ADVERTISEMENT

ಇಂದು ಇಂಗ್ಲೆಂಡ್ vs ಶ್ರೀಲಂಕಾ ಪಂದ್ಯ: ಲಂಕಾಕ್ಕೆ ಆತಿಥೇಯರ ಸವಾಲು

ಇಂಗ್ಲೆಂಡ್‌ಗೆ ಮತ್ತೊಂದು ಜಯದ ಭರವಸೆ

ಏಜೆನ್ಸೀಸ್
Published 21 ಜೂನ್ 2019, 3:53 IST
Last Updated 21 ಜೂನ್ 2019, 3:53 IST
ಕಸರತ್ತು ನಡೆಸಿದ ಇಂಗ್ಲೆಂಡ್‌ನ ಜಾನಿ ಬೆಸ್ಟೊ ಮತ್ತು ಜೋಫ್ರಾ ಆರ್ಚರ್ –ಎಎಫ್‌ಪಿ ಚಿತ್ರ
ಕಸರತ್ತು ನಡೆಸಿದ ಇಂಗ್ಲೆಂಡ್‌ನ ಜಾನಿ ಬೆಸ್ಟೊ ಮತ್ತು ಜೋಫ್ರಾ ಆರ್ಚರ್ –ಎಎಫ್‌ಪಿ ಚಿತ್ರ   

ಹೆಡಿಂಗ್ಲೆ, ಲೀಡ್ಸ್: ಮೂರು ದಿನಗಳ ಹಿಂದೆ ಅಫ್ಗಾನಿಸ್ತಾನದ ಎದುರು ಸಿಕ್ಸರ್‌ಗಳ ಬೆಟ್ಟವನ್ನೇ ಪೇರಿಸಿ, ದಾಖಲೆಗಳ ಮಳೆ ಸುರಿಸಿ ಬೀಗುತ್ತಿರುವ ಇಂಗ್ಲೆಂಡ್ ತಂಡ ಶುಕ್ರವಾರ ಶ್ರೀಲಂಕಾ ಎದುರು ಕಣಕ್ಕಿಳಿಯಲಿದೆ. ‌

ಆತಿಥೇಯ ಇಂಗ್ಲೆಂಡ್‌ನ ನಾಯಕ ಇಯಾನ್ ಮಾರ್ಗನ್ ಆ ಪಂದ್ಯದಲ್ಲಿ ಸಿಕ್ಸರ್‌ಗಳ ದಾಖಲೆ ಬರೆದಿದ್ದರು. ತಂಡದಲ್ಲಿರುವ ಜೇಸನ್ ರಾಯ್, ಜೋ ರೂಟ್, ಜೋಸ್ ಬಟ್ಲರ್ ಸೇರಿದಂತೆ ಎಲ್ಲ ಬ್ಯಾಟ್ಸ್‌ಮನ್‌ಗಳು ಉತ್ತಮ ಲಯದಲ್ಲಿದ್ದಾರೆ.

ಶ್ರೀಲಂಕಾ ತಂಡದ ಅನುಭವಿ ಬೌಲರ್ ಲಸಿತ್ ಮಾಲಿಂಗ್ ಮತ್ತು ಈ ಟೂರ್ನಿಯಲ್ಲಿ ಉತ್ತಮವಾಗಿ ಆಡುತ್ತಿರುವ ಇಸುರು ಉಡಾನ ಅವರ ಮುಂದೆ ಇಂಗ್ಲೆಂಡ್ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ದೊಡ್ಡ ಸವಾಲು ಇದೆ.

ADVERTISEMENT

ಲಂಕಾ ತಂಡವು ಗೆಲ್ಲಲೇ ಬೇಕಾದ ಒತ್ತಡ ದಲ್ಲಿದೆ. ಏಕೆಂದರೆ, ಶ್ರೀಲಂಕಾ ಇದುವರೆಗೆ ಆಡಿರುವುದು ಐದು ಪಂದ್ಯಗಳು. ಅದರಲ್ಲಿ ಎರಡು ಮಳೆಗೆ ಕೊಚ್ಚಿಹೋಗಿವೆ. ಇನ್ನುಳಿದಿರುವದರಲ್ಲಿ ಒಂದು ಜಯ, ಎರಡು ಸೋಲು ಅನುಭವಿಸಿದೆ.ತಂಡದ ಖಾತೆಯಲ್ಲಿ ನಾಲ್ಕು ಪಾಯಿಂಟ್‌ಗಳಿವೆ. ಇನ್ನುಳಿದಿರುವ ನಾಲ್ಕು ಪಂದ್ಯಗಳಲ್ಲಿ ಗೆದ್ದರೂ ಸೆಮಿಫೈನಲ್ ಪ್ರವೇಶಿಸುವುದು ಖಚಿತವಿಲ್ಲ. ಆದರೆ ಅಂತಿಮ ಹಂತದ ಲೆಕ್ಕಾಚಾರಗಳ ಪೈಪೋಟಿಯಲ್ಲಿ ಇರಬೇಕಾದರೆ ಸತತ ಗೆಲುವು ಅಗತ್ಯ.

ಆದರೆ, ಇಂಗ್ಲೆಂಡ್ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ ನಾಲ್ಕು ತಂಡಗಳಲ್ಲಿದೆ. ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯಿಸಿದೆ. ಒಂದರಲ್ಲಿ ಸೋತಿದೆ. ಸೆಮಿಫೈನಲ್ ಪ್ರವೇಶಿಸುವ ಹಾದಿಯಲ್ಲಿ ದಿಟ್ಟವಾಗಿ ಮುನ್ನಡೆಯುತ್ತಿದೆ. ತಂಡದಲ್ಲಿರುವ ಬೌಲರ್‌ಗಳಾದ ಕ್ರಿಸ್ ವೋಕ್ಸ್‌, ಮಾರ್ಕ್ ವುಡ್ ಮತ್ತು ಸ್ಪಿನ್ನರ್ ಆದಿಲ್ ರಶೀದ್ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಕಢಿಣ ಸವಾಲೊಡ್ಡಬಲ್ಲ ಬೌಲರ್‌ಗಳು.

ಲಂಕಾ ತಂಡದ ನಾಯಕ ದಿಮುತ, ಕುಸಾಲ ಪೆರೆರಾ ಅವರು ಮಾತ್ರ ಉತ್ತಮವಾದ ಬ್ಯಾಟಿಂಗ್ ಮಾಡು ತ್ತಿದ್ದಾರೆ. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ಸ್ಥಿರವಾದ ಆಟವಾಡುತ್ತಿಲ್ಲ. ಜೊತೆಗೆ ಫೀಲ್ಡಿಂಗ್‌ನಲ್ಲಿಯೂ ಚುರುಕುತನ ತೋರಿದರೆ ಇಂಗ್ಲೆಂಡ್‌ಗೆ ಕಠಿಣ ಸವಾಲು ಒಡ್ಡಲುಸಾಧ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.