ADVERTISEMENT

ಬಿಎಫ್‌ಸಿಗೆ ಕ್ರಿಸ್ಟಿಯನ್‌, ಫ್ರಾನ್ಸಿಸ್ಕೊ ಬಲ

ಪಿಟಿಐ
Published 20 ಅಕ್ಟೋಬರ್ 2020, 14:47 IST
Last Updated 20 ಅಕ್ಟೋಬರ್ 2020, 14:47 IST
ಬೆಂಗಳೂರು ಎಫ್‌ಸಿ ಲೋಗೊ
ಬೆಂಗಳೂರು ಎಫ್‌ಸಿ ಲೋಗೊ   

ಬೆಂಗಳೂರು: ಇಂಡಿಯನ್‌ ಸೂಪರ್‌ ಲೀಗ್‌ಗೆ (ಐಎಸ್‌ಎಲ್‌) ಸಜ್ಜುಗೊಳ್ಳುತ್ತಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ), ನಾರ್ವೆಯ ಕ್ರಿಸ್ಟಿಯನ್‌ ಒಪ್‌ಸೆಥ್ ಹಾಗೂ ಸ್ಪೇನ್‌ನ ಫ್ರಾನ್ಸಿಸ್ಕೊ ಗೊಂಜಾಲೆಜ್‌ ಅವರನ್ನು ಸೇರಿಸಿಕೊಂಡಿದೆ. ನವೆಂಬರ್‌ನಲ್ಲಿ ಐಎಸ್‌ಎಲ್‌ ಟೂರ್ನಿ ಆರಂಭವಾಗುವ ಸಾಧ್ಯತೆಯಿದೆ.

ಬ್ರೆಜಿಲ್‌ನ ಮಿಡ್‌ಫೀಲ್ಡರ್‌ ರಫೆಲ್‌ ಆಗಸ್ಟೊ ಹಾಗೂ ಸ್ಪೇನ್‌ನ ಡಿಫೆಂಡರ್‌ ಆಲ್ಬರ್ಟೊ ಸೆರಾನ್ ಅವರು ತಂಡದಿಂದ ನಿರ್ಗಮಿಸಿದ ಬಳಿಕ ಅವರ ಸ್ಥಾನದಲ್ಲಿ ಒಪ್‌ಸೆಥ್‌ ಹಾಗೂ ಗೊಂಜಾಲೆಜ್‌ ಅವರನ್ನು ಕ್ಲಬ್‌ ಸೇರಿಸಿಕೊಂಡಿದೆ.

ಒಪ್‌ಸೆಥ್ ಅವರು ನಾರ್ವೆಯ ಕೌಪಾಂಜರ್‌ ಐಎಲ್‌, ಫೋರ್ಡ್‌, ಸೋಗಂಡಲ್‌, ಬೋಡೊ ಎಫ್‌ಸಿ ಪರ ಆಡಿದ ಅನುಭವ ಹೊಂದಿದ್ದಾರೆ.

ADVERTISEMENT

ಭಾರತ ಫುಟ್‌ಬಾಲ್‌ ಲೀಗ್‌ಗಳಲ್ಲಿ ಒಪ್‌ಸೆಥ್‌ ಮೊದಲ ಬಾರಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಗೊಂಜಾಲೆಜ್‌ 2019–20ರ ಋತುವಿನ ಐ–ಲೀಗ್‌ ಟ್ರೋಫಿ ಗೆದ್ದ ಮೋಹನ್‌ ಬಾಗನ್‌ ತಂಡದಲ್ಲಿ ಆಡಿದ್ದರು. ಆ ಆವೃತ್ತಿಯಲ್ಲಿ ಹೆಚ್ಚು ಗೋಲು ಗಳಿಸಿರುವವರ ಪಟ್ಟಿಯಲ್ಲಿ ಜಂಟಿ ಎರಡನೇ ಸ್ಥಾನದಲ್ಲಿದ್ದರು.

ಗೊಂಜಾಲೆಜ್‌ ಅವರು ಸೈಪ್ರಸ್‌, ಥಾಯ್ಲೆಂಡ್‌, ಪೋಲೆಂಡ್‌ ಹಾಗೂ ಹಾಂಗ್‌ಕಾಂಗ್‌ ದೇಶಗಳ ಲೀಗ್‌ಗಳಲ್ಲಿ ಆಡಿದ ಅನುಭವ ಉಳ್ಳವರು.

‘ಈಗಾಗಲೇ ಬಲಿಷ್ಠವಾಗಿರುವ ನಮ್ಮ ತಂಡಕ್ಕೆ ಒಪ್‌ಸೆಥ್‌ ಹಾಗೂ ಗೊಂಜಾಲೆಜ್‌ ಆಗಮನ ಮತ್ತಷ್ಟು ಶಕ್ತಿ ತಂದಿದೆ‘ ಎಂದು ಬೆಂಗಳೂರು ಎಫ್‌ಸಿ ಕೋಚ್‌ ಕಾರ್ಲಸ್‌ ಕ್ವದ್ರತ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.