ADVERTISEMENT

ಮಹಿಳಾ ಟಿ20 ವಿಶ್ವಕಪ್: ಬೆಂಗಳೂರು ಪಂದ್ಯಗಳು ಎಲ್ಲಿಗೆ?

ಗಿರೀಶ ದೊಡ್ಡಮನಿ
Published 13 ಆಗಸ್ಟ್ 2025, 0:58 IST
Last Updated 13 ಆಗಸ್ಟ್ 2025, 0:58 IST
<div class="paragraphs"><p>ಚಿನ್ನಸ್ವಾಮಿ ಕ್ರೀಡಾಂಗಣ</p></div>

ಚಿನ್ನಸ್ವಾಮಿ ಕ್ರೀಡಾಂಗಣ

   

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್–ಅಕ್ಟೋಬರ್‌ನಲ್ಲಿ ನಡೆಯಬೇಕಿದ್ದ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಕೆಲವು ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಸಿದ್ಧತೆ ನಡೆದಿದೆ. 

ಸೆ.30ರಂದು ಉದ್ಘಾಟನೆ ಪಂದ್ಯ (ಭಾರತ–ಶ್ರೀಲಂಕಾ), ಅ.3 (ಇಂಗ್ಲೆಂಡ್–ದಕ್ಷಿಣ ಆಫ್ರಿಕಾ), ಅ.26 (ಭಾರತ–ಬಾಂಗ್ಲಾದೇಶ) ಹಾಗೂ ಅ.30 (ಸೆಮಿಫೈನಲ್) ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಯೋಜಿಸಲು ಐಸಿಸಿ ಬಿಡುಗಡೆ ಮಾಡಿರುವ ವೇಳಾಪಟ್ಟಿಯಲ್ಲಿ ನಿಗದಿ ಮಾಡಲಾಗಿತ್ತು. ಆದರೆ, ಇದುವರೆಗೂ ರಾಜ್ಯ ಸರ್ಕಾರದಿಂದ ಪಂದ್ಯಗಳ ಆಯೋಜನೆಗೆ ಅನುಮತಿ ದೊರೆತಿಲ್ಲವೆನ್ನಲಾಗಿದೆ. ಆದ್ದರಿಂದ ಪಂದ್ಯಗಳನ್ನು ಬೇರೆ ನಗರಗಳಿಗೆ ಸ್ಥಳಾಂತರಿಸುವುದು ಬಹುತೇಕ ಖಚಿತವಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 

ADVERTISEMENT

ತಿರುವನಂತಪುರದ ಕರಯಾವಟ್ಟೊಮ್‌ನಲ್ಲಿರುವ ಗ್ರೀನ್‌ಫೀಲ್ಡ್ಸ್‌ ಕ್ರೀಡಾಂಗಣಕ್ಕೆ ಬೆಂಗಳೂರು ಪಂದ್ಯಗಳು ಸ್ಥಳಾಂತರವಾಗಲಿವೆ. ಕ್ರೀಡಾಂಗಣದ ಪಂದ್ಯ ನಡೆಸಲು ಮೂಲಸೌಲಭ್ಯಗಳ ಕುರಿತ ಮಾಹಿತಿಯನ್ನು ಕೇರಳ ಕ್ರಿಕೆಟ್ ಸಂಸ್ಥೆಯಿಂದ ಕೇಳಲಾಗಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಪಂದ್ಯ ಆಯೋಜನೆಗೆ ಸಿದ್ದಗೊಳ್ಳುವ ಸಾಧ್ಯತೆಗಳ ಕುರಿತೂ ಮಾಹಿತಿಯನ್ನು ಬಿಸಿಸಿಐ ಪಡೆದುಕೊಂಡಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. 

ಬಿಸಿಸಿಐನ ಇನ್ನೊಂದು ಮೂಲದ ಪ್ರಕಾರ; ಚೆನ್ನೈ ಮತ್ತು ಮುಂಬೈಗೆ ಈ ಪಂದ್ಯಗಳು ಹಂಚಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. 

ಆದರೆ, ಪಂದ್ಯಗಳು ಸ್ಥಳಾಂತರವಾಗುವ ಕುರಿತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪದಾಧಿಕಾರಿಗಳು ಖಚಿತಪಡಿಸಿಲ್ಲ. 

‘ನಮ್ಮ ಇಲಾಖೆಗೆ ಈ ಕುರಿತು ಯಾವುದೇ ಪ್ರಸ್ತಾವ ಕ್ರಿಕೆಟ್ ಸಂಸ್ಥೆಯಿಂದ ಬಂದಿಲ್ಲ. ಬಹುಶಃ ಬಿಸಿಸಿಐ ಮತ್ತು ಕೆಎಸ್‌ಸಿಎ ಸೇರಿ ಪಂದ್ಯಗಳ ಆಯೋಜನೆ ಅಥವಾ ಸ್ಥಳಾಂತರ ಕುರಿತು ನಿರ್ಧರಿಸಬಹುದು’ ಎಂದು ಪೊಲೀಸ್ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಜೂನ್ ತಿಂಗಳಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ ಟ್ರೋಫಿ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿತ್ತು. 11 ಜನರು ದುರ್ಮರಣ ಹೊಂದಿದ್ದರು. ಈ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರವು ಏಕಸದಸ್ಯ (ಡಿಕ್ಹುನಾ) ಸಮಿತಿಯನ್ನು ನೇಮಿಸಿತ್ತು. ಅವರು ನೀಡಿರುವ ವರದಿಯಲ್ಲಿ ‘ದೊಡ್ಡಮಟ್ಟದ ಕಾರ್ಯಕ್ರಮಗಳನ್ನು ನಡೆಸಲು ಚಿನ್ನಸ್ವಾಮಿ ಕ್ರೀಡಾಂಗಣ ಸುರಕ್ಷಿತವಲ್ಲ’ ಎಂದು ಉಲ್ಲೇಖಿಸಲಾಗಿತ್ತು. 

ಮಹಾರಾಜ ಟಿ20 ಕ್ರಿಕೆಟ್ ಟೂರ್ನಿ ಆಯೋಜನೆಗೂ ಪೊಲೀಸ್ ಇಲಾಖೆಯು ಅನುಮತಿ ನೀಡಿರಲಿಲ್ಲ. ಆದ್ದರಿಂದ ಟೂರ್ನಿಯನ್ನು ಮೈಸೂರಿಗೆ ಸ್ಥಳಾಂತರಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.