ADVERTISEMENT

ಇಮ್ರಾನ್‌ ತಾಹಿರ್‌ ದಾಳಿಗೆ ಉರುಳಿದ ಅಫ್ಗಾನ್‌; ಹರಿಣಿಗಳಿಗೆ 127 ರನ್‌ ಸವಾಲು

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 17:46 IST
Last Updated 15 ಜೂನ್ 2019, 17:46 IST
   

ಕಾರ್ಡಿಫ್‌: ಶನಿವಾರ ಕಾರ್ಡಿಫ್‌ನಲ್ಲಿ ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್‌ ಅಯ್ಕೆ ಮಾಡಿಕೊಂಡು, ಅಫ್ಗಾನಿಸ್ತಾನವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿತು. ಇಮ್ರಾನ್‌ ತಾಹಿರ್‌ ದಾಳಿಯಿಂದಾಗಿ ಅಫ್ಗಾನ್‌ ವಿಕೆಟ್‌ಗಳು ಬಹುಬೇಗ ಪತನಗೊಂಡವು.

34.1 ಓವರ್‌ಗಳಲ್ಲಿ ಸರ್ವ ಪತನ ಕಂಡ ಅಫ್ಗಾನಿಸ್ತಾನ 125 ರನ್‌ ದಾಖಲಿಸಿತು. ಡಕ್ವರ್ಥ್‌ ಲೂಯಿಸ್‌ ನಿಯಮದಡಿ ದಕ್ಷಿಣ ಆಫ್ರಿಕಾ ಗೆಲುವಿಗೆ 127 ರನ್‌ ಗಳಿಸಬೇಕಿದೆ.

ಉತ್ತಮ ಆಟ ಪ್ರರ್ದಶಿಸುತ್ತಿದ್ದ ಆರಂಭಿಕ ಆಟಗಾರ ಹಜ್ರತ್‌ ಜಜಾಯ್‌(22)ಕಗಿಸೊ ರಬಾಡ ಎಸೆತದಲ್ಲಿ ಕ್ಯಾಚ್‌ ನೀಡಿ ಹೊರ ನಡೆದರು. ರಹಮತ್‌ ಶಾ(6) ಹೆಚ್ಚು ಸಮಯ ನಿಲ್ಲಲಿಲ್ಲ.ಅಫ್ಗಾನ್‌ 2 ವಿಕೆಟ್‌ ಕಳೆದುಕೊಂಡು ಆಡುತ್ತಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿತ್ತು. ಕೆಲ ಸಮಯ ಆಟ ಸ್ಥಗಿತಗೊಳಿಸಿ ಪಂದ್ಯವನ್ನು48 ಓವರ್‌ಗಳಿಗೆ ಕಡಿತಗೊಳಿಸಲಾಯಿತು.

ADVERTISEMENT

ಮಳೆಯ ಬಿಡುವಿನ ನಂತರ ಆಟದ ಆರಂಭದಲ್ಲಿಯೇ ಎರಡು ವಿಕೆಟ್‌ ಉರುಳಿದವು. ತಾಳ್ಮೆಯ ಆಟ ಆಡುತ್ತಿದ್ದ ನೂರ್‌ ಅಲಿ ಜದ್ರಾನ್‌(32) ವಿಕೆಟ್‌ ಕಳೆದುಕೊಳ್ಳುತ್ತಿದ್ದಂತೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳೂ ಸಹ ಪೆವಿಲಿಯನ್‌ನತ್ತ ಪರೇಡ್‌ ನಡೆಸಿದರು. 69 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿದ್ದ ಅಫ್ಗಾನ್‌, 1 ರನ್‌ ಅಂತರದಲ್ಲಿ6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ವಿಕೆಟ್‌ ಪತನಗೊಳ್ಳುತ್ತಿದ್ದರೂ ಒಂಬತ್ತನೇ ಕ್ರಮಾಂಕದಲ್ಲಿ ರಶೀದ್‌ ಖಾನ್‌ ಬಿರುಸಿನ ಆಟದ ಮೂಲಕ 25 ಎಸೆತಗಳಲ್ಲಿ 35 ರನ್‌ ಗಳಿಸಿದರು.

ದಕ್ಷಿಣ ಆಫ್ರಿಕಾ ಪರ ಇಮ್ರಾನ್‌ ತಾಹಿರ್‌ 4 ವಿಕೆಟ್‌, ಕ್ರಿಸ್‌ ಮಾರಿಸ್‌ 3, ಆಂಡಿಲೆ ಪಿಶುವಾಯೊ 2 ವಿಕೆಟ್‌ ಹಾಗೂ ಕಗಿಸೊ ರಬಾಡ ಒಂದು ವಿಕೆಟ್‌ ಪಡೆದರು.

ಟೂರ್ನಿಯಲ್ಲಿ ಒಂದೂ ಗೆಲುವನ್ನು ಕಾಣದ ಎರಡು ತಂಡಗಳೆಂದರೆ ದಕ್ಷಿಣ ಆಫ್ರಿಕ ಮತ್ತು ಅಫ್ಗಾನಿಸ್ತಾನ. ಪಾಯಿಂಟ್‌ ಪಟ್ಟಿಯಲ್ಲಿ ತಳದಲ್ಲಿವೆ.ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್‌, ನಂತರ ಬಾಂಗ್ಲಾದೇಶ, ಭಾರತ ತಂಡಗಳಿಗೆ ಶರಣಾದ ಫಾಫ್‌ ಡುಪ್ಲೆಸಿ ಬಳಗ ನಂತರ ಕೊನೆಗೂ ವೆಸ್ಟ್‌ ಇಂಡೀಸ್‌ ವಿರುದ್ಧ ‘ವರುಣನ ಕೃಪೆಯಿಂದ’ ಮೊದಲ ಪಾಯಿಂಟ್‌ ಪಡೆದಿತ್ತು.

ಅಫ್ಗಾನಿಸ್ತಾನ ಮೊದಲ ಮೂರು ಪಂದ್ಯಗಳಲ್ಲಿ ಕ್ರಮವಾಗಿ ಆಸ್ಟ್ರೇಲಿಯಾ, ಶ್ರೀಲಂಕಾ, ನ್ಯೂಜಿಲೆಂಡ್‌ ವಿರುದ್ಧ ಸೋಲನುಭವಿಸಿದೆ. ಆದರೆ ಈ ಯುದ್ಧಪೀಡಿತ ರಾಷ್ಟ್ರದ ತಂಡ, ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಆಡಿದ ರೀತಿ ಗಮನಸೆಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.