ಐದು ವಿಕೆಟ್ ಪಡೆದ ಶ್ರೇಯಾಂಕಾ ಪಾಟೀಲ
ನವಿ ಮುಂಬೈ: ಶ್ರೇಯಾಂಕಾ ಪಾಟೀಲ ಅವರ ಐದು ವಿಕೆಟ್ ಗೊಂಚಲು ಹಾಗೂ ರಾಧಾ ಯಾದವ್ ಅವರ ಅರ್ಧಶತಕದ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಶುಕ್ರವಾರ 32 ರನ್‌ಗಳಿಂದ ಗುಜರಾತ್ ಜೈಂಟ್ಸ್ ತಂಡವನ್ನು ಮಣಿಸಿತು.
ಅನುಭವಿ ಆಟಗಾರ್ತಿಯರಾದ ರಾಧಾ ಯಾದವ್ ಮತ್ತು ರಿಚಾ ಘೋಷ್ ಅವರು ಶತಕದ ಜೊತೆಯಾಟವಾಡಿ ಆರ್‌ಸಿಬಿ ತಂಡ ಸವಾಲಿನ ಮೊತ್ತ ಗಳಿಸಲು ನೆರವಾದರು. 183 ರನ್ ಗುರಿ ಬೆನ್ನಟ್ಟಿದ ಜೈಂಟ್ಸ್ ತಂಡಕ್ಕೆ ಕನ್ನಡತಿ ಶ್ರೇಯಾಂಕಾ (23ಕ್ಕೆ5) ಹಾಗೂ ಇಂಗ್ಲೆಂಡ್‌ನ ವೇಗಿ ಲಾರೆನ್ ಬೆಲ್ (29ಕ್ಕೆ3) ಆಘಾತ ನೀಡಿದರು. ಇವರಿಬ್ಬರ ಜಂಟಿ ಬೌಲಿಂಗ್ ದಾಳಿ ಎದುರು ಆ್ಯಷ್ಲೆ ಗಾರ್ಡನರ್ ಬಳಗವು 18.5 ಓವರ್‌ಗಳಲ್ಲಿ 150 ರನ್‌ಗಳಿಗೆ ಸರ್ವಪತನವಾಯಿತು. ಸ್ಮೃತಿ ಮಂದಾನ ಪಡೆ ಹ್ಯಾಟ್ರಿಕ್ ಗೆಲುವನ್ನು ಸಂಭ್ರಮಿಸಿತು.
ಆರಂಭ ಆಟಗಾರ್ತಿ ಬೆತ್ ಮೂನಿ (27; 14ಎ) ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಭಾರತಿ ಫೂಲ್ಮಾಲಿ (39; 20ಎ) ಹೋರಾಟ ತೋರಿದರು. ಬೆತ್ ಅವರನ್ನು ಶ್ರೇಯಾಂಕಾ ಸ್ಪಿನ್ ಬಲೆಗೆ ಬೀಳಿಸಿದರೆ, ಬೆಲ್ ಎಸೆದ ಓವರ್‌ನಲ್ಲಿ ಭಾರತಿ ಗ್ರೇಸ್ ಹ್ಯಾರಿಸ್‌ಗೆ ಕ್ಯಾಚಿತ್ತರು. ಉಳಿದ ಬ್ಯಾಟರ್‌ಗಳು ಹೆಚ್ಚಿನ ಪ್ರತಿರೋಧ ತೋರಲಿಲ್ಲ.
ಇದಕ್ಕೆ ಮೊದಲು, 43 ರನ್‌ಗಳಿಸುವಷ್ಟರಲ್ಲಿ ನಾಲ್ವರು ಪ್ರಮುಖ ಬ್ಯಾಟರ್‌ಗಳನ್ನು ಕಳೆದು ಕೊಂಡಿದ್ದ ಆರ್‌ಸಿಬಿ ತಂಡಕ್ಕೆ ರಾಧಾ (66, 47 ಎಸೆತ) ಹಾಗೂ ರಿಚಾ (44, 28 ಎಸೆತ) ನೆರವಾದರು. ಈ ಜೋಡಿ ಐದನೇ ವಿಕೆಟ್‌ಗೆ 105 ರನ್ ಜೊತೆಯಾಟವಾಡಿತು. ಇದ ರಿಂದ, 2023ರ ಚಾಂಪಿಯನ್ ತಂಡವನ್ನು ಅಲ್ಪಮೊತ್ತಕ್ಕೆ ಸೀಮಿತಗೊಳಿಸುವ ಜೈಂಟ್ಸ್ ಲೆಕ್ಕಾಚಾರ ಈಡೇರಲಿಲ್ಲ.
ಜೈಂಟ್ಸ್ ವೇಗದ ಬೌಲರ್‌ಗಳು, ಅದರಲ್ಲೂ ವಿಶೇಷವಾಗಿ ಕಶ್ವಿ ಗೌತಮ್ (42ಕ್ಕೆ2) ಅವರು ವಿಕೆಟ್‌ನ ತಾಜಾತನದ ಲಾಭಪಡೆದು ಆರ್‌ಸಿಬಿ ಬ್ಯಾಟರ್ ಗಳನ್ನು ಕಾಡಿದರು. ಕಶ್ವಿ ತಮ್ಮ ಎರಡನೇ ಓವರಿನಲ್ಲಿ ಆರಂಭ ಆಟಗಾರ್ತಿ ಗ್ರೇಸ್ ಹ್ಯಾರಿಸ್ (17, 8ಎ, 4x4) ಮತ್ತು ಮೂರನೇ ಓವರಿನಲ್ಲಿ ಡಿ.ಹೇಮಲತಾ ಅವರ ವಿಕೆಟ್‌ಗಳನ್ನು ಪಡೆದರು.
ಇನಿಂಗ್ಸ್‌ನ ಮೊದಲ ಓವರಿನಲ್ಲಿ 23 ರನ್ ತೆತ್ತು ದುಬಾರಿಯೆನಿಸಿದ್ದ ಮಧ್ಯಮ ವೇಗಿ ರೇಣುಕಾ ಸಿಂಗ್ ತಮ್ಮ ಮೂರನೇ ಓವರಿನಲ್ಲಿ ನಾಯಕಿ ಸ್ಮೃತಿ ಮಂದಾನ (5) ಅವರ ವಿಕೆಟ್ ಪಡೆದು ಬೆಂಗಳೂರಿನ ತಂಡಕ್ಕೆ ಬಲವಾದ ಪೆಟ್ಟು ನೀಡಿದರು. ಆರನೇ ಓವರಿನಲ್ಲಿ ತಂಡ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಈ ವೇಳೆ ರಾಧಾ ಯಾದವ್ ಮತ್ತು ರಿಚಾ ಘೋಷ್ ಇನಿಂಗ್ಸ್ ಕಟ್ಟಿದರು. ಕೊನೆಯಲ್ಲಿ ಆಲ್‌ರೌಂಡರ್ ನದೀನ್ ಡಿ ಕ್ಲರ್ಕ್ ಬಿರುಸಿನ ಆಟವಾಡಿ 12 ಎಸೆತಗಳಲ್ಲಿ ಎರಡು ಬೌಂಡರಿ, ಎರಡು ಸಿಕ್ಸರ್‌ಗಳಿದ್ದ 26 ರನ್ ಬಾರಿಸಿದ ಪರಿಣಾಮ ಆರ್‌ಸಿಬಿ ಉತ್ತಮ ಮೊತ್ತ ತಲುಪಲು ಸಾಧ್ಯವಾಯಿತು. ನ್ಯೂಜಿಲೆಂಡ್ ವೇಗಿ ಸೋಫಿ ಡಿವೈನ್ 31 ರನ್‌ಗಳಿಗೆ 3 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರು:
ಆರ್‌ಸಿಬಿ: 20 ಓವರುಗಳಲ್ಲಿ 7ಕ್ಕೆ 182 (ರಾಧಾ ಯಾದವ್ 66, ರಿಚಾ ಘೋಷ್ 44, ನದಿನ್ ಡಿ ಕ್ಲರ್ಕ್ 26; ರೇಣುಕಾ ಸಿಂಗ್ 41ಕ್ಕೆ1, ಕಶ್ವಿ ಗೌತಮ್ 42ಕ್ಕೆ2, ಸೋಫಿ ಡಿವೈನ್ 31ಕ್ಕೆ3).
ಗುಜರಾತ್ ಜೈಂಟ್ಸ್: 18.5 ಓವರ್‌ಗಳಲ್ಲಿ 150 (ಬೆತ್ ಮೂನಿ 27, ಭಾರತಿ ಫೂಲ್ಮಾಲಿ 39; ಶ್ರೇಯಾಂಕಾ 23ಕ್ಕೆ5, ಲಾರೆನ್ ಬೆಲ್ 29ಕ್ಕೆ3).
ಫಲಿತಾಂಶ: ಆರ್‌ಸಿಬಿ ತಂಡಕ್ಕೆ 32 ರನ್ ಜಯ.
ಪಂದ್ಯದ ಆಟಗಾರ್ತಿ: ರಾಧಾ ಯಾದವ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.