ADVERTISEMENT

‘ಕಾಫಿ’ ವಿವಾದಕ್ಕೆ ಡ್ರೆಸ್ಸಿಂಗ್ ರೂಮ್ ವಾತಾವರಣವೇ ಕಾರಣ

ಸಾಮಾಜಿಕ ಜಾಲತಾಣಗಳ ನಂಟಿನಿಂದ ಆಟಗಾರರ ಶಿಸ್ತು ಭಂಗ ಯುವರಾಜ್ ಸಿಂಗ್ ಅನಿಸಿಕೆ

ಪಿಟಿಐ
Published 8 ಏಪ್ರಿಲ್ 2020, 19:45 IST
Last Updated 8 ಏಪ್ರಿಲ್ 2020, 19:45 IST
ಯುವರಾಜ್ ಸಿಂಗ್
ಯುವರಾಜ್ ಸಿಂಗ್   

ನವದೆಹಲಿ: ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್. ರಾಹುಲ್ ಅವರ ಕಾಫಿ ವಿತ್ ಕರಣ್ ರೀತಿಯ ವಿವಾದವು ತಮ್ಮ ಕಾಲದಲ್ಲಿ ಆಗಲು ಸಾಧ್ಯವೇ ಇರಲಿಲ್ಲ. ಏಕೆಂದರೆ ಆಗ ತಂಡದಲ್ಲಿ ರೋಲ್‌ ಮಾಡೆಲ್‌ಗಳು ಇದ್ದರು. ಡ್ರೆಸ್ಸಿಂಗ್ ರೂಮ್ ವಾತಾವರಣ ಶಿಸ್ತಿನಿಂದ ಕೂಡಿತ್ತು ಎಂದು ಕ್ರಿಕೆಟಿಗ ಯುವರಾಜ್ ಸಿಂಗ್ ಹೇಳಿದ್ದಾರೆ.

ಮಂಗಳವಾರ ರಾತ್ರಿ ಇಸ್ಟಾಗ್ರಾಮ್‌ನಲ್ಲಿ ಆಟಗಾರ ರೋಹಿತ್ ಶರ್ಮಾ ಮತ್ತು ಯುವಿ ನಡುವಣ ಸಂವಾದ ನಡೆಯಿತು.

ರೋಹಿತ್ ಕೇಳಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಯುವಿ,‘ಇವತ್ತು ಆಟಗಾರರು ಈ ರೀತಿಯಾಗಲು ಸಾಮಾಜಿಕ ಜಾಲತಾಣಗಳಿಗೆ ಅಂಟಿಕೊಂಡಿರುವುದೇ ಕಾರಣ. ನಾನು ಮತ್ತು ನೀವು (ರೋಹಿತ್) ತಂಡಕ್ಕೆ ಕಾಲಿಟ್ಟಾಗ ಇದ್ದ ಶಿಸ್ತು ಈಗ ಕಾಣುವುದಿಲ್ಲ. ಆ ಕಾಲಘಟ್ಟದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಇಷ್ಟೊಂದು ಇರಲಿಲ್ಲ. ನಾವು ತಪ್ಪು ಮಾಡಿದಾಗ ತಂಡದ ಹಿರಿಯರೇ ತಿದ್ದುತ್ತಿದ್ದರು. ಉತ್ತಮ ದಾರಿ ತೋರಿಸುತ್ತಿದ್ದರು’ ಎಂದಿದ್ದಾರೆ.

ADVERTISEMENT

‘ಸದ್ಯದ ಭಾರತ ಕ್ರಿಕೆಟ್ ತಂಡದಲ್ಲಿ ರೋಲ್‌ ಮಾಡೆಲ್‌ಗಳ ಕೊರತೆ ಇದೆ. ಅದರಿಂದಾಗಿ ಕಿರಿಯರು ಹಿರಿಯರನ್ನು ಗೌರವಿಸುತ್ತಿಲ್ಲ ಮತ್ತು ಅದರಿಂದ ಶಿಸ್ತಿಗೆ ಭಂಗ ಬರುತ್ತಿದೆ’ ಎಂದಿದ್ದಾರೆ.

‘ನಮ್ಮ ಹಿರಿಯ ಆಟಗಾರರು ಮಾಧ್ಯಮದವರೊಂದಿಗೆ ಮತ್ತು ಅಭಿಮಾನಿಗಳೊಂದಿಗೆ ಮಾತನಾಡುವ ರೀತಿ. ಆಟದ ಅಂಗಳ ಮತ್ತು ಹೊರಗಿನ ಒಳ್ಳೆಯ ನಡೆನುಡಿಗಳನ್ನು ನಾವು ಅನುಕರಿಸುತ್ತಿದ್ದೆವು. ಏಕೆಂದರೆ ಒಬ್ಬ ಆಟಗಾರನು ಆ ದೇಶದ ಮತ್ತು ಆಟದ ರಾಯಭಾರಿಯಾಗಿರುತ್ತಾನೆ. ನಮ್ಮ ನಡೆನುಡಿ, ಸ್ವಭಾವಗಳು ಜನರ ಮೇಲೆ ಪ್ರಭಾವ ಬೀರುತ್ತವೆ’ ಎಂದು 2011ರ ವಿಶ್ವಕಪ್ ವಿಜೇತ ಭಾರತ ತಂಡದ ಹೀರೊ ಯುವಿ ಹೇಳಿದ್ದಾರೆ.

‘ಒಂದೊಮ್ಮೆ ಭಾರತ ತಂಡವನ್ನು ಪ್ರತಿನಿಧಿಸತೊಡಗಿದಾಗ ನಮ್ಮ ವರ್ಚಸ್ಸಿನ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಈಗಿನ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ನೀವು (ರೋಹಿತ್) ಮಾತ್ರ ಎಲ್ಲ ಮೂರು ಮಾದರಿಗಳಲ್ಲಿಯೂ ಆಡುತ್ತಿದ್ದೀರಿ. ಅದಕ್ಕೆ ತಕ್ಕ ಶಿಸ್ತು, ಸಂಯಮ ಮತ್ತು ನಡವಳಿಕೆ ಹೊಂದಿದ್ದೀರಿ. ಉಳಿದವರು ಬರುತ್ತಿದ್ದಾರೆ , ಹೋಗುತ್ತಿದ್ದಾರೆ’ ಎಂದು ಯುವಿ ವಿಶ್ಲೇಷಿಸಿದರು.

‘ಸಾಮಾಜಿಕ ಜಾಲತಾಣಗಳು, ಪಾರ್ಟಿಗಳ ರಂಗಿನ ಲೋಕಗಳ ನಂಟಿನಿಂದಾಗಿ ಚಿತ್ತಚಂಚಲರಾಗುತ್ತಿದ್ದಾರೆ. ನಾವು ಆಡುವ ಸಂದರ್ಭದಲ್ಲಿ ಹಿರಿಯ ಆಟಗಾರರು ನಮ್ಮನ್ನು ತಪ್ಪನ್ನು ಕಂಡುಹಿಡಿದು ಗದರಿಸುತ್ತಾರೆಂಬ ಭಯ ಇತ್ತು’ ಎಂದು ನೆನಪಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.