ADVERTISEMENT

WTC Final: 3ನೇ ಸ್ಥಾನದಲ್ಲಿರುವ ಭಾರತಕ್ಕೆ ಫೈನಲ್ ಪ್ರವೇಶ ಸಾಧ್ಯವೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2024, 11:31 IST
Last Updated 10 ಡಿಸೆಂಬರ್ 2024, 11:31 IST
<div class="paragraphs"><p>ಟೀಮ್ ಇಂಡಿಯಾ</p></div>

ಟೀಮ್ ಇಂಡಿಯಾ

   

(ಚಿತ್ರ ಕೃಪೆ: ಬಿಸಿಸಿಐ)

ಬೆಂಗಳೂರು: ಮೂರನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ರೋಚಕ ಹಂತವನ್ನು ತಲುಪಿದ್ದು, ಫೈನಲ್‌ಗೆ ಯಾವೆಲ್ಲ ತಂಡಗಳು ಪ್ರವೇಶಿಸಲಿವೆ ಎಂಬುದು ಕುತೂಹಲ ಮೂಡಿಸಿವೆ.

ADVERTISEMENT

2023-25ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಇನ್ನು 10 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿದ್ದು, ಪ್ರಶಸ್ತಿಗಾಗಿ ಸೆಣಸಲಿವೆ.

ನಾಲ್ಕು ತಂಡಗಳ ನಡುವೆ ನಿಕಟ ಪೈಪೋಟಿ...

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ರೇಸ್‌ನಲ್ಲಿ ನಾಲ್ಕು ತಂಡಗಳ ನಡುವೆ ನಿಕಟ ಪೈಪೋಟಿ ಏರ್ಪಟ್ಟಿವೆ. ಭಾರತ ಸೇರಿದಂತೆ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಅಗ್ರ ಎರಡು ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿವೆ.

ದ.ಆಫ್ರಿಕಾ ನಂ.1, ಭಾರತ ನಂ.3

ಈಗಿನ ಅಂಕಪಟ್ಟಿ ಪ್ರಕಾರ ದಕ್ಷಿಣ ಆಫ್ರಿಕಾ 63.33 ಶೇಕಡಾವಾರು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ (60.71%) ಮತ್ತು ಭಾರತ (57.29%) ಅನುಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. ಶ್ರೀಲಂಕಾ (45.45%) ನಾಲ್ಕನೇ ಸ್ಥಾನದಲ್ಲಿದೆ.

ಭಾರತದ ಫೈನಲ್ ಪ್ರವೇಶ ಹೇಗೆ ಸಾಧ್ಯ?

ಸತತ ಮೂರನೇ ಸಲ ಡಬ್ಲ್ಯುಟಿಸಿ ಫೈನಲ್‌ಗೆ ಪ್ರವೇಶಿಸಲು ಭಾರತಕ್ಕೆ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸರಣಿಯು ಅತ್ಯಂತ ನಿರ್ಣಾಯಕವೆನಿಸಿದೆ.

ಪರ್ತ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ 295 ರನ್ ಅಂತರದ ಗೆಲುವು ದಾಖಲಿಸಿದ್ದ ಭಾರತ, ಅಡಿಲೇಡ್‌ನಲ್ಲಿ ನಡೆದ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಅಂತರದ ಹೀನಾಯ ಸೋಲಿಗೆ ಶರಣಾಗಿತ್ತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 1-1ರ ಅಂತರದ ಸಮಬಲ ಸಾಧಿಸಿದೆ.

ಡಬ್ಲ್ಯುಟಿಸಿ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಾತ್ರಿಪಡಿಸಲು ಭಾರತ, ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೆದ್ದು, ಉಳಿದೊಂದು ಪಂದ್ಯದಲ್ಲಿ ಕನಿಷ್ಠ ಡ್ರಾ ಫಲಿತಾಂಶ ಕಾಣಬೇಕಿದೆ.

ಹಾಗಾದ್ದಲ್ಲಿ ಭಾರತದ ಶೇಕಡಾವಾರು ಪಾಯಿಂಟ್ 60.53ಕ್ಕೆ ಏರಿಕೆಯಾಗಲಿದೆ. ಅಲ್ಲದೆ ದಕ್ಷಿಣ ಆಫ್ರಿಕಾ ಬಳಿಕ ಎರಡನೇ ತಂಡವಾಗಿ ಫೈನಲ್‌ಗೆ ಪ್ರವೇಶಿಸುವ ಅವಕಾಶವಿದೆ. ಒಂದು ವೇಳೆ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಆಸ್ಟ್ರೇಲಿಯಾ 2-0 ಅಂತರದ ಗೆಲುವು ಸಾಧಿಸಿದರೂ ಭಾರತದ ಸ್ಥಾನ ಅಬಾಧಿತವಾಗಿರಲಿದೆ. ಅಂತಹ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಶೇಕಡಾವಾರು ಪಾಯಿಂಟ್ 57.02 ಆಗಿರಲಿದೆ.

ಹಾಗೊಂದು ವೇಳೆ ಆಸ್ಟ್ರೇಲಿಯಾ ಸರಣಿಯಲ್ಲಿ ವೈಫಲ್ಯ ಕಂಡರೆ ಭಾರತದ ಫೈನಲ್ ಪ್ರವೇಶ ಇನ್ನಷ್ಟು ಕಠಿಣವೆನಿಸಲಿದೆ. ಅಲ್ಲದೆ ಇತರೆ ಸರಣಿಗಳ ಫಲಿತಾಂಶಗಳನ್ನು ಅವಲಂಬಿಸಿರುತ್ತದೆ.

ಅಂದ ಹಾಗೆ ಡಬ್ಲ್ಯುಸಿಟಿ ಮೊದಲೆರಡು ಆವೃತ್ತಿಗಳಲ್ಲಿ ಫೈನಲ್‌ಗೆ ಪ್ರವೇಶಿಸಿದ್ದ ಭಾರತ ಎರಡೂ ಬಾರಿಯೂ ರನ್ನರ್-ಅಪ್ ಆಗಿತ್ತು. ಈಗ ಹ್ಯಾಟ್ರಿಕ್ ಫೈನಲ್ ಸಾಧನೆಯೊಂದಿಗೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.