
ದೆಹಲಿ: ನಾಯಕಿ ಜೆಮಿಮಾ ರಾಡ್ರಿಗಸ್ ಅವರ ಅಜೇಯ ಅರ್ಧಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ಹಾಲಿ ಚಾಂಪಿಯನ್ ಮುಂಬೈ ತಂಡವನ್ನು ಮಣಿಸಿತು.
ಮಂಗಳವಾರ ಕೊತಂಬಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಥಾಲಿಯಾ ಶಿವರ್ ಬ್ರಂಟ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಜೊತೆಯಾಟದ ಬಲದಿಂದ ಮುಂಬೈ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 154 ರನ್ ಗಳಿಸಿತು. ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ದೆಹಲಿ ತಂಡಕ್ಕೆ ಲಿಜೆಲ್ ಲೀ (46; 28ಎ) ಹಾಗೂ ಶಫಾಲಿ ವರ್ಮಾ (29; 24ಎ) ಉತ್ತಮ ಆರಂಭ ಒದಗಿಸಿದರು.
ಈ ಉಪಯುಕ್ತ ಬುನಾದಿಯ ಮೇಲೆ ಜೆಮಿಮಾ (ಔಟಾಗದೇ 51; 37) ತಾಳ್ಮೆಯುತ ಬ್ಯಾಟಿಂಗ್‌ನೊಂದಿಗೆ ಗೆಲುವಿನ ಸೌಧ ಕಟ್ಟಿದರು. ಡೆಲ್ಲಿ ತಂಡವು 19 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ತಲುಪಿತು. ಹರ್ಮನ್ ಬಳಗವು ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಬೇಕಾಯಿತು.
ಇದಕ್ಕೆ ಮೊದಲು, ಎಡಗೈ ಸ್ಪಿನ್ನರ್ ಶ್ರೀಚರಣಿ (33ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ಎದುರು ರನ್ ಗಳಿಸಲು ಪರದಾಡಿದ ಮುಂಬೈ ತಂಡಕ್ಕೆ ಬ್ರಂಟ್ ಹಾಗೂ ಹರ್ಮನ್ ಆಸರೆಯಾದರು. ಈ ಜೋಡಿ ಮೂರನೇ ವಿಕೆಟ್ ಜೊತೆಯಾಟದಲ್ಲಿ 78 ರನ್ ಸೇರಿಸಿತು. ಅದರಿಂದಾಗಿ ಮುಂಬೈ ಗೌರವಯುತ ಮೊತ್ತ ಗಳಿಸಿತು. ದಕ್ಷಿಣ ಆಫ್ರಿಕಾದ ವೇಗಿ ಮರೈಝಾನ್ ಕಾಪ್ ಅವರು 4 ಓವರ್‌ಗಳಲ್ಲಿ ಕೇವಲ 8 ರನ್ ನೀಡಿ ಕಡಿವಾಣ ಹಾಕಿದರು.
ಸಂಕ್ಷಿಪ್ತ ಸ್ಕೋರು: ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 5ಕ್ಕೆ154 (ನಾಟ್ ಶಿವರ್ ಬ್ರಂಟ್ ಔಟಾಗದೇ 65, ಹರ್ಮನ್‌ಪ್ರೀತ್ ಕೌರ್ 41, ನಿಕೊಲಾ ಕ್ಯಾರಿ 12, ಶ್ರೀಚರಣಿ 33ಕ್ಕೆ3).
ಡೆಲ್ಲಿ ಕ್ಯಾಪಿಟಲ್ಸ್: 19 ಓವರ್‌ಗಳಲ್ಲಿ 3 ವಿಕೆಟ್‌ಗೆ 155 (ಜೆಮಿಮಾ ರಾಡ್ರಿಗಸ್ ಔಟಾಗದೇ 51, ಲಿಜೆಲ್ ಲೀ 46, ಶಫಾಲಿ ವರ್ಮಾ 29; ವೈಷ್ಣವಿ ಶರ್ಮಾ 20ಕ್ಕೆ1).
ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 7 ವಿಕೆಟ್ ಜಯ. ಪಂದ್ಯದ ಆಟಗಾರ್ತಿ: ಜೆಮಿಮಾ ರಾಡ್ರಿಗಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.