ADVERTISEMENT

ಎಎಫ್‌ಸಿ ಏಷ್ಯಾ ಕಪ್‌ ಫುಟ್‌ಬಾಲ್‌ ಟೂರ್ನಿ: ಚೀನಾಗೆ ಮಣಿದ ಕಿರ್ಗಿಸ್ತಾನ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 20:01 IST
Last Updated 7 ಜನವರಿ 2019, 20:01 IST
ಚೀನಾ (ಕೆಂಪು ಪೋಷಾಕು) ಮತ್ತು ಕಿರ್ಗಿಸ್ತಾನ ಆಟಗಾರರ ಪೈಪೋಟಿಯ ಕ್ಷಣ –ಎಎಫ್‌ಪಿ ಚಿತ್ರ
ಚೀನಾ (ಕೆಂಪು ಪೋಷಾಕು) ಮತ್ತು ಕಿರ್ಗಿಸ್ತಾನ ಆಟಗಾರರ ಪೈಪೋಟಿಯ ಕ್ಷಣ –ಎಎಫ್‌ಪಿ ಚಿತ್ರ   

ಅಬುಧಾಬಿ: ಅಪೂರ್ವ ಆಟ ಆಡಿದ ಚೀನಾ ತಂಡ ಎಎಫ್‌ಸಿ ಏಷ್ಯಾಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಶೇಖ್‌ ಖಲೀಫಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ಸಿ’ ಗುಂಪಿನ ಹಣಾಹಣಿಯಲ್ಲಿ ಚೀನಾ 2–1 ಗೋಲುಗಳಿಂದ ಕಿರ್ಗಿಸ್ತಾನ ತಂಡವನ್ನು ಪರಾಭವಗೊಳಿಸಿತು. ಇದರೊಂದಿಗೆ ಪೂರ್ಣ ಮೂರು ಪಾಯಿಂಟ್ಸ್‌ ಕಲೆಹಾಕಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ತನ್ನದಾಗಿಸಿಕೊಂಡಿತು.

ಬಲಿಷ್ಠ ಆಟಗಾರರನ್ನು ಹೊಂದಿದ್ದ ಉಭಯ ತಂಡಗಳು ಆರಂಭದಿಂದಲೇ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಹೀಗಾಗಿ ಆರಂಭದ 40 ನಿಮಿಷಗಳ ಆಟ ಗೋಲು ರಹಿತವಾಗಿತ್ತು. ಬಳಿಕ ಕಿರ್ಗಿಸ್ತಾನ, ಆಟದ ವೇಗ ಹೆಚ್ಚಿಸಿಕೊಂಡಿತು. 42ನೇ ನಿಮಿಷದಲ್ಲಿ ಈ ತಂಡಕ್ಕೆ ಯಶಸ್ಸು ಲಭಿಸಿತು.

ADVERTISEMENT

ಮುರ್ಜಾಯೆವ್‌ ತಮ್ಮತ್ತ ಒದ್ದು ಕಳುಹಿಸಿದ ಚೆಂಡಿನ ಮೇಲೆ ಚುರುಕಾಗಿ ನಿಯಂತ್ರಣ ಸಾಧಿಸಿದ ಮಿಡ್‌ ಫೀಲ್ಡರ್‌ ಅಖಲಿದಿನ್‌ ಇಸ್ರಾಯಿಲೊವ್‌ ಅದನ್ನು ಸೊಗಸಾದ ರೀತಿಯಲ್ಲಿ ಗುರಿ ಮುಟ್ಟಿಸಿ ಸಂಭ್ರಮಿಸಿದರು.

ದ್ವಿತೀಯಾರ್ಧದಲ್ಲಿ ಕಿರ್ಗಿಸ್ತಾನಕ್ಕೆ ಆಘಾತ ಎದುರಾಯಿತು. ಗೋಲ್‌ಕೀಪರ್‌ ಪವೆಲ್‌ ಮತಿಯಾಸ್‌ ಮಾಡಿದ ಎಡವಟ್ಟು ಈ ತಂಡಕ್ಕೆ ಮುಳುವಾಯಿತು. ಪವೆಲ್‌ ಅವರು ತಮ್ಮದೇ ಗೋಲುಪೆಟ್ಟಿಗೆಯೊಳಗೆ ಚೆಂಡನ್ನು ಒದ್ದರು. ಹೀಗಾಗಿ ಚೀನಾ ಖಾತೆಗೆ ‘ಉಡುಗೊರೆ’ ರೂಪದಲ್ಲಿ ಗೋಲು ಸೇರ್ಪಡೆಯಾಯಿತು. ಜೊತೆಗೆ 1–1 ಸಮಬಲ ಕಂಡುಬಂತು.

ನಂತರ ಎರಡೂ ತಂಡಗಳ ಆಟಗಾರರು ಆಕ್ರಮಣಕಾರಿ ಆಟಕ್ಕೆ ಅಣಿಯಾದರು. 78ನೇ ನಿಮಿಷದಲ್ಲಿ ಯು ಡಬಾವೊ, ಚೀನಾ ಪಾಳಯದಲ್ಲಿ ಖುಷಿ ಮೂಡಿಸಿದರು. ಸಹ ಆಟಗಾರ ತಮ್ಮತ್ತ ತಳ್ಳಿದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಅವರು ಅದನ್ನು ಚುರುಕಾಗಿ ಗುರಿ ಸೇರಿಸಿ ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದರು.

ಬಳಿಕದ ಅವಧಿಯಲ್ಲಿ ಕಿರ್ಗಿಸ್ತಾನ, ಸಮಬಲದ ಗೋಲು ಗಳಿಸಲು ಸಾಕಷ್ಟು ಪ್ರಯತ್ನಿಸಿತು. ಹೆಚ್ಚುವರಿ ಅವಧಿಯಲ್ಲೂ ಈ ತಂಡ ಕೆಚ್ಚೆದೆಯಿಂದ ಹೋರಾಡಿತು. ಹೀಗಿದ್ದರೂ ಚೀನಾ ‘ಮಹಾ ಗೋಡೆ’ಯನ್ನು ಭೇದಿಸಿ ಚೆಂಡನ್ನು ಗುರಿ ತಲುಪಿಸಲು ಈ ತಂಡದ ಆಟಗಾರರಿಗೆ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.