ADVERTISEMENT

ಎಎಫ್‌ಸಿ ಏಷ್ಯನ್ ಕಪ್: ಭಾರತಕ್ಕೆ ಪ್ರಬಲ ವಿಯೆಟ್ನಾಂ ಸವಾಲು

ಪಿಟಿಐ
Published 3 ಮಾರ್ಚ್ 2026, 14:06 IST
Last Updated 3 ಮಾರ್ಚ್ 2026, 14:06 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಪರ್ತ್: ಭಾರತ ತಂಡವು, ಎಎಫ್‌ಸಿ ಮಹಿಳಾ ಏಷ್ಯನ್ ಕಪ್ ಫುಟ್‌ಬಾಲ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ತನಗಿಂತ ಮೇಲಿನ ಕ್ರಮಾಂಕದ ವಿಯೆಟ್ನಾಂ ತಂಡವನ್ನು ಬುಧವಾರ ಎದುರಿಸಲಿದೆ. ಸುಮಾರು ನಾಲ್ಕು ತಿಂಗಳಿಂದ ಅಂತರರಾಷ್ಟ್ರೀಯ ಪಂದ್ಯಗಳ ಅನುಭವ ಇಲ್ಲದಿರುವುದು ತಂಡದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

‘ಸಿ’ ಗುಂಪಿನಲ್ಲಿ ಭಾರತ, ವಿಯೆಟ್ನಾಂ ಜೊತೆ, ಜಪಾನ್ ಮತ್ತು ಚೀನಾ ತೈಪಿ ತಂಡಗಳಿವೆ. ಈ ಗುಂಪಿನಲ್ಲಿರುವ ತಂಡಗಳ ಪೈಕಿ ಭಾರತದ ಕ್ರಮಾಂಕ ಕೆಳಮಟ್ಟದಲ್ಲಿದೆ. ವಿಶ್ವ ಕ್ರಮಾಂಕದಲ್ಲಿ ವಿಯೆಟ್ನಾಂ 36ನೇ ಸ್ಥಾನದಲ್ಲಿದೆ. ಭಾರತ ವನಿತೆಯರು 67ನೇ  ಸ್ಥಾನದಲ್ಲಿದ್ದಾರೆ.

ADVERTISEMENT

ಭಾರತ ಈ ವರ್ಷ ಯಾವುದೇ ಪಂದ್ಯವನ್ನು ಆಡಿಲ್ಲ. 2025ರ ಅಕ್ಟೋಬರ್‌ನಲ್ಲಿ ಕೊನೆಯ ಬಾರಿ ಅಂತರರಾಷ್ಟ್ರೀಯ ಪಂದ್ಯಗಳನ್ನು (ಇರಾನ್ ಮತ್ತು ನೇಪಾಳ ವಿರುದ್ಧ) ಆಡಿದ್ದು, ಕ್ರಮವಾಗಿ 0–2 ಮತ್ತು 1–2 ರಿಂದ ಸೋಲನುಭವಿಸಿತ್ತು.

ಟರ್ಕಿಯಲ್ಲಿ ನಾಲ್ಕು ವಾರಗಳ ಶಿಬಿರದಲ್ಲಿ ಭಾರತ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡುವ ಬದಲು ಕ್ಲಬ್‌ಗಳ ವಿರುದ್ಧ ಆಡಿತ್ತು. ತಂಡ ಅಲ್ಲಿಂದಲೇ ನೇರವಾಗಿ ಫೆ. 11ರಂದು  ಪರ್ತ್‌ಗೆ ಬಂದಿಳಿದಿದೆ. ಪರ್ತ್‌ನಲ್ಲಿ ಭಾರತ ಆಸ್ಟ್ರೇಲಿಯಾದ ಕ್ಲಬ್ ತಂಡಗಳ ಜೊತೆ ಅಭ್ಯಾಸ ಪಂದ್ಯಗಳನ್ನು ಆಡಿದೆ. 

ವಿಯೆಟ್ನಾಂ ತಂಡವು ಫೆಬ್ರುವರಿಯಲ್ಲಿ ನಾಲ್ಕು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಅದೂ ಪ್ರಬಲ ತಂಡಗಳಾದ ಉಜ್ಬೇಕಿಸ್ತಾನ ಮತ್ತು ಚೀನಾ ವಿರುದ್ಧ. ನಾಲ್ಕರಲ್ಲಿ ಒಂದು ಗೆದ್ದು, ಮೂರು ಸೋತಿದೆ. 

ಭಾರತ ತಂಡವು ಈ ಟೂರ್ನಿಯಲ್ಲಿ ನಾಕೌಟ್ ತಲುಪುವ ಗುರಿಯನ್ನು ಇಟ್ಟುಕೊಂಡಿದೆ. ಈ ಹಂತ ತಲುಪಿದಲ್ಲಿ 2027 ಫಿಫಾ ಮಹಿಳಾ ವಿಶ್ವಕಪ್‌ ಅರ್ಹತಾ ಟೂರ್ನಿಯಲ್ಲಿ ಆಡುವ ಅವಕಾಶ ಲಭಿಸಲಿದೆ.

ಪ್ರತಿ ಗುಂಪಿನ ಅಗ್ರ ಎರಡು ತಂಡಗಳ ಜೊತೆ ಅತ್ಯುತ್ತಮ ಸಾಧನೆ ತೋರಿದ ಮೂರನೇ ಸ್ಥಾನದ ಎರಡು ತಂಡಗಳು ಕ್ವಾರ್ಟರ್‌ಫೈನಲ್ ತಲುಪಲಿವೆ. ಸೆಮಿಫೈನಲ್ ತಲಪುವ ತಂಡಗಳು 2027ರ ಫಿಫಾ ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಪಡೆಯಲಿವೆ.

ಸಿ ಗುಂಪಿನಲ್ಲಿ ಇತರ ಪಂದ್ಯಗಳಲ್ಲಿ ಭಾರತ 7ರಂದು ಜಪಾನ್ ವಿರುದ್ಧ, 10ರಂದು ತೈವಾನ್ ವಿರುದ್ಧ ಡಲಿದೆ.

ಯುವ–ಅನುಭವಿಗಳ ಮಿಶ್ರಣ

26 ಮಂದಿಯ ಭಾರತ ತಂಡದಲ್ಲಿ ಆರು ಮಂದಿ ಹೊಸಬರಿದ್ದಾರೆ. ಈ ತಂಡದ ಎಂಟು ಮಂದಿ ಭಾರತದ  ಆತಿಥ್ಯದಲ್ಲಿ ನಡೆದ 2022ರ ಏಷ್ಯನ್ ಕಪ್‌ನಲ್ಲಿ ಆಡಿದ್ದರು. ಗ್ರೇಸ್ ಡಾಂಗ್ಮಿ ಅನುಭವಿ ಆಟಗಾರ್ತಿಯಾಗಿದ್ದು, 91 ಪಂದ್ಯಗಳನ್ನು ಆಡಿದ್ದು, 23 ಗೋಲುಗಳನ್ನು ಗಳಿಸಿದ್ದಾರೆ. 20 ವರ್ಷ ವಯಸ್ಸಿ್ನ ಶಿಲ್ಕಿ ದೇವಿ ಹೆಮಮ್ ಅವರು ತಂಡದ ಅತಿ ಕಿರಿಯ ಆಟಗಾರ್ತಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.