ADVERTISEMENT

ಮಹಿಳಾ ಕ್ರಿಕೆಟ್‌: ಭಾರತಕ್ಕೆ ಹ್ಯಾಟ್ರಿಕ್‌ ಗೆಲುವಿನ ಛಲ

ಹರ್ಮನ್‌ ಪಡೆಗೆ ಲಂಕಾ ಸವಾಲು ಇಂದು

ಪಿಟಿಐ
Published 3 ಮೇ 2025, 22:30 IST
Last Updated 3 ಮೇ 2025, 22:30 IST
   

ಕೊಲಂಬೊ: ಸತತ ಎರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತದ ವನಿತೆಯರು ಮಹಿಳಾ ತ್ರಿಕೋನ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಭಾನುವಾರ ಆತಿಥೇಯ ಶ್ರೀಲಂಕಾ ತಂಡವನ್ನು ಎದುರಿಸಲಿದ್ದಾರೆ.

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವು ಸರಣಿಯಲ್ಲಿ ಅಜೇಯವಾಗಿ ಉಳಿದಿದೆ. ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಪಂದ್ಯ ಆಡಿ ಗೆದ್ದಿರುವ ಭಾರತ (4 ಅಂಕ) ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನೊಂದು ಪಂದ್ಯ ಗೆದ್ದರೆ ಭಾರತಕ್ಕೆ ಫೈನಲ್‌ ಸ್ಥಾನ ಖಚಿತವಾಗಲಿದೆ.

ಆರಂಭಿಕ ಪಂದ್ಯದಲ್ಲಿ ಭಾರತ ವಿರುದ್ಧ 9 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದ್ದ ಆತಿಥೇಯ ತಂಡವು ತನ್ನ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಐದು ವಿಕೆಟ್‌ಗಳಿಂದ ಮಣಿಸಿತ್ತು. ಲಂಕಾ ತಂಡವು (2 ಅಂಕ) ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದೇ 11ರಂದು ನಡೆಯುವ ಫೈನಲ್‌ಗೆ ಸ್ಥಾನ ಕಾಯ್ದಿರಿಸುವ ದೃಷ್ಟಿಯಿಂದ ಲಂಕಾ ತಂಡಕ್ಕೆ ಈ ಪಂದ್ಯ ಮಹತ್ವದ್ದಾಗಿದೆ.

ADVERTISEMENT

ಏಕದಿನ ಮಾದರಿಯಲ್ಲಿ ಸತತ ಎಂಟು ಪಂದ್ಯಗಳಲ್ಲಿ ಅಜೇಯವಾಗಿರುವ ಭಾರತ ತಂಡವು ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಿಂಗ್‌ನಲ್ಲಿ ಸಾಂಘಿಕ ಪ್ರದರ್ಶನ ತೋರುತ್ತಿದೆ. ಅದೇ ಉತ್ಸಾಹದಲ್ಲಿರುವ ತಂಡವು ಸರಣಿಯಲ್ಲಿ ಹ್ಯಾಟ್ರಿಕ್‌ ಗೆಲುವಿನ ತವಕದಲ್ಲಿದೆ. 

ಪ್ರತೀಕಾ ರಾವಲ್‌, ಸ್ಮೃತಿ ಮಂದಾನ ಸೇರಿದಂತೆ ಅಗ್ರಕ್ರಮಾಂಕದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಸರಣಿಯ ಎರಡೂ ಪಂದ್ಯಗಳಲ್ಲೂ ಪ್ರತೀಕಾ (50* ಮತ್ತು 78) ಅಬ್ಬರಿಸಿದ್ದಾರೆ. ಬೌಲಿಂಗ್‌ನಲ್ಲಿ ಸ್ಪಿನ್ನರ್‌ಗಳಾದ ಸ್ನೇಹಾ ರಾಣಾ, ಶ್ರೀಚರಣಿ ಅವರು ಎದುರಾಳಿ ತಂಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಮೋಘ ಕೈಚಳಕ ಪ್ರದರ್ಶಿಸಿದ್ದ ರಾಣಾ (43ಕ್ಕೆ 5) ಗೆಲುವಿನ ರೂವಾರಿಯಾಗಿದ್ದರು. ಎದುರಾಳಿ ತಂಡಕ್ಕೆ 277 ರನ್‌ಗಳ ಗುರಿ ನೀಡಿದ್ದ ಭಾರತ 15 ರನ್‌ಗಳಿಂದ ರೋಚಕವಾಗಿ ಜಯಿಸಿತ್ತು.

ಚಾಮರಿ ಅಟಪಟ್ಟು ಸಾರಥ್ಯದ ಲಂಕಾ ಪಡೆಯು ದಕ್ಷಿಣ ಆಫ್ರಿಕಾ ವಿರುದ್ಧ ಕೆಚ್ಚೆದೆ ಹೋರಾಟ ನಡೆಸಿ ಜಯಿಸಿತ್ತು. ಅದೇ ಹುಮ್ಮಸ್ಸಿನಲ್ಲಿ ಕಣಕ್ಕೆ ಇಳಿಯಲು ಸಜ್ಜಾಗಿದೆ. 

ಪಂದ್ಯ ಆರಂಭ: ಬೆಳಿಗ್ಗೆ 10

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.