ADVERTISEMENT

ವಿಂಡೀಸ್‌ನ ಉರಿ ವೇಗದ ದಾಳಿ ಆಸಿಸ್‌ ಸವಾಲು

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 7:27 IST
Last Updated 6 ಜೂನ್ 2019, 7:27 IST
ವೆಸ್ಟ್ ಇಂಡೀಸ್‌ ತಂಡದ ಕಾರ್ಲೊಸ್ ಬ್ರಾಥ್‌ವೇಟ್ (ಎಡ) ಮತ್ತು ಆ್ಯಶ್ಲೆ ನರ್ಸ್‌ ಬುಧವಾರ ಅಭ್ಯಾಸ ನಡೆಸಿದರು – ಎಎಫ್‌ಪಿ ಚಿತ್ರ
ವೆಸ್ಟ್ ಇಂಡೀಸ್‌ ತಂಡದ ಕಾರ್ಲೊಸ್ ಬ್ರಾಥ್‌ವೇಟ್ (ಎಡ) ಮತ್ತು ಆ್ಯಶ್ಲೆ ನರ್ಸ್‌ ಬುಧವಾರ ಅಭ್ಯಾಸ ನಡೆಸಿದರು – ಎಎಫ್‌ಪಿ ಚಿತ್ರ   

ನಾಟಿಂಗಂ(ಇಂಗ್ಲೆಂಡ್‌): ವೆಸ್ಟ್‌ ಇಂಡೀಸ್‌ನ ಉರಿ ವೇಗದ ದಾಳಿಯನ್ನು ಎದುರಿಸಲು ಆಸ್ಟ್ರೇಲಿಯಾ ತಂಡ ಸಜ್ಜಾಗಿದೆ ಎಂದು ನಾಯಕ ಆ್ಯರನ್‌ ಫಿಂಚ್‌ ಬುಧವಾರ ಹೇಳಿದ್ದಾರೆ. ‌ಆಸ್ಟ್ರೇಲಿಯಾ, ಟ್ರೆಂಟ್‌ಬ್ರಿಜ್‌ನಲ್ಲಿ ಗುರುವಾರ ನಡೆಯಲಿರುವ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ತನ್ನ ಎರಡನೇ ಪಂದ್ಯವನ್ನು ವಿಂಡೀಸ್‌ ವಿರುದ್ಧ ಆಡಲಿದೆ.

ಎರಡೂ ತಂಡಗಳು ತಮ್ಮ ಮೊದಲ ಪಂದ್ಯಗಳನ್ನು ಗೆದ್ದುಕೊಂಡು ಶುಭಾರಂಭ ಮಾಡಿವೆ. ಕಳೆದ ವಾರ, ಕೆರೀಬಿಯನ್‌ ವೇಗದ ಪಡೆ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 105 ರನ್‌ಗಳಿಗೆ ಉರುಳಿಸಿ, ನಂತರ ಏಳು ವಿಕೆಟ್‌ಗಳಿಂದ ಸುಲಭವಾಗಿ ಗೆದ್ದುಕೊಂಡಿತ್ತು. ಆಸ್ಟ್ರೇಲಿಯಾ, ಇನ್ನೊಂದು ಕಡೆ ಅಫ್ಗಾನಿಸ್ತಾನ ತಂಡವನ್ನೂ ಏಳು ವಿಕೆಟ್‌ಗಳಿಂದ ಮಣಿಸಿತ್ತು.

ಆಸ್ಟ್ರೇಲಿಯಾ, ಆರನೇ ಬಾರಿ ಏಕದಿನ ವಿಶ್ವಕಪ್‌ ಗೆದ್ದುಕೊಳ್ಳುವ ಯತ್ನದಲ್ಲಿದೆ. ಕಾಂಗರೂ ತಂಡ 2015ರಲ್ಲಿ ನಡೆದ ಈ ಹಿಂದಿನ ವಿಶ್ವಕಪ್‌ನಲ್ಲೂ ಪ್ರಶಸ್ತಿ ಗೆದ್ದುಕೊಂಡಿತ್ತು. ಆದರೆ ಸ್ಫೋಟಕ ಆರಂಭ ಆಟಗಾರ ಕ್ರಿಸ್‌ ಗೇಲ್‌ ಅಂಥವರು ಇರುವಾಗ ವೆಸ್ಟ್‌ ಇಂಡೀಸ್‌ ತಂಡದ ಎದುರಿನ ಪಂದ್ಯವನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಫಿಂಚ್‌ ಎಚ್ಚರಿಸಿದರು.

ADVERTISEMENT

‘ಕ್ರಿಸ್‌ ಅಂಥ ಅಪಾಯಕಾರಿ ಆಟಗಾರ ಎದುರಿನಲ್ಲಿರುವಾಗ ನಾವು ಎಲ್ಲದ್ದಕ್ಕೂ ಸಿದ್ಧರಾಗಿರಬೇಕು. ಈ ಹಿಂದೆಯೂ ನಾನು ಹೇಳಿದಂತೆ ಆತ ಸರಾಗವಾಗಿ ಬೌಂಡರಿಗಳನ್ನು ಬಾರಿಸಬಲ್ಲ’ ಎಂದು ಅವರು ಬುಧವಾರ ತಂಡ ಅಭ್ಯಾಸ ನಡೆಸಿದ ನಂತರ ಮಾಧ್ಯಮದವರಿಗೆ ತಿಳಿಸಿದರು.‌

ಟ್ರೆಂಟ್‌ಬ್ರಿಜ್‌ ಕ್ರೀಡಾಂಗಣ ನೆನಪಿನಲ್ಲುಳಿಯುವ ತಾಣ. ಇದೇ ಕ್ರೀಡಾಂಗಣದಲ್ಲಿ ಹೋದ ವರ್ಷ ಏಕದಿನ ಪಂದ್ಯದ ಇನಿಂಗ್ಸ್‌ ಒಂದರ ಅತ್ಯಧಿಕ ಮೊತ್ತ, 481 ರನ್‌ ದಾಖಲಾಗಿತ್ತು. ಆದರೆ ಆ ಪಂದ್ಯದಲ್ಲಿ ಇಂಗ್ಲೆಂಡ್‌, ಆಸ್ಟ್ರೇಲಿಯಾ ವಿರುದ್ಧ ಜಯಗಳಿಸಿತ್ತು.

ತಂಡಗಳು ಇಂತಿವೆ
ಆಸ್ಟ್ರೇಲಿಯಾ:
ಆ್ಯರನ್‌ ಫಿಂಚ್‌ (ನಾಯಕ), ಜೇಸನ್‌ ಬೆಹ್ರನ್‌ಡಾಫ್‌, ಅಲೆಕ್ಸ್‌ ಕ್ಯಾರೆ, ನತಾನ್‌ ಕೌಲ್ಟರ್‌ನೈಲ್‌, ಪ್ಯಾಟ್‌ ಕಮಿನ್ಸ್‌, ಉಸ್ಮಾನ್‌ ಕ್ವಾಜಾ, ನತಾನ್‌ ಲಯನ್‌, ಶಾನ್‌ ಮಾರ್ಷ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಕೇನ್‌ ರಿಚರ್ಡ್‌ಸನ್‌, ಸ್ಟೀವ್‌ ಸ್ಮಿತ್‌, ಮಿಷೆಲ್‌ ಸ್ಟಾರ್ಕ್‌, ಮಾರ್ಕಸ್‌ ಸ್ಟೊಯಿನಿಸ್‌, ಡೇವಿಡ್‌ ವಾರ್ನರ್‌, ಆ್ಯಂಡಂ ಜಂಪಾ.

ವೆಸ್ಟ್‌ ಇಂಡೀಸ್‌: ಜೇಸನ್‌ ಹೋಲ್ಡರ್‌ (ನಾಯಕ), ಫ್ಯಾಬ್ಲಾನ್ ಆ್ಯಲನ್‌, ಕಾರ್ಲೋಸ್‌ ಬ್ರಾಥ್‌ವೇಟ್‌, ಡ್ಯಾರೆನ್‌ ಬ್ರಾವೊ, ಶೆಲ್ಡನ್‌ ಕಾರ್ಟ್‌ರೆಲ್‌, ಶಾನನ್‌ ಗೇಬ್ರಿಯಲ್‌, ಕ್ರಿಸ್‌ ಗೇಲ್‌, ಶಿಮ್ರಾನ್‌ ಹೆಟ್ಮೆಯರ್‌, ಶಾಯ್‌ ಹೋಪ್‌, ಎವಿನ್‌ ಲೂಯಿಸ್‌, ಆ್ಯಶ್ಲೆ ನರ್ಸ್‌, ನಿಕೋಲಸ್‌ ಪೂರನ್‌, ಕೇಮರ್‌ ರೋಚ್‌, ಆ್ಯಂಡ್ರೆ ರಸೆಲ್‌, ಒಶಾನೆ ಥಾಮಸ್‌.

ಆರಂಭ: ಮಧ್ಯಾಹ್ನ 3.00 (ಭಾರತೀಯ ಕಾಲಮಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.