
ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೊಲ್ವಾರ್ಟ್
ಗುವಾಹಟಿ: ದಕ್ಷಿಣ ಆಫ್ರಿಕಾ ತಂಡದ ನಾಯಕಿ ಬುಧವಾರ ದಾಖಲಿಸಿದ ಲಾರಾ ವೊಲ್ವಾರ್ಟ್ ಅವರು ಗಳಿಸಿದ ಶತಕ ಹಾಗೂ ಮರೈಝಾನ್ ಕಾಪ್ ಅವರ ಅಮೋಘ ಬೌಲಿಂಗ್ ಕ್ರಿಕೆಟ್ ಇತಿಹಾಸದ ಅವಿಸ್ಮರಣೀಯ ಸಂಗತಿಗಳಾಗಿ ದಾಖಲಾದವು. ಅವರ ಆಟದ ಬಲದಿಂದ ದಕ್ಷಿಣ ಆಫ್ರಿಕಾ ತಂಡವು ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪ್ರವೇಶಿಸಿತು.
ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 125 ರನ್‌ಗಳಿಂದ ಇಂಗ್ಲೆಂಡ್ ವಿರುದ್ಧ ಜಯಭೇರಿ ಬಾರಿಸಿತು.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ ಲಾರಾ (169; 143ಎಸೆತ, 4X20, 6X4) ಅವರ ಅಮೋಘ ಶತಕದ ಬಲದಿಂದ ದಕ್ಷಿಣ ಆಫ್ರಿಕಾ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 319 ರನ್ ಗಳಿಸಿತು.
ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡಕ್ಕೆ ಮರೈಝಾನ್ (20ಕ್ಕೆ5) ಅಡ್ಡಗೋಡೆಯಾದರು. ಇಂಗ್ಲೆಂಡ್ 42.3 ಓವರ್‌ಗಳಲ್ಲಿ 194 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ತಂಡದ ಮೂವರು ಅಗ್ರ ಬ್ಯಾಟರ್‌ಗಳು ಖಾತೆಯನ್ನೇ ತೆರೆಯಲಿಲ್ಲ. ಕೇವಲ 1 ರನ್‌ಗೆ 3 ವಿಕೆಟ್‌ಗಳು ಪತನವಾದವು. ಇದರಿಂದಾಗಿ ತಂಡವು ಅತ್ಯಲ್ಪ ಮೊತ್ತಕ್ಕೆ ಕುಸಿಯುವ ಆತಂಕ ಇತ್ತು.
ಈ ಹಂತದಲ್ಲಿ ನಾಯಕಿ ನ್ಯಾಟ್ ಶಿವರ್ ಬ್ರಂಟ್ (64; 76ಎ, 4X6, 6X1) ಮತ್ತು ಅಲೈಸ್ ಕ್ಯಾಪ್ಸಿ (50; 71ಎ, 4X6) ಅವರು ಅರ್ಧಶತಕ ದಾಖಲಿಸಿದರು. ತಂಡವನ್ನು ಗೆಲುವಿನ ಹಾದಿಗೆ ತರುವ ಪ್ರಯತ್ನ ಮಾಡಿದರು. ಆದರೆ ಸಾಧ್ಯವಾಗಲಿಲ್ಲ.
ಬ್ಯಾಟರ್‌ಗಳಿಗೆ ಅಪಾರ ನೆರವು ನೀಡುತ್ತಿದ್ದ ಪಿಚ್‌ನಲ್ಲಿ ಮರೈಝಾನ್ ಯಶಸ್ವಿಯಾಗಿದ್ದು ವಿಶೇಷ.
ಟೂರ್ನಿಯ ಎರಡನೇ ಸೆಮಿಫೈನಲ್ ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ಅದರಲ್ಲಿ ಗೆದ್ದ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಫೈನಲ್‌ನಲ್ಲಿ ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 319 (ಲಾರಾ ವೊಲ್ವಾರ್ಟ್ 169, ತಾಜ್ಮೀನ್ ಬ್ರಿಟ್ಸ್ 45, ಮರೈಝಾನ್ ಕಾಪ್ 42, ಕ್ಲೊಯೆ ಟ್ರಯನ್ ಔಟಾಗದೇ 33, ಲಾರೆನ್ ಬೆಲ್ 55ಕ್ಕೆ2, ಸೋಫಿ ಎಕ್ಲೆಸ್ಟೊನ್ 44ಕ್ಕೆ4)
ಇಂಗ್ಲೆಂಡ್: 42.3 ಓವರ್‌ಗಳಲ್ಲಿ 194 (ನ್ಯಾಟ್ ಶಿವರ್ ಬ್ರಂಟ್ 64, ಅಲಿಸ್ ಕ್ಯಾಪ್ಸಿ 50, ಡ್ಯಾನಿ ವೈಟ್ ಹಾಜ್ 34, ಲಿನ್ಸೆ ಸ್ಮಿತ್ 27, ಮರೈಝಾನ್ ಕಾಪ್ 20ಕ್ಕೆ5, ನದಿನ್ ಡಿ ಕಿರ್ಕ್ 24ಕ್ಕೆ2) ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 125 ರನ್ ಜಯ.
ಪಂದ್ಯದ ಆಟಗಾರ್ತಿ: ಲಾರಾ ವೊಲ್ವಾರ್ಟ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.