ಬೆಂಗಳೂರು: ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಬೆಂಗಳೂರು ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್‌ನ ಪಂದ್ಯದಲ್ಲಿ ಭಾನುವಾರ ಜೆಮ್‌ಶೆಡ್‌ಪುರ ಎಫ್‌ಸಿ ತಂಡವನ್ನು ಎದುರಿಸಲಿದೆ.
ಕೊನೆಯ ಆರು ಪಂದ್ಯಗಳ ಪೈಕಿ ಒಂದರಲ್ಲಿ ಡ್ರಾ ಸಾಧಿಸಿ, ಉಳಿದ ಐದು ಪಂದ್ಯಗಳಲ್ಲಿ ಸೋತಿರುವ ಸುನಿಲ್ ಚೆಟ್ರಿ ಬಳಗವು ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಹಣಾಹಣಿಯಲ್ಲಿ ಮತ್ತೆ ಗೆಲುವಿನ ಹಳಿಗೆ ಮರಳುವ ಛಲದಲ್ಲಿದೆ.
ತವರಿನಲ್ಲಿ ಆರಂಭದ ಏಳು ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದ್ದ ಬಿಎಫ್‌ಸಿ ತಂಡವು ಕೊನೆಯ ಎರಡು ಪಂದ್ಯಗಳಲ್ಲಿ (ಮೊಹಮ್ಮಡನ್ ಮತ್ತು ಒಡಿಶಾ ಎಫ್‌ಸಿ ವಿರುದ್ಧ) ಪರಾಭವಗೊಂಡಿತ್ತು. ಈ ಮೊದಲು ಜೆಮ್‌ಶೆಡ್‌ಪುರ ತಂಡದ ತವರಿನಲ್ಲಿ ನಡೆದ ಪಂದ್ಯದಲ್ಲಿ 2–1ರಿಂದ ಸೋತಿದ್ದ ಬೆಂಗಳೂರು ತಂಡವು ಇದೀಗ ತನ್ನ ತವರಿನಲ್ಲಿ ಮುಯ್ಯಿ ತೀರಿಸಿಕೊಳ್ಳುವ ತವಕದಲ್ಲಿದೆ.
ಆಡಿರುವ 19 ಪಂದ್ಯಗಳ ಪೈಕಿ ಎಂಟು ಪಂದ್ಯಗಳನ್ನು ಗೆದ್ದಿರುವ ಬೆಂಗಳೂರು ತಂಡವು 28 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಜೆಮ್‌ಶೆಡ್‌ಪುರ ತಂಡವು 18 ಪಂದ್ಯಗಳಲ್ಲಿ 11 ಅನ್ನು ಗೆದ್ದು, 34 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಉತ್ತಮ ಲಯದಲ್ಲಿರುವ ಜೆಮ್‌ಶೆಡ್‌ಪುರ ತಂಡವು ಕೊನೆಯ ಆರು ಪಂದ್ಯಗಳ ಪೈಕಿ ನಾಲ್ಕನ್ನು ಗೆದ್ದುಕೊಂಡರೆ, ಒಂದರಲ್ಲಿ ಡ್ರಾ ಸಾಧಿಸಿದೆ. ಕೊನೆಯ ಪಂದ್ಯಗಳಲ್ಲಿ ಗೋವಾ ಎಫ್‌ಸಿ ವಿರುದ್ಧ ಪಂಜಾಬ್ ಎಫ್‌ಸಿ ವಿರುದ್ಧ ಗೆಲುವು ಸಾಧಿಸಿದೆ.
‘ಪ್ರತಿ ಪಂದ್ಯವನ್ನು ಗೆಲ್ಲುವುದು ನಮ್ಮ ಮುಂದಿರುವ ಯೋಜನೆ. ಕಂಠೀರವ ಕ್ರೀಡಾಂಗಣದಲ್ಲಿ ತವರಿನ ಪ್ರೇಕ್ಷಕರ ಮುಂದೆ ಉತ್ತಮ ಪೈಪೋಟಿಯ ನಿರೀಕ್ಷೆಯಿದೆ’ ಎಂದು ಬಿಎಫ್‌ಸಿ ಮುಖ್ಯ ಕೋಚ್ ಜೆರಾರ್ಡ್ ಝರಗೋಜಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.