ADVERTISEMENT

ಸಚಿನ್‌, ಲಾರಾ ದಾಖಲೆ ಮುರಿದ ಕೊಹ್ಲಿ; ಅತಿ ವೇಗದ 20 ಸಾವಿರ ರನ್ ದಾಖಲೆ

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 13:49 IST
Last Updated 27 ಜೂನ್ 2019, 13:49 IST
   

ಮ್ಯಾಂಚೆಸ್ಟರ್‌: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗದ 20,000 ರನ್‌ ಗಳಿಸಿದ ದಾಖಲೆ ಮಾಡಿದರು.

ಗುರುವಾರ ವೆಸ್ಟ್ ಇಂಡೀಸ್‌ ಎದುರಿನ ಪಂದ್ಯದಲ್ಲಿ ಕೊಹ್ಲಿ 37 ರನ್‌ ಗಳಿಸುತ್ತಿದ್ದಂತೆ 20 ಸಾವಿರ ರನ್‌ ದಾಖಲೆ ಸೃಷ್ಟಿಯಾಯಿತು. ಈಚೆಗಷ್ಟೇ ಏಕದಿನ ಕ್ರಿಕೆಟ್‌ನಲ್ಲಿ ವೇಗದ 11 ಸಾವಿರ ರನ್‌ ಪೂರೈಸಿದ ದಾಖಲೆ ನಿರ್ಮಿಸಿದ್ದರು.

ಈ ಸಾಧನೆಯ ಮೂಲಕ ಸಚಿನ್ ತೆಂಡೂಲ್ಕರ್ ಮತ್ತು ಬ್ರಯನ್ ಲಾರಾ ಅವರ ದಾಖಲೆಯನ್ನು ಹಿಂದಿಟ್ಟಿದ್ದಾರೆ. ಸಚಿನ್ ಮತ್ತು ಲಾರಾ ಇಬ್ಬರೂ 453 ಇನ್ನಿಂಗ್ಸ್‌ಗಳಲ್ಲಿ 20 ಸಾವಿರ ರನ್‌ ಗಡಿ ದಾಟಿದ್ದಾರೆ.

ADVERTISEMENT

ಈವರೆಗೆ ಕೊಹ್ಲಿ ಒಟ್ಟು 417 ಇನ್ನಿಂಗ್ಸ್ ಆಡಿದ್ದು, ಇದರಲ್ಲಿ ಟೆಸ್ಟ್‌ನ 131, ಏಕದಿನದ 233 ಹಾಗೂ ಟಿ–20ಯ 62 ಇನ್ನಿಂಗ್ಸ್‌ ಸೇರಿವೆ.
ಕೊಹ್ಲಿ 20 ಸಾವಿರ ರನ್‌ ಸಾಧನೆ ಮಾಡಿದ ಭಾರತದ ಮೂರನೇ ಮತ್ತು ವಿಶ್ವ ಕ್ರಿಕೆಟ್‌ನ 12ನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಭಾರತದ ಪರ ಸಚಿನ್ (34,357 ರನ್) ಮತ್ತು ರಾಹುಲ್ ದ್ರಾವಿಡ್ (24,208 ರನ್) 20 ಸಾವಿರಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ.

ಇದೇ ಪಂದ್ಯದಲ್ಲಿ ಕೊಹ್ಲಿ 91 ರನ್‌ ಗಳಿಸಿದರೆ, ವೆಸ್ಟ್ ಇಂಡೀಸ್ ತಂಡದ ಎದುರು ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ (1840) ಗಳಿಸಿದ ದಾಖಲೆಯೂ ಕೊಹ್ಲಿ ಪಾಲಾಗಲಿದೆ. ಸದ್ಯ ಈ ದಾಖಲೆ ಪಾಕಿಸ್ತಾನದ ಜಾವೇದ್ ಮಿಯಾಂದಾದ್ (1930) ಹೆಸರಿನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.