ADVERTISEMENT

ಶ್ರೀಲಂಕಾ–ವಿಂಡೀಸ್ ಹಣಾಹಣಿ ಇಂದು: ನಿರಾಸೆಯ ಕಡಲಿಂದ ಮೇಲೇಳುವ ಛಲ

ಸೆಮಿಫೈನಲ್‌ ಹಾದಿಯಿಂದ ಹೊರಬಿದ್ದಿರುವ ತಂಡಗಳು

ಪಿಟಿಐ
Published 30 ಜೂನ್ 2019, 20:00 IST
Last Updated 30 ಜೂನ್ 2019, 20:00 IST
ಲಸಿತ್ ಮಾಲಿಂಗ
ಲಸಿತ್ ಮಾಲಿಂಗ   

ಚೆಸ್ಟರ್‌ ಲಿ ಸ್ಟ್ರೀಟ್: ಸೆಮಿಫೈನಲ್ ಪ್ರವೇಶದ ಹಾದಿಯಿಂದ ಹೊರಬಿದ್ದಿರುವ ದ್ವೀಪರಾಷ್ಟ್ರ ಶ್ರೀಲಂಕಾ ಮತ್ತು ಕೆರಿಬಿಯನ್ ದ್ವೀಪಗಳ ವೆಸ್ಟ್‌ ಇಂಡೀಸ್ ತಂಡಗಳು ಸೋಮವಾರ ಮುಖಾಮುಖಿಯಾಗಲಿವೆ.

ಪ್ರತಿಭಾನ್ವಿತ ಯುವ ಆಟಗಾರರು ಇರುವ ಶ್ರೀಲಂಕಾ ಮತ್ತು ಅನುಭವಿ ಆಲ್‌ರೌಂಡರ್‌ಗಳು ಇರುವ ವಿಂಡೀಸ್‌ ತಂಡಗಳು ನಿರೀಕ್ಷಿತ ಆಟವಾಡದೇ ನಿರಾಶೆ ಅನುಭವಿಸಿವೆ. ಇದೀಗ ಸಮಾಧಾನಕರ ಗೆಲುವಿಗಾಗಿ ಕಣಕ್ಕಿಳಿಯಲಿವೆ.

ಎರಡೂ ತಂಡಗಳು ತಲಾ ಏಳು ಪಂದ್ಯಗಳನ್ನು ಆಡಿವೆ. ಲಂಕಾ ಎರಡರಲ್ಲಿ ಗೆದ್ದಿದೆ. ಮೂರರಲ್ಲಿ ಸೋತಿದೆ. ಇನ್ನೆರಡು ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಇದರಿಂದಾಗಿ ಆರು ಅಂಕ ಗಳಿಸಿದೆ. ಆದ್ದರಿಂದ ನಾಲ್ಕರ ಹಂತದಿಂದ ಬಹುದೂರ ಉಳಿದಿದೆ.

ADVERTISEMENT

ಸ್ಫೋಟಕ ಬ್ಯಾಟಿಂಗ್ ಪಡೆ ಮತ್ತು ವೇಗದ ಬೌಲರ್‌ಗಳ ಬಳಗವೇ ಇರುವ ವಿಂಡೀಸ್ ಟೂರ್ನಿಯ ಆರಂಭದಲ್ಲಿ ಬಹಳಷ್ಟು ಭರವಸೆ ಮೂಡಿಸಿತ್ತು. ಆದರೆ, ಏಳು ಪಂದ್ಯಗಳಲ್ಲಿ ಗೆದ್ದಿದ್ದು ಒಂದೇ ಒಂದರಲ್ಲಿ. ಐದರಲ್ಲಿ ಸೋತಿತು. ಮಳೆಯಿಂದಾಗಿ ಒಂದು ರದ್ದಾಗಿತ್ತು. ಕೇವಲ ಮೂರು ಪಾಯಿಂಟ್‌ಗಳನ್ನು ಮಾತ್ರ ಗಳಿಸಿದೆ. ಕ್ರಿಸ್ ಗೇಲ್, ಆ್ಯಂಡ್ರೆ ರಸೆಲ್, ಕಾರ್ಲೋಸ್ ಬ್ರಾಥ್‌ವೇಟ್, ಜೇಸನ್ ಹೋಲ್ಡರ್. ಓಷೇನ್ ಥಾಮಸ್ ಅವರಂತಹ ಘಟಾನುಘಟಿಗಳಿದ್ದರೂ ತಂಡವು ನೆಲಕಚ್ಚಿದೆ.

ವಿಶ್ವಕಪ್ ಟೂರ್ನಿಯ ನಂತರ ವಿಂಡೀಸ್ ತಂಡವು ತನ್ನ ತವರಿನಲ್ಲಿ ಭಾರತದ ಎದುರು ಸರಣಿ ಆಡಲಿದೆ. ಟೆಸ್ಟ್ ವಿಶ್ವಕಪ್ ಸರಣಿಯೂ ಅಲ್ಲಿಯೇ ಆರಂಭವಾಗಲಿದೆ. ಆದ್ದರಿಂದ ಆ ಸವಾಲಿಗೆ ಸಿದ್ಧರಾಗಲು ಟೂರ್ನಿಯಲ್ಲಿ ಉಳಿದಿರುವ ಎರಡು ಪಂದ್ಯಗಳಲ್ಲಿ ಗೆಲ್ಲುವತ್ತ ಹೋಲ್ಡರ್ ಬಳಗ ಚಿತ್ತ ನೆಟ್ಟಿದೆ. ಲಂಕಾ ತಂಡವು ತನ್ನ ಅನುಭವಿ ಬೌಲರ್ ಲಸಿತ್ ಮಾಲಿಂಗ, ಬ್ಯಾಟಿಂಗ್‌ನಲ್ಲಿ ದಿಮುತ ಕರುಣಾರತ್ನೆ, ಏಂಜೆಲೊ ಮ್ಯಾಥ್ಯೂಸ್ ಅವರ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಪಾಯಿಂಟ್‌ ಪಟ್ಟಿಯಲ್ಲಿ ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳುವ ಗೆಲ್ಲುವ ಗುರಿಯೊಂದೇ ಉಭಯ ತಂಡಗಳಿಗೆ ಇದೆ.

ತಂಡಗಳು: ಶ್ರೀಲಂಕಾ: ದಿಮುತ್ ಕರುಣಾರತ್ನೆ (ನಾಯಕ), ಧನಂಜಯ ಡಿಸಿಲ್ವಾ, ಅವಿಷ್ಕಾ ಫರ್ನಾಂಡೊ, ಸುರಂಗಾ ಲಕ್ಮಲ್, ಲಸಿತ್ ಮಾಲಿಂಗ, ಏಂಜೆಲೊ ಮ್ಯಾಥ್ಯೂಸ್, ಕುಶಾಲ ಮೆಂಡಿಸ್, ಜೀವನ್ ಮೆಂಡಿಸ್, ಕುಶಾಲ ಪೆರೆರಾ, ತಿಸಾರ ಪೆರೆರಾ, ನುವಾನ ಪ್ರದೀಪ್, ಕರುನ್ ರಜಿತಾ, ಮಿಲಿಂದ ಸಿರಿವರ್ಧನ, ಲಾಹಿರು ತಿರಿಮನ್ನೆ, ಇಸುರು ಉಡಾನ, ಜೆಫ್ರಿ ವಾಂಡರ್ಸೆ.

ವೆಸ್ಟ್ ಇಂಡೀಸ್: ಜೇಸನ್ ಹೋಲ್ಡರ್ (ನಾಯಕ), ಫ್ಯಾಬಿಯನ್ ಅಲೆನ್, ಸುನಿಲ್ ಆ್ಯಂಬ್ರಿಸ್, ಕಾರ್ಲೋಸ್ ಬ್ರಾಥ್‌ವೇಟ್, ಡರೆನ್ ಬ್ರಾವೊ, ಶೆಲ್ಡನ್ ಕಾಟ್ರೆಲ್, ಶಾನನ್ ಗ್ಯಾಬ್ರಿಯಲ್, ಕ್ರಿಸ್ ಗೇಲ್, ಶಿಮ್ರೊನ್ ಹೆಟ್ಮೆಯರ್, ಶಾಯ್ ಹೋಪ್, ಎವಿನ್ ಲೂಯಿಸ್, ಆ್ಯಷ್ಲೆ ನರ್ಸ್, ನಿಕೋಲಸ್ ಪೂರನ್. ಕೆಮರ್ ರೋಚ್, ಆ್ಯಂಡ್ರೆ ರಸೆಲ್, ಒಷೆನ್ ಥಾಮಸ್.

ಕ್ರಿಸ್ ಗೇಲ್

ರ‍್ಯಾಂಕಿಂಗ್
ಶ್ರೀಲಂಕಾ: 8
ವೆಸ್ಟ್ ಇಂಡೀಸ್: 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.