
ಕೊಲಂಬೊ: ಇಲ್ಲಿಯ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಮಳೆಯ ಆಟವೇ ಮೇಲುಗೈ ಸಾಧಿಸಿತು. ಅದರಿಂದಾಗಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಆಯೋಜನೆಗೊಂಡಿದ್ದ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಣ ಪಂದ್ಯವು ರದ್ದಾಯಿತು.
ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪಾಕಿಸ್ತಾನ ತಂಡಕ್ಕೆ ಮುನಿಬಾ ಅಲಿ (ಔಟಾಗದೇ 7; 17ಎಸೆತ) ಮತ್ತು ಒಮೈಮಾ ಸೋಹೈಲ್ (ಔಟಾಗದೇ 9; 9ಎಸೆತ, 4X1) ಉತ್ತಮವಾಗಿ ಆರಂಭ ಮಾಡಿದರು. 4.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 18 ರನ್ ಗಳಿಸಿದ್ದ ಸಂದರ್ಭದಲ್ಲಿ ಧಾರಾಕಾರ ಮಳೆ ಸುರಿಯಿತು. ಕೆಲ ಹೊತ್ತಿನ ನಂತರ ಮಳೆ ನಿಂತರೂ ಜೋರಾದ ಗಾಳಿ ಬೀಸುತ್ತಿತ್ತು. ಕ್ರೀಡಾಂಗಣ ಸಿಬ್ಬಂದಿಯು ಪಿಚ್ ಹೊದಿಕೆಯನ್ನು ಸರಿಪಡಿಸಲು ಶ್ರಮಿಸಿದರು. ಅಲ್ಲದೇ ಹೊರಾಂಗಣದಲ್ಲಿದ್ದ ತೇವವನ್ನು ಒಣಗಿಸಿ ಪಂದ್ಯಕ್ಕೆ ಸಜ್ಜುಗೊಳಿಸಲು ಪ್ರಯತ್ನಿಸಿದರು. ರೆಫರಿ ಮತ್ತು ಅಂಪೈರ್‌ಗಳು ಎರಡು, ಮೂರು ಸಲ ಪಿಚ್ ಪರೀಕ್ಷೆ ನಡೆಸಿದರು. ರಾತ್ರಿ 8.10ರ ಸುಮಾರಿಗೆ ಪಂದ್ಯ ರದ್ದುಗೊಳಿಸಿದರು.
ಪ್ರಸಕ್ತ ಟೂರ್ನಿಯಲ್ಲಿ ಈ ಮೈದಾನವು 11 ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಅದರಲ್ಲಿ ಐದು ಪಂದ್ಯಗಳು ಮಳೆಯಲ್ಲಿ ಮುಳುಗಿವೆ. ಇದರಿಂದಾಗಿ ಆಯೋಜಕರು ವೇಳಾಪಟ್ಟಿಯನ್ನು ನಿಗದಿಗೊಳಿಸಿರುವುದರ ಕುರಿತು ಟೀಕೆಗಳು ಕೇಳಿಬರುತ್ತಿವೆ.
ಈಶಾನ್ಯ ಮಾರುತ ಬಲವಾಗಿ ಬೀಸುವ ಅವಧಿಯಲ್ಲಿ ಈ ಪ್ರದೇಶದಲ್ಲಿ ಮಳೆ ಸಾಮಾನ್ಯ ಸಂಗತಿ. ಇಂತಹ ಸಮಯದಲ್ಲಿ ಪಂದ್ಯಗಳನ್ನು ನಿಗದಿಪಡಿಸಿರುವುದು ಆಯೋಜಕರ ಲೋಪ ಎಂಬ ಕಿಡಿನುಡಿಗಳು ಕೇಳಿಬಂದಿವೆ. ಇದರಿಂದಾಗಿ ತಂಡಗಳು ಮತ್ತು ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ.
ಜಂಟಿ ಆತಿಥ್ಯ ವಹಿಸಿರುವ ಶ್ರೀಲಂಕಾ ತಂಡವು ಸೆಮಿಫೈನಲ್ ಪ್ರವೇಶಿಸುವ ಅವಕಾಶವು ಮಳೆಯಿಂದ ಕೈತಪ್ಪಿತು. ತಂಡವು ತನ್ನ ಪಾಲಿನ ಏಳು ಪಂದ್ಯಗಳ ಪೈಕಿ ಒಂದು ಗೆದ್ದು, ಮೂರರಲ್ಲಿ ಸೋತಿದೆ. ಇನ್ನೂ ಮೂರು ಪಂದ್ಯಗಳು ಮಳೆಗಾಹುತಿಯಾಗಿವೆ. ಇದರಿಂದಾಗಿ ತಂಡವು ಎಂಟು ತಂಡಗಳಿರುವ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ. ಕೇವಲ ಐದು ಪಾಯಿಂಟ್‌ಗಳು ಖಾತೆಯಲ್ಲಿವೆ.
ಪಾಕಿಸ್ತಾನ ತಂಡವು ಕೇವಲ 3 ಅಂಕಗಳನ್ನು ಗಳಿಸಿದೆ. ಏಳು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತಿದೆ ಮತ್ತು ಮೂರು ಮಳೆಯಿಂದಾಗಿ ರದ್ದಾಗಿವೆ. ಒಂದೂ ಜಯಕಾಣದೇ ಪಾಕ್ ತಂಡವು ಅಭಿಯಾನ ಮುಗಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.