ADVERTISEMENT

ದ್ರಾವಿಡ್–ಯುವಿಯನ್ನು ಅದಲು–ಬದಲು ಮಾಡಲಾಗದು: ನಾಯಕತ್ವದ ಬಗ್ಗೆ ಗಂಗೂಲಿ ಮಾತು

ಏಜೆನ್ಸೀಸ್
Published 5 ಜೂನ್ 2020, 8:16 IST
Last Updated 5 ಜೂನ್ 2020, 8:16 IST
   

ನವದೆಹಲಿ:ಅತ್ಯುತ್ತಮ ನಾಯಕರು ತಮ್ಮ ತಪ್ಪುಗಳಿಂದಲೇ ಪಾಠ ಕಲಿಯುತ್ತಾರೆ. ಸೋಲುಗಳು ಅವರನ್ನು ಮುಂದುವರಿಯದಂತೆ ಮಾಡಲು ಸಾಧ್ಯವೇ ಇಲ್ಲ ಎಂದು ಬಿಸಿಸಿಐ ಮುಖ್ಯಸ್ಥ ಸೌರವ್‌ ಗಂಗೂಲಿ ಹೇಳಿದ್ದಾರೆ.

ಮ್ಯಾಚ್‌ ಫಿಕ್ಸಿಂಗ್‌ ಹಗರಣದ ಬಳಿಕ ದೇಶದ ಕ್ರಿಕೆಟ್‌ ಸಂಕಷ್ಟಕ್ಕೆ ಸಿಲುಕಿದ್ದಾಗ ಗಂಗೂಲಿ ಭಾರತ ಕ್ರಿಕೆಟ್‌ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಅದಾದ ಬಳಿಕ ಯಶಸ್ವಿ ನಾಯಕನಾಗಿ ತಂಡ ಮುನ್ನಡೆಸಿದ್ದರು.

ನಾಯಕತ್ವದ ಬಗ್ಗೆ ಮಾತನಾಡಿದ ಗಂಗೂಲಿ, ಉತ್ತಮ ನಾಯಕನಲ್ಲಿ ಹೊಂದಿಕೊಳ್ಳುವ ಗುಣವಿರಬೇಕು ಎಂದು ಅಭಿಪ್ರಾಯಪಟ್ಟರು. ಮುಂದುವರಿದು, ‘ತಂಡದ ಸಹ ಸದಸ್ಯರ ಸಹಜ ಪ್ರತಿಭೆಯನ್ನು ನಾಯಕ ಗುರುತಿಸಬೇಕು. ರಾಹುಲ್‌ ದ್ರಾವಿಡ್‌ ಅವರನ್ನು ಯುವರಾಜ್‌ ಸಿಂಗ್‌ ಅವರಂತೆ ಅಥವಾ ಯುವಿಯನ್ನು ದ್ರಾವಿಡ್‌ ರೀತಿ ಬದಲಿಸಲು ಸಾಧ್ಯವಿಲ್ಲ. ಹಾಗೆ ಮಾಡುವುದು ದೊಡ್ಡ ದುರಂತ’ ಎಂದು ಹೇಳಿದ್ದಾರೆ.

ADVERTISEMENT

ಸದ್ಯ ಬಿಸಿಸಿಐ ಅಧ್ಯಕ್ಷರಾಗಿರುವ ಗಂಗೂಲಿ, ‘ಶ್ರೇಷ್ಠ ನಾಯಕರೂ ತಪ್ಪು ಮಾಡುತ್ತಾರೆ. ಆದರೆ, ಉದ್ದೇಶಗಳು ಸರಿ ಇರುವವರೆಗೆ ಯೋಜನೆಗಳು ಸರಿಯಾಗಿ ಜಾರಿಯಾಗುತ್ತವೆ. ನೀವು ನಿಮ್ಮ ತಪ್ಪುಗಳಿಂದಲೇ ಕಲಿಯಬೇಕು ಮತ್ತು ಅವುಗಳಿಂದಲೇ ನೀವು ಹೊಸ ರೀತಿಯಲ್ಲಿ ಬದಲಾಗಬೇಕು. ನಿಮ್ಮ ಸೋಲುಗಳು ನಿಮ್ಮನ್ನು ಕುಸಿಯುವಂತೆ ಮಾಡಲು ಬಿಡಬೇಡಿ. ಅದು ಬೆಳವಣಿಗೆಯ ಒಂದು ಭಾಗ. ವೈಫಲ್ಯಗಳಿಂದ ಕಲಿಯುವುದು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ’ ಎಂದು ತಿಳಿಸಿದ್ದಾರೆ.

2012ರಲ್ಲಿ ಕ್ರಿಕೆಟ್‌ಗೆ ವಿದಾಯಹೇಳಿದ ಗಂಗೂಲಿ ಬಿಸಿಸಿಐನಲ್ಲಿ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಬಿಸಿಸಿಐ ಚುಕ್ಕಾಣಿ ಹಿಡಿಯುವ ಮುನ್ನ, ಬಂಗಾಳ ಕ್ರಿಕೆಟ್‌ ಮಂಡಳಿ (ಸಿಎಬಿ) ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.