ADVERTISEMENT

ಪಿಚ್‌ಗೆ ನುಗ್ಗಿ ಫುಟ್‌ಬಾಲ್‌ ರೆಫ್ರಿ ಮೇಲೆ ಹಲ್ಲೆ– ಫೀಫಾ ಖಂಡನೆ

ಟರ್ಕಿ: ಅಂಕಾರಾದಲ್ಲಿ ಸೂಪರ್‌ ಲೀಗ್‌ ಫುಟ್‌ಬಾಲ್ ಪಂದ್ಯದ ವೇಳೆ ಘಟನೆ

ಎಎಫ್‌ಪಿ
ಎಪಿ
Published 13 ಡಿಸೆಂಬರ್ 2023, 4:36 IST
Last Updated 13 ಡಿಸೆಂಬರ್ 2023, 4:36 IST
   

ಅಂಕಾರಾ : ಟರ್ಕಿಯ ಅಂಕಾರಾದಲ್ಲಿ ಸೂಪರ್‌ ಲೀಗ್‌ ಫುಟ್‌ಬಾಲ್ ಪಂದ್ಯವೊಂದು ಮುಗಿದ ತಕ್ಷಣವೇ ಮೈದಾನಕ್ಕೆ ಧಾವಿಸಿದ ಕ್ಲಬ್‌ವೊಂದರ ಅಧ್ಯಕ್ಷ, ರೆಫ್ರಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸೋಮವಾರ ನಡೆದಿದೆ. ಇದರ ಬೆನ್ನಿಗೇ ಟರ್ಕಿಯ ಫುಟ್‌ಬಾಲ್‌ ಫೆಡರೇಷನ್, ಮುಂದಿನ ಎಲ್ಲ ಲೀಗ್‌ ಪಂದ್ಯಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಿದೆ.

ಜಾಯ್ಕುರ್‌ ರಿಝೆಸ್‌ಪಾಷ್ ಕ್ಲಬ್ ವಿರುದ್ಧ ಸೋಮವಾರ ನಡೆದ ಪಂದ್ಯಕ್ಕೆ ಮುಕ್ತಾಯದ ಸೀಟಿ ಊದುತ್ತಿದ್ದಂತೆ ಎದುರಾಳಿ ಎಂಕೆಇ ಅಂಕಾರಾಗುಜು ಕ್ಲಬ್ ಅಧ್ಯಕ್ಷ ಫಾರೂಕ್ ಕೋಜಾ ಅವರು ಗುಂಪಿನೊಡನೆ ಪಿಚ್‌ಗೆ ಧಾವಿಸಿ ರೆಫ್ರಿ ಹಲೀಲ್ ಉಮುತ್ ಮೆಲೆರ್ ಅವರ ಮುಖಕ್ಕೆ ಗುದ್ದಿದ್ದಾರೆ. ಏಟು ತಪ್ಪಿಸಲು ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡ ಅವರು ಕೆಳಕ್ಕೆ ಬಿದ್ದಿದ್ದಾರೆ. ಮತ್ತೊಬ್ಬರು ಮೆಲೆರ್‌ ಅವರನ್ನು ಒದೆಯುತ್ತಿರುವ ದೃಶ್ಯಾವಳಿಗಳು ದಾಖಲಾಗಿವೆ. ರೆಫ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ಪಂದ್ಯ 1–1 ಡ್ರಾ ಆಗಿತ್ತು.

ಅಧಿಕಾರಿಗೆ ಗಾಯಗೊಳಿಸಿದ ಮತ್ತು ಬೆದರಿಕೆ ಒಡ್ಡಿದ ಕಾರಣಕ್ಕೆ ಕೋಜಾ ಮತ್ತಿಬ್ಬರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ತೊಡಗಿದ ಉಳಿದವರನ್ನೂ ಬಂಧಿಸ ಲಾಗುವುದು ಎಂದು ಟರ್ಕಿಯ ನ್ಯಾಯ ಸಚಿವ ಇಲ್ಮಾಝ್ ತುಂಕ್ ‘ಎಕ್ಸ್‌’ನಲ್ಲಿ ಬರೆದಿದ್ದಾರೆ.  ನ್ಯಾಯಾಲಯವೊಂದು ಬಂಧಿತ ಮೂವರನ್ನು ವಿಚಾರಣೆ ಪೂರ್ವ ಪೊಲೀಸ್ ವಶಕ್ಕೆ ನೀಡಿದೆ. ಕೋಜಾ ಅವರು ಆಡಳಿತಾರೂಢ ಎಕೆಪಿ ಸ್ಥಾಪಕ ಸದಸ್ಯರಾಗಿದ್ದು, ಸರ್ಕಾರಕ್ಕೆ ಈ ಪ್ರಕರಣ ಮುಜುಗರ ಉಂಟುಮಾಡಿದೆ.

ADVERTISEMENT

‘ಒಪ್ಪಲಾಗದ ಕೃತ್ಯ‘

ಪ್ಯಾರಿಸ್‌ ವರದಿ: ಹಲ್ಲೆ ಪ್ರಕರಣವನ್ನು ವಿಶ್ವ ಫುಟ್‌ಬಾಲ್‌ ಸಂಸ್ಥೆ (ಫೀಫಾ) ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಅವರು ಮಂಗಳವಾರ ಖಂಡಿಸಿದ್ದಾರೆ. ಇದು ‘ಒಪ್ಪಲಾಗದ ಕೃತ್ಯ’ ಎಂದು ಟೀಕಿಸಿದ್ದಾರೆ.

‘ಕ್ರೀಡಾಂಗಣದೊಳಗೆ ಆಗಲಿ, ಆಚೆಯೇ ಆಗಲಿ ಫುಟ್‌ ಬಾಲ್‌ನಲ್ಲಿ ಹಿಂಸೆಗೆ ಅವಕಾಶವೇ ಇಲ್ಲ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಇನ್ಫಾಂಟಿನೊ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.