ADVERTISEMENT

ಬೌಲ್ಟ್‌ ಹ್ಯಾಟ್ರಿಕ್‌ ಸಾಧನೆ; ಕ್ಯಾರಿ,ಖ್ವಾಜಾ ಹೋರಾಟ,ಕಿವೀಸ್‌ಗೆ 244 ರನ್‌ ಗುರಿ

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 16:23 IST
Last Updated 29 ಜೂನ್ 2019, 16:23 IST
ಔಟ್‌ ನೀಡಲು ಅಂಪೈರ್‌ಗೆ ಟ್ರೆಂಟ್‌ ಬೌಲ್ಟ್‌ ಮೊರೆ
ಔಟ್‌ ನೀಡಲು ಅಂಪೈರ್‌ಗೆ ಟ್ರೆಂಟ್‌ ಬೌಲ್ಟ್‌ ಮೊರೆ   

ಲಾರ್ಡ್ಸ್, ಲಂಡನ್: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಕಾಂಗರೂ ಪಡೆಗೆ ಕಿವೀಸ್‌ ಬೌಲರ್‌ಗಳು ಹಿಂದರ ಹಿಂದೊಂದು ಆಘಾತ ನೀಡಿ ಸಂಕಷ್ಟಕ್ಕೆ ದೂಡಿದ್ದಾರೆ. ಆಸ್ಟ್ರೇಲಿಯಾ 50 ರನ್‌ ಸಮೀಪಿಸುವ ಮುನ್ನವೇ ಮೂರು ವಿಕೆಟ್ ಕಳೆದುಕೊಂಡಿತು. ಖ್ವಾಜಾ ಮತ್ತು ಕ್ಯಾರಿ ಹೋರಾಟದಿಂದಾಗಿ ತಂಡ 200 ರನ್‌ ಗಡಿ ದಾಟಲು ಸಾಧ್ಯವಾಯಿತು.

ಆಸ್ಟ್ರೇಲಿಯಾ ನಿಗದಿ 50ಓವರ್‌ಗಳಲ್ಲಿ 9ವಿಕೆಟ್‌ ನಷ್ಟಕ್ಕೆ 243ರನ್‌ ಗಳಿಸಿದೆ. ಕೊನೆಯ ಓವರ್‌ನಲ್ಲಿ ಟ್ರೆಂಟ್‌ ಬೌಲ್ಟ್‌ ಎರಡು ರನ್‌ ನೀಡಿ ಮೂರು ವಿಕೆಟ್‌ ಕಬಳಿಸುವ ಮೂಲಕ ವಿಶ್ವಕಪ್‌ ಟೂರ್ನಿಯಲ್ಲಿ ಮತ್ತೊಂದು ಹ್ಯಾಟ್ರಿಕ್‌ ದಾಖಲಿಸಿದರು. ಅಫ್ಗಾನಿಸ್ತಾನದ ಎದುರಿನ ಪಂದ್ಯದಲ್ಲಿ ಭಾರತ ಮೊಹಮ್ಮದ್‌ ಶಮಿ ಟೂರ್ನಿಯ ಮೊದಲ ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು. ಬೋಲ್ಟ್‌ 10 ಓವರ್‌ಗಳಲ್ಲಿ 51 ರನ್‌ ನೀಡಿ 4 ವಿಕೆಟ್ ಪಡೆದರು.

ಕ್ಷಣಕ್ಷಣದ ಸ್ಕೋರ್‌:https://bit.ly/2xiuOTF

ADVERTISEMENT

ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ಉಸ್ಮಾನ್‌ ಖ್ವಾಜಾ(88) ಮತ್ತು ಅಲೆಕ್ಸ್‌ ಕ್ಯಾರಿ(71) ಜತೆಯಾಟ ಆಸರೆಯಾಯಿತು. ಖ್ವಾಜಾ ತಾಳ್ಮೆಯ ಆಟ ಆಡಿದರೆ, ಕ್ಯಾರಿ 11 ಬೌಂಡರಿಗಳನ್ನು ಸಿಡಿಸುವಮೂಲಕ ಬಿರುಸಿನ ಬ್ಯಾಟಿಂಗ್‌ ನಡೆಸಿದರು. 23 ರನ್‌ ಗಳಿಸಿದ ಪ್ಯಾಟ್‌ ಕಮಿನ್ಸ್‌ ಅಜೇಯರಾಗಿ ಉಳಿದರು.

ವಿಶ್ವಕಪ್‌ ಟೂರ್ನಿಯ ಪಂದ್ಯಗಳಲ್ಲಿ ಉತ್ತಮ ಜತೆಯಾಟದ ಮೂಲಕ ಗಮನ ಸೆಳೆದ ಡೇವಿಡ್‌ ವಾರ್ನರ್‌(16) ಮತ್ತು ಆ್ಯರನ್‌ ಫಿಂಚ್‌(8)ಆರಂಭಿಕ ಜೋಡಿ ಇಂದು ಲಯ ಕಂಡುಕೊಳ್ಳುವ ಮುನ್ನವೇ ಮರಳಿದರು.

ಬಹುಬೇಗ ವಿಕೆಟ್‌ ಉರುಳಲು ಲಾಕಿ ಫರ್ಗುಸನ್‌ ಮತ್ತು ಜಿಮ್ಮಿ ನೀಶಮ್‌ ಕಾರಣರಾದರು. ಇಬ್ಬರೂ ತಲಾ 2 ವಿಕೆಟ್‌ ಪಡೆದರು. ಕೇನ್‌ ವಿಲಿಯಮ್ಸನ್‌ 1 ವಿಕೆಟ್‌ ಪಡೆದರು.

ಸ್ಟೀವ್‌ ಸ್ಮಿತ್‌ (5), ಗ್ಲೆನ್‌ ಮ್ಯಾಕ್ಸ್‌ವೆಲ್‌(0) ಆಟಕ್ಕೆ ಕಿವೀಸ್‌ ಅವಕಾಶವೇ ನೀಡಲಿಲ್ಲ. ದಿಟ್ಟ ಹೋರಾಟ ನಡೆಸಿದ್ದ ಮಾರ್ಕಸ್‌ ಸ್ಟೋನಿಸ್‌(21) ನೀಶಮ್‌ ಎಸೆತದಲ್ಲಿ ಆಟ ಮುಗಿಸಿದರು.

ವಿಶ್ವಕಪ್‌ ಟೂರ್ನಿಯಲ್ಲಿ ಬಲಿಷ್ಠ ತಂಡಗಳಾಗಿ ಪಾಯಿಂಟ್ ಪಟ್ಟಿಯ ಟಾಪ್‌ 3ರೊಳಗೆ ಸ್ಥಾನ ಪಡೆದಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ನಡುವಿನ ಪೈಪೋಟಿ ಕುತೂಹಲ ಕೆರಳಿಸಿದೆ.

ನಾಲ್ಕು ವರ್ಷಗಳ ಹಿಂದೆ, ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಎದುರಾಗಿದ್ದವು. ಆಸ್ಟ್ರೇಲಿಯಾ ಕಿವೀಸ್‌ ವಿರುದ್ಧ ಜಯಭೇರಿ ಸಾಧಿಸಿತ್ತು.

ಈ ಟೂರ್ನಿಯಲ್ಲಿ ಎರಡೂ ತಂಡಗಳು ತಲಾ ಏಳು ಪಂದ್ಯಗಳನ್ನು ಆಡಿವೆ. ಆ್ಯರನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ತಂಡವು ಭಾರತದ ಎದುರು ಮಾತ್ರ ಸೋತಿತ್ತು. ಉಳಿದಂತೆ ಎಲ್ಲ ಪಂದ್ಯಗಳಲ್ಲಿಯೂ ಜಯ ದಾಖಲಿಸಿದೆ. ಕಿವೀಸ್ ತಂಡವು ಐದು ಪಂದ್ಯಗಳಲ್ಲಿ ಗೆದ್ದಿದೆ. ಭಾರತದ ಎದುರಿನ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ನ್ಯೂಜಿಲೆಂಡ್‌ ಈ ಪಂದ್ಯದಲ್ಲಿ ಗೆದ್ದರೆ, ಸೆಮಿಫೈನಲ್‌ ಪ್ರವೇಶ ಖಚಿತವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.