ADVERTISEMENT

ಟೀಂ ಇಂಡಿಯಾಗೆ ಅಫ್ಗಾನ್‌ ಬೌಲರ್‌ಗಳ ಕಡಿವಾಣ; ಭಾರತ 8ಕ್ಕೆ 224 ರನ್‌

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 14:03 IST
Last Updated 22 ಜೂನ್ 2019, 14:03 IST
   

ಸೌತಾಂಪ್ಟನ್:ಅಫ್ಗಾನಿಸ್ತಾನದ ಬೌಲರ್‌ಗಳು ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳನ್ನು ಕೊನೆಯವರೆಗೂ ಕಟ್ಟಿ ಹಾಕಿದರು. ಆರಂಭದಲ್ಲಿಯೇ ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ವಿರಾಟ್‌ ಕೊಹ್ಲಿ ಆಸರೆಯಾದರು. ಮಧ್ಯ ಕ್ರಮಾಂಕದಲ್ಲಿ ಕೇದರ್‌ ಜಾಧವ್‌ ನಡೆಸಿದ ಹೋರಾಟದಿಂದ ಭಾರತ ಸಾಧಾರಣ ಮೊತ್ತ ಪೇರಿಸಿತು.

ಕ್ಷಣಕ್ಷಣದ ಸ್ಕೋರ್‌:https://bit.ly/2x8gywP

ನಿಗದಿತ 50 ಓವರ್‌ಗಳಲ್ಲಿ 8ವಿಕೆಟ್‌ ಕಳೆದುಕೊಂಡ ಭಾರತ 224ರನ್‌ ಗಳಿಸಿತು. ಸತತ ಗೆಲುವಿನಿಂದ ವಿಶ್ವಾದಲ್ಲಿರುವ ಭಾರತ ತಂಡ ಶನಿವಾರ ಅಫ್ಗಾನಿಸ್ತಾನ ಎದುರು ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ನಾಯಕ ವಿರಾಟ್‌ ಕೊಹ್ಲಿ(67) ಮತ್ತು ಕೇದಾರ್‌ ಜಾಧವ್‌(52) ಅರ್ಧ ಶತಕದ ನೆರವಿನಿಂದ ತಂಡ 200 ರನ್‌ ಗಡಿ ದಾಟಿತು.

ADVERTISEMENT

ಮಹೇಂದ್ರ ಸಿಂಗ್‌ ಧೋನಿ(28)ಮತ್ತು ಕೇದಾರ್‌ ಜಾಧವ್‌ನಿಧಾನಗತಿಯ ಅರ್ಧಶತಕದ ಜತೆಯಾಟ ನಡೆಸಿದರು. ರಶೀದ್‌ ಖಾನ್‌ ಎಸೆತದಲ್ಲಿ ಧೋನಿ ಸ್ಟಂಪ್‌ ಆಗಿ ವಿಕೆಟ್‌ ಕಳೆದುಕೊಂಡರು. ಇದರೊಂದಿಗೆತಂಡ 200 ರನ್‌ ಗಡಿ ಮುಟ್ಟುವ ಮೊದಲೇ ಪ್ರಮುಖ 5 ವಿಕೆಟ್‌ಗಳು ಪತನಗೊಂಡವು.

ಕೇವಲ ಏಳು ರನ್‌ ಗಳಿಸುವಲ್ಲಿ ಪ್ರಮುಖ ವಿಕೆಟ್‌ ಕಳೆದುಕೊಂಡ ಭಾರತ ತಂಡಕ್ಕೆ ವಿರಾಟ್‌ ಕೊಹ್ಲಿ ಆಸರೆಯಾದರು. ಉತ್ತಮ ಹೊಡೆತಗಳ ಮೂಲಕ ಅರ್ಧ ಶತಕ ಪೂರೈಸಿದ ಕೊಹ್ಲಿ ತಂಡ ರನ್‌ ರೇಟ್‌ ಉತ್ತಮ ಪಡಿಸುವ ಪ್ರಯತ್ನ ನಡೆಸಿದರು. ಆದರೆ, ಅಫ್ಗಾನ್‌ ಸ್ಪಿನ್ನರ್ ಮೊಹಮ್ಮದ್‌ ನಬಿಎಸೆತದಲ್ಲಿ ಕೊಹ್ಲಿ(67 ರನ್‌, 5 ಬೌಂಡರಿ) ಕ್ಯಾಚ್‌ ನೀಡಿ ಹೊರ ನಡೆದರು.

7ನೇ ಓವರ್‌ ವರೆಗೂ ನಿಧಾನ ಗತಿಯಲ್ಲಿ ಬ್ಯಾಟಿಂಗ್‌ನಿಂದ 20 ರನ್‌ಗಳಷ್ಟೇ ಕಲೆ ಹಾಕಿದ್ದ ತಂಡ, ಒಂದೇ ಓವರ್‌ನಲ್ಲಿ 14 ರನ್‌ ಗಳಿಸುವ ಮೂಲಕ ಬಿರುಸಿನ ಆಟ ಪ್ರಾರಂಭಿಸಿತು. ಕೊಹ್ಲಿ ಒಂದೇ ಓವರ್‌ನಲ್ಲಿ2 ಬೌಂಡರಿ ಬಾರಿಸಿ ಎಂದಿನ ಆಟ ಪ್ರದರ್ಶಿಸಿದರು.

ಗಾಯಗೊಂಡು ಟೂರ್ನಿಯಿಂದ ಹೊರಗುಳಿದಿರುವ ಆರಂಭಿಕ ಆಟಗಾರ ಶಿಖರ್‌ ಧವನ್‌ ಬದಲುಆರಂಭಿಕರಾಗಿ ಕಣಕ್ಕಿಳಿದಕೆ.ಎಲ್‌.ರಾಹುಲ್‌(30 ರನ್‌; 2 ಬೌಂಡರಿ), ಮೊಹಮ್ಮದ್‌ ನಬಿ ಎಸೆತದಲ್ಲಿಸಾಹಸಮಯ ಹೊಡೆತಕ್ಕೆ ಮುಂದಾಗಿ ಕ್ಯಾಚ್‌ ನೀಡಿದರು. ಮೊದಲಿಗೆ ಲಯ ಕಂಡುಕೊಳ್ಳಲು ನಿಧಾನ ಗತಿಯ ಆಟವಾಡುತ್ತಿದ್ದ ರಾಹುಲ್‌–ರೋಹಿತ್‌ ಜೋಡಿಗೆ ಮುಝೀಬ್‌ ಉರ್‌ ರಹಮಾನ್‌ 4ನೇ ಓವರ್‌ನಲ್ಲಿ ಕಡಿವಾಣ ಹಾಕಿದರು. 10 ಎಸೆತಗಳಲ್ಲಿ 1 ರನ್‌ ಗಳಿಸಿದ್ದ ರೋಹಿತ್‌ ಶರ್ಮಾ ವಿಕೆಟ್‌ ಒಪ್ಪಿಸಿದರು.

ನಾಲ್ಕನೇ ಕ್ರಮಾಂಕದಲ್ಲಿ ಆಡಿದ ವಿಜಯ್‌ ಶಂಕರ್‌, ತಾಳ್ಮೆಯ ಬ್ಯಾಟಿಂಗ್‌ ಮೂಲಕ 41 ಎಸೆತಗಳಲ್ಲಿ 21 ರನ್‌(2 ಬೌಂಡರಿ) ಗಳಿಸಿದರು. 26ನೇ ಓವರ್‌ನಲ್ಲಿರಹಮತ್‌ ಷಾ ಎಸೆತದಲ್ಲಿ ಶಂಕರ್‌ ಎಲ್‌ಬಿಡಬ್ಲ್ಯುಗೆ ಬಲಿಯಾದರು. ಕೊನೆಯಲ್ಲಿ ಮೊಹಮ್ಮದ್‌ ಶಮಿ ಮತ್ತು ಹಾರ್ದಿಕ್‌ ಪಾಂಡ್ಯ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ರನ್‌ ಹರಿಯುವಿಕೆಗೆ ಅಫ್ಗಾನ್‌ ಸ್ಪಿನ್ನರ್‌ಗಳುತಡೆಯಾದರು. ಮೊಹಮ್ಮದ್‌ನಬಿ ಮತ್ತು ಗುಲ್ಬದೀನ್‌ ನೈಬ್‌ 2 ವಿಕೆಟ್‌,ರಹಮಾನ್‌,ರಹಮತ್ ಷಾ, ಅಫ್ತಬ್ ಆಲಂ ಹಾಗೂ ರಶೀದ್‌ ಖಾನ್‌ ತಲಾ ಒಂದು ವಿಕೆಟ್‌ ಪಡೆದರು.

ಟೀಂ ಇಂಡಿಯಾದ 15 ಆಟಗಾರರಲ್ಲಿ ಸ್ಥಾನ ಪಡೆದಿರುವ ರಿಷಭ್‌ ಪಂತ್‌ ಅವರಿಗೆ ಈ ಪಂದ್ಯದಲ್ಲಿ ಆಡಲು ಅವಕಾಶ ದೊರೆತಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ವಿಜಯ್‌ ಶಂಕರ್‌ ಅವರಿಗೆ ಅವಕಾಶ ನೀಡಲಾಗಿದೆ.

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನು ಆಡಿರುವ ಭಾರತ ತಂಡ ಮೂರರಲ್ಲಿ ಜಯಿಸಿದೆ. ಅದರಲ್ಲಿ ದಕ್ಷಿಣ ಆಫ್ರಿಕಾ, ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ನ್ಯೂಜಿಲೆಂಡ್ ಎದುರಿನ ಪಂದ್ಯ ಮಳೆಯಿಂದ ರದ್ದಾಗಿತ್ತು. 7 ಪಾಯಿಂಟ್‌ಗಳನ್ನು ಹೊಂದಿರುವ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.