ADVERTISEMENT

ರೋಜರ್‌, ಮದನ್‌ ಮ್ಯಾಜಿಕ್‌

ವಿಶ್ವಕಪ್‌ ಹೆಜ್ಜೆ ಗುರುತು–11

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 13:11 IST
Last Updated 17 ಫೆಬ್ರುವರಿ 2020, 13:11 IST
ಮದನ್‌ ಲಾಲ್‌ –ಪ್ರಜಾವಾಣಿ ಸಂಗ್ರಹ ಚಿತ್ರ
ಮದನ್‌ ಲಾಲ್‌ –ಪ್ರಜಾವಾಣಿ ಸಂಗ್ರಹ ಚಿತ್ರ   

ಮೊದಲ ಪಂದ್ಯದಲ್ಲಿ ಎರಡು ಬಾರಿಯ ಚಾಂ‍ಪಿಯನ್‌ ವೆಸ್ಟ್‌ ಇಂಡೀಸ್‌ಗೆ ಆಘಾತ ನೀಡಿ ಕ್ರಿಕೆಟ್‌ ಜಗತ್ತಿನ ಗಮನ ಸೆಳೆದಿದ್ದ ಕಪಿಲ್‌ ದೇವ್‌ ಬಳಗ ಎರಡನೇ ಹಣಾಹಣಿಯಲ್ಲೂ ನಿರೀಕ್ಷೆ ಹುಸಿ ಮಾಡಲಿಲ್ಲ.

ವಿಂಡೀಸ್‌ ಎದುರಿನ ಗೆಲುವಿನಿಂದಾಗಿ ವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದ ಭಾರತ, ಲೀಸ್ಟರ್‌ನ ಗ್ರೇಡ್‌ ರೋಡ್‌ ಕ್ರೀಡಾಂಗಣದಲ್ಲಿ ಜೂನ್‌ 11ರಂದು ನಡೆದಿದ್ದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸುಲಭವಾಗಿ ಜಯದ ತೋರಣ ಕಟ್ಟಿತ್ತು. ಡಂಕನ್‌ ಫ್ಲೆಚರ್‌ ಮುಂದಾಳತ್ವದ ಜಿಂಬಾಬ್ವೆ, ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಅಚ್ಚರಿಯ ಗೆಲುವು ದಾಖಲಿಸಿತ್ತು. ಆದರೆ ಕಪಿಲ್‌ ಬಳಗದ ಎದುರು ಈ ತಂಡದ ಆಟ ನಡೆದಿರಲಿಲ್ಲ.

* ಬ್ಯಾಟಿಂಗ್ ಆರಂಭಿಸಿದ ಜಿಂಬಾಬ್ವೆಗೆ ಬಲ್ವಿಂದರ್‌ ಸಂಧು ಆರಂಭದಲ್ಲೇ ಆಘಾತ ನೀಡಿದರು. ಅಲಿ ಶಾ ಅವರು ಸೈಯದ್‌ ಕಿರ್ಮಾನಿಗೆ ಕ್ಯಾಚ್‌ ನೀಡಿದಾಗ ಫ್ಲೆಚರ್‌ ಪಡೆಯ ಖಾತೆಯಲ್ಲಿ ಇದ್ದದ್ದು ಕೇವಲ 13ರನ್‌.
* ನಂತರ ಕಪಿಲ್‌ ಪಡೆ ಇನ್ನಷ್ಟು ಕರಾರುವಾಕ್ಕಾಗಿ ದಾಳಿ ನಡೆಸಿತ್ತು. ಮದನ್‌ ಲಾಲ್ ಮತ್ತು ರೋಜರ್‌ ಬಿನ್ನಿ ಮೋಡಿ ಮಾಡಿದ್ದರು. ಇವರು ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಪಡೆದು ಎದುರಾಳಿಗಳ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಿದ್ದರು.
* ಫ್ಲೆಚರ್‌ ಸೇರಿದಂತೆ ಪ್ರಮುಖ ಆಟಗಾರರ ವೈಫಲ್ಯದಿಂದಾಗಿ ಜಿಂಬಾಬ್ವೆ 155ರನ್‌ಗಳಿಗೆ ಆಲೌಟ್‌ ಆಗಿತ್ತು. 52ನೇ ಓವರ್‌ನಲ್ಲಿ ಜಾನ್‌ ಟ್ರೈಕೊಸ್‌ ರನ್‌ಔಟ್‌ ಆಗುತ್ತಿದ್ದಂತೆ ತಂಡದ ಇನಿಂಗ್ಸ್‌ಗೆ ತೆರೆಬಿದ್ದಿತ್ತು.
* ಗುರಿ ಬೆನ್ನಟ್ಟಿದ್ದ ಭಾರತ 32ರನ್‌ಗಳಿಸುವಷ್ಟರಲ್ಲಿ ಆರಂಭಿಕರಾದ ಸುನಿಲ್ ಗಾವಸ್ಕರ್‌ ಮತ್ತು ಕೃಷ್ಣಮಾಚಾರಿ ಶ್ರೀಕಾಂತ್‌ ವಿಕೆಟ್‌ ಕಳೆದುಕೊಂಡಿತ್ತು.
* ಮೋಹಿಂದರ್‌ ಅಮರನಾಥ್‌ (44; 79ಎ, 4ಬೌಂ) ಮತ್ತು ಸಂದೀಪ್‌ ಪಾಟೀಲ್‌ (50; 54ಎ, 7ಬೌಂ, 1ಸಿ) ಮೂರನೇ ವಿಕೆಟ್‌ಗೆ 69ರನ್‌ ಸೇರಿಸಿದ್ದರು. ಕಪಿಲ್‌ ಪಡೆ 37.3 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತ್ತು.
* ಈ ಹೋರಾಟದಲ್ಲಿ ಕರ್ನಾಟಕದ ವಿಕೆಟ್‌ ಕೀಪರ್‌ ಕಿರ್ಮಾನಿ ಒಟ್ಟು ಐದು ಕ್ಯಾಚ್‌ ಪಡೆದು ಗಮನ ಸೆಳೆದಿದ್ದರು.
* ಪಂದ್ಯದಲ್ಲಿ ಏಕೈಕ ಸಿಕ್ಸರ್‌ ಸಿಡಿಸಿದ ಹಿರಿಮೆ ಸಂದೀಪ್‌ ಪಾಟೀಲ್‌ ಅವರದ್ದಾಗಿತ್ತು.
* ಅದೇ ದಿನ ಟೌಂಟನ್‌ನಲ್ಲಿ ನಡೆದಿದ್ದ ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್‌ ಮತ್ತು ಶ್ರೀಲಂಕಾ ಮುಖಾಮುಖಿಯಾಗಿದ್ದವು.
* ಮೊದಲು ಬ್ಯಾಟ್‌ ಮಾಡಿದ್ದ ಆಂಗ್ಲರ ನಾಡಿನ ತಂಡ 9 ವಿಕೆಟ್‌ಗೆ 333ರನ್‌ ಪೇರಿಸಿತ್ತು.
* ಮೂರನೇ ಕ್ರಮಾಂಕದ ಆಟಗಾರ ಡೇವಿಡ್‌ ಗೋವರ್‌ ಸ್ಫೋಟಕ ಶತಕದ ಮೂಲಕ ತವರಿನ ಅಭಿಮಾನಿಗಳನ್ನು ರಂಜಿಸಿದ್ದರು. 120 ಎಸೆತ ಎದುರಿಸಿದ್ದ ಅವರು 130ರನ್‌ ಗಳಿಸಿದ್ದರು. 12 ಬೌಂಡರಿ ಮತ್ತು 5 ಸಿಕ್ಸರ್‌ ಸಿಡಿಸಿದ್ದರು.
* ದುಲೀಪ್‌ ಮೆಂಡೀಸ್‌ ನೇತೃತ್ವದ ಲಂಕಾ 58 ಓವರ್‌ಗಳಲ್ಲಿ 286ರನ್‌ಗಳಿಗೆ ಆಲೌಟ್‌ ಆಗಿತ್ತು.
* ಮತ್ತೊಂದು ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ 101 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿತ್ತು.

ADVERTISEMENT
ಮೋಹಿಂದರ್‌ ಅಮರನಾಥ್ (ಎಡ) ಮತ್ತು ರೋಜರ್‌ ಬಿನ್ನಿ –ಪ್ರಜಾವಾಣಿ ಸಂಗ್ರಹ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.