ಮನ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 59 ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 6ಕ್ಕೆ179(ಹೆಲಿ ಮ್ಯಾಥ್ಯೂಸ್ 27, ನ್ಯಾಟ್ ಶಿವರ್ ಬ್ರಂಟ್ 38, ಹರ್ಮನ್‌ಪ್ರೀತ್ ಕೌರ್ 54, ಅಮನ್ಜೋತ್ ಕೌರ್ 27, ತನುಜಾ ಕನ್ವರ್ 41ಕ್ಕೆ1, ಆ್ಯಷ್ಲೆ ಗಾರ್ಡನರ್ 27ಕ್ಕೆ1). ಗುಜರಾತ್ ಜೈಂಟ್ಸ್: 20 ಓವರ್‌ಗಳಲ್ಲಿ 170 (ಹರ್ಲಿನ್ ಡಿಯೋಲ್ 24, ಭಾರತಿ ಫುಲ್ಮಾಲಿ 61; ಶಬ್ನಿಮ್ ಇಸ್ಮಾಯಿಲ್ 17ಕ್ಕೆ 2, ಹೆಲಿ ಮ್ಯಾಥ್ಯೂಸ್ 38ಕ್ಕೆ 3, ಅಮೆಲಿಯಾ ಕೆರ್‌ 34ಕ್ಕೆ 3). ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 9 ರನ್‌ಗಳ ಜಯ.

ಪಂದ್ಯದ ಆಟಗಾರ್ತಿ: ಹರ್ಮನ್‌ಪ್ರೀತ್‌ ಕೌರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.