
ನವಿ ಮುಂಬೈ: ನಾಯಕಿ ಮೆಗ್ ಲ್ಯಾನಿಂಗ್ (70;45ಎ) ಮತ್ತು ಫೋಬಿ ಲಿಚ್‌ಫೀಲ್ಡ್ (61;37ಎ) ಅವರ ಮಿಂಚಿನ ಅರ್ಧಶತಕಗಳ ನೆರವಿನಿಂದ ಯು.ಪಿ. ವಾರಿಯರ್ಸ್ ತಂಡವು ಶನಿವಾರ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ 22 ರನ್‌ಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿತು.
ವಾರಿಯರ್ಸ್ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಎರಡು ಬಾರಿಯ ಚಾಂಪಿಯನ್ ಮುಂಬೈ ವಿರುದ್ಧ ಸತತ ಎರಡನೇ ಗೆಲುವು ಇದಾಗಿದೆ. ಗುರುವಾರ ವಾರಿಯರ್ಸ್ ಏಳು ವಿಕೆಟ್‌ಗಳಿಂದ ಹರ್ಮನ್‌ಪ್ರೀತ್ ಕೌರ್ ಪಡೆಗೆ ಆಘಾತ ನೀಡಿತ್ತು. ಇದರೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲೂ ಕೊನೆಯ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆಯಿತು.
ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಲ್ಪಟ್ಟ ವಾರಿಯರ್ಸ್ ತಂಡವು ಲ್ಯಾನಿಂಗ್ ಮತ್ತು ಲಿಚ್‌ಫೀಲ್ಡ್ ಅವರ ಶತಕದ ಜೊತೆಯಾಟದ ಬಲದಿಂದ 8 ವಿಕೆಟ್‌ಗೆ 187 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ತಂಡವು ಆರಂಭದಲ್ಲೇ ಆಘಾತ ಅನುಭವಿಸಿತು. 69 ರನ್ ಗಳಿಸುವಷ್ಟರಲ್ಲಿ ಅಗ್ರ ಐದು ಬ್ಯಾಟರ್‌ಗಳು ಪೆವಿಲಿಯನ್ ಸೇರಿಕೊಂಡರು. ನಂತರದಲ್ಲಿ ಅಮೆಲಿಯಾ ಕೆರ್ (ಔಟಾಗದೇ 49;28ಎ) ಮತ್ತು ಅಮನ್ಜೋತ್ ಕೌರ್ (41;24ಎ) ಹೋರಾಟ ತೋರಿದರೂ ಗೆಲುವಿಗೆ ಸಾಕಾಗಲಿಲ್ಲ. ತಂಡವು 6 ವಿಕೆಟ್‌ಗೆ 165 ರನ್ ಗಳಿಸಲಷ್ಟೇ ಶಕ್ತವಾಯಿತು. ಶಿಖಾ ಪಾಂಡೆ ಎರಡು ವಿಕೆಟ್ ಕಬಳಿಸಿದರು.
ಇದಕ್ಕೂ ಮೊದಲು ವಾರಿಯರ್ಸ್ ತಂಡದ ಆರಂಭ ಆಟಗಾರ್ತಿ ಕಿರಣ್ ನವಗಿರೆ ಅವರ ವೈಫಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು. ಕಳೆದ ಐದು ಪಂದ್ಯಗಳಲ್ಲಿ ಅವರ ಗಳಿಕೆ 1, 5, 0, 10 ಮತ್ತು 0 ಆಗಿದೆ. ಅವರ ನಿರ್ಗಮನದ ಬಳಿಕ ಲ್ಯಾನಿಂಗ್ ಮತ್ತು ಲಿಚ್‌ಫೀಲ್ಡ್ ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 119 (74ಎ) ರನ್ ಸೇರಿಸಿದರು.
ನಂತರದಲ್ಲಿ ಹರ್ಲೀನ್ ಡಿಯೊಲ್ (25;16ಎ) ಮತ್ತು ಕ್ಲೊಯೆ ಟ್ರಯಾನ್ (21;13ಎ) ಅವರು ತಂಡದ ಮೊತ್ತವನ್ನು ದ್ವಿಶತಕದ ಸನಿಹ ಕೊಂಡೊಯ್ಯಲು ನೆರವಾದರು.
ಸಂಕ್ಷಿಪ್ತ ಸ್ಕೋರ್:
ಯು.ಪಿ ವಾರಿಯರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 187 (ಮೆಗ್ ಲ್ಯಾನಿಂಗ್ 70, ಫೋಬಿ ಲಿಚ್‌ಫೀಲ್ಡ್ 61, ಹರ್ಲೀನ್ ಡಿಯೊಲ್ 25; ಅಮೆಲಿಯಾ ಕೆರ್ 28ಕ್ಕೆ 3, ನಾಟ್ ಶಿವರ್ ಬ್ರಂಟ್ 22ಕ್ಕೆ 2). ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 165 (ಅಮೆಲಿಯಾ ಔಟಾಗದೇ 49, ಅಮನ್ಜೋತ್ ಕೌರ್ 41; ಶಿಖಾ ಪಾಂಡೆ 30ಕ್ಕೆ 2).
ಪಂದ್ಯದ ಆಟಗಾರ್ತಿ: ಮೆಗ್ ಲ್ಯಾನಿಂಗ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.