ADVERTISEMENT

ಇಂಡಿಯನ್ ಸೂಪರ್ ಲೀಗ್: ಮತ್ತೊಮ್ಮೆ ಡ್ರಾಗೆ ಸಮಾಧಾನಗೊಂಡ ಬಿಎಫ್‌ಸಿ

ಫುಟ್‌ಬಾಲ್ ಟೂರ್ನಿ: ಅವಕಾಶಗಳನ್ನು ಕೈಚೆಲ್ಲಿದ ಗುರುಪ್ರೀತ್ ಬಳಗ

ಪಿಟಿಐ
Published 20 ಡಿಸೆಂಬರ್ 2021, 19:31 IST
Last Updated 20 ಡಿಸೆಂಬರ್ 2021, 19:31 IST
ಚೆಂಡಿನ ಮೇಲೆ ಹಿಡಿತ ಸಾಧಿಸಲು ಬಿಎಫ್‌ಸಿಯ ಬ್ರೂನೊ ಸಿಲ್ವಾ (ಎಡ) ಮತ್ತು ಜೆಎಫ್‌ಸಿಯ ಅಲೆಕ್ಸಾಂಡರ್ ಡಿ ಲಿಮಾ ಪ್ರಯತ್ನಿಸಿದರು –ಐಎಸ್‌ಎಲ್‌ ಚಿತ್ರ
ಚೆಂಡಿನ ಮೇಲೆ ಹಿಡಿತ ಸಾಧಿಸಲು ಬಿಎಫ್‌ಸಿಯ ಬ್ರೂನೊ ಸಿಲ್ವಾ (ಎಡ) ಮತ್ತು ಜೆಎಫ್‌ಸಿಯ ಅಲೆಕ್ಸಾಂಡರ್ ಡಿ ಲಿಮಾ ಪ್ರಯತ್ನಿಸಿದರು –ಐಎಸ್‌ಎಲ್‌ ಚಿತ್ರ   

ಬ್ಯಾಂಬೊಲಿಮ್: ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಬೆಂಗಳೂರು ಫುಟ್‌ಬಾಲ್‌ ಕ್ಲಬ್ (ಬಿಎಫ್‌ಸಿ) ತಂಡದ ನೀರಸ ಆಟ ಮುಂದುವರಿದಿದೆ. ಎಂಟನೇ ಆವೃತ್ತಿಯಲ್ಲಿ ಏಕೈಕ ಜಯ ಸಾಧಿಸಿರುವ ತಂಡ ಸೋಮವಾರ ನಡೆದ ಪಂದ್ಯದಲ್ಲಿ ಜೆಮ್ಶೆಡ್‌ಪುರ ಎಫ್‌ಸಿ (ಜೆಎಫ್‌ಸಿ) ಜೊತೆ ಗೋಲುರಹಿತ ಡ್ರಾಗೆ ಸಮಾಧಾನಪಟ್ಟುಕೊಂಡಿತು.

ಜೆಎಫ್‌ಸಿ ಆರಂಭದಿಂದಲೇ ಆಕ್ರಮಣಕ್ಕೆ ಮುಂದಾಯಿತು. ನಾಲ್ಕನೇ ನಿಮಿಷದಲ್ಲಿ ನಾಯಕ ಗ್ರೆಗ್ ಸ್ಟಿವರ್ಟ್‌ ಚೆಂಡಿನೊಂದಿಗೆ ಬಿಎಫ್‌ಸಿ ಆವರಣಕ್ಕೆ ನುಗ್ಗಿದರು. ಆದರೆ ಗೋಲು ಗಳಿಸಲು ಸಾಧ್ಯವಾಲಿಲ್ಲ. ಐದನೇ ನಿಮಿಷದಲ್ಲಿ ಬಿಎಫ್‌ಸಿ ಕೂಡ ಆಕ್ರಮಣಕ್ಕೆ ಇಳಿಯಿತು. ಅಜಿತ್ ಕಾಮರಾಜ್‌ ಬಲಭಾಗದಿಂದ ಮುನ್ನುಗ್ಗಿದರು. ನಂತರ ಉಭಯ ತಂಡಗಳೂ ದಾಳಿ–ಪ್ರತಿದಾಳಿಯ ಮೂಲಕ ಮುನ್ನಡೆಗೆ ಪ್ರಯತ್ನಿಸಿದವು.

ಸುನಿಲ್ ಚೆಟ್ರಿ ಅನುಪಸ್ಥಿತಿಯಲ್ಲಿ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ನಾಯಕತ್ವ ವಹಿಸಿದ್ದ ಬಿಎಫ್‌ಸಿ, ಪಂದ್ಯ ಮುಂದುವರಿದಂತೆ ಹಿಡಿತ ಸಾಧಿಸುತ್ತ ಸಾಗಿತು. ಆದರೆ ಎದುರಾಳಿ ತಂಡದ ಗೋಲ್‌ಕೀಪರ್ ರೆಹನೇಶ್ ಅವರ ಅಮೋಘ ಆಟವು ತಂಡದ ಆಸೆಗಳಿಗೆ ಅಡ್ಡಿಯಾಯಿತು. 90ನೇ ನಿಮಿಷದಲ್ಲಿ ಲಭಿಸಿದ ಅತ್ಯಪೂರ್ವ ಅವಕಾಶವನ್ನು ಪ್ರಿನ್ಸ್ ಇಬಾರ ಕೈಚೆಲ್ಲುವುದರೊಂದಿಗೆ ಬಿಎಫ್‌ಸಿಯ ಜಯದ ಕನಸು ಭಗ್ನವಾಯಿತು.

ADVERTISEMENT

ಎಟಿಕೆಎಂಬಿಗೆ ನಾರ್ತ್ ಈಸ್ಟ್‌ ಸವಾಲು
ಮಡಗಾಂವ್‌ನಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್‌ ಮತ್ತು ನಾರ್ತ್ ಈಸ್ಟ್ ಯುನೈಟೆಡ್ ತಂಡಗಳು ಮುಖಾಮುಖಿಯಾಗಲಿವೆ. ಕೋಚ್‌ಗೆ ಗೇಟ್‌ಪಾಸ್‌ ನೀಡಿದ ನಂತರ ಇದೇ ಮೊದಲ ಬಾರಿ ಎಟಿಕೆಎಂಬಿ ಕಣಕ್ಕೆ ಇಳಿಯುತ್ತಿದ್ದು ಸೋಲಿನ ಕೂಪದಿಂದ ಮೇಲೇಳುವ ಭರವಸೆಯಲ್ಲಿ ಆಡಲಿದೆ.

ನಾಲ್ಕು ಪಂದ್ಯಗಳಲ್ಲಿ ಜಯ ಕಾಣದೇ ಇದ್ದ ಕಾರಣ ಮುಖ್ಯ ಕೋಚ್ ಆ್ಯಂಟೊನಿಯೊ ಲೋಪೆಜ್‌ ಹಬಾಜ್ ಅವರನ್ನು ಕೈಬಿಡಲು ಎಟಿಕೆಎಂಬಿ ಆಡಳಿತ ನಿರ್ಧರಿಸಿತ್ತು. ಹಬಾಸ್ ಅವರು ಎಟಿಕೆಗೆ 2014 ಮತ್ತು 2019–20ರಲ್ಲಿ ಪ್ರಶಸ್ತಿ ಗೆದ್ದುಕೊಟ್ಟಿದ್ದರು. ಎರಡು ಬಾರಿ ತಂಡವೊಂದನ್ನು ಚಾಂಪಿಯನ್ ಮಾಡಿದ ಮೊದಲ ಕೋಚ್ ಆಗಿದ್ದಾರೆ ಅವರು.

ಏಳು ಪಂದ್ಯಗಳನ್ನು ಆಡಿರುವ ನಾರ್ತ್ ಈಸ್ಟ್ ಯುನೈಟೆಡ್‌ ಸದ್ಯ ಏಳು ಪಾಯಿಂಟ್‌ಗಳನ್ನು ಹೊಂದಿದ್ದು ಹಿಂದಿನ ಪಂದ್ಯದಲ್ಲಿ ಎಸ್‌ಸಿ ಈಸ್ಟ್‌ ಬೆಂಗಾಲ್ ವಿರುದ್ಧ ಗಳಿಸಿದ 2–0 ಅಂತರದ ಜಯದಿಂದಾಗಿ ಭರವಸೆಯಲ್ಲಿದೆ. ಆ ಪಂದ್ಯದಲ್ಲಿ ಡಿಫೆಂಡರ್ ಹರ್ನನ್ ಸಂಟಾನ ಮತ್ತು ಸ್ಟ್ರೈಕರ್‌ ದೇಶಾನ್‌ ಬ್ರೌನ್‌ ಅನುಪಸ್ಥಿತಿಯಲ್ಲಿಯೂ ತಂಡ ಉತ್ತಮ ಸಾಮರ್ಥ್ಯ ತೋರಿತ್ತು. ಖಾಸಾ ಕಮಾರ ಅವರು ತಂಡಕ್ಕೆ ಆಸರೆಯಾಗಿದ್ದರು.

ಹರ್ನನ್ ಸಂಟಾನ ಮತ್ತು ದೇಶಾನ್‌ ಬ್ರೌನ್‌ ಫಿಟ್‌ ಆಗಿದ್ದು ಎಟಿಕೆ ಎಂಬಿ ಎದುರಿನ ಪಂದ್ಯಕ್ಕೆ ಲಭ್ಯರಿರುತ್ತಾರೆ ಎಂದು ತಂಡ ತಿಳಿಸಿದೆ.

ಜುವಾನ್ ಫೆರಾಂಡೊ ಕೈಬಿಟ್ಟ ಗೋವಾ
ಪಣಜಿ (ಪಿಟಿಐ):
ಇಂಡಿಯನ್ ಸೂಪರ್ ಲೀಗ್‌ ಟೂರ್ನಿಯಲ್ಲಿ ಆಡುವ ಎಫ್‌ಸಿ ಗೋವಾ ತಂಡವು ಕೋಚ್‌ ಜುವಾನ್ ಫೆರಾಂಡೊ ಅವರನ್ನು ಸೋಮವಾರ ಹೊರಹಾಕಿದೆ.

ತಂಡವನ್ನು ಜಯದ ಹಾದಿಯಲ್ಲಿ ನಡೆಸಲು ಸಾಧ್ಯವಾಗದೇ ಇರುವುದೇ ಈ ಅಚ್ಚರಿಯ ನಡೆಗೆ ಕಾರಣ ಎನ್ನಲಾಗಿದೆ. ಅವರು ಎಟಿಕೆಎಂಬಿ ತಂಡವನ್ನು ಸೇರಲು ಸಜ್ಜಾಗಿದ್ದಾರೆ. ಎಟಿಕೆಎಂಬಿ, ಕೋಚ್ ಆ್ಯಂಟೊನಿಯೊ ಹಬಾಸ್ ಅವರನ್ನು ಕೆಲವು ದಿನಗಳ ಹಿಂದೆ ಹೊರಹಾಕಿದೆ.

ಕಳೆದ ಆವೃತ್ತಿಯಲ್ಲಿ ಪೂರ್ಣಪ್ರಮಾಣದಲ್ಲಿ ಗೋವಾ ತಂಡವನ್ನು ಮುನ್ನಡೆಸಿದ್ದ ಫೆರಾಂಡೊ ಐಎಸ್‌ಎಲ್‌ನಲ್ಲಿ ತಂಡ ಸೆಮಿಫೈನಲ್ ತಲುಪುವಂತೆ ಮಾಡಿದ್ದರು.

ಐ–ಲೀಗ್ ಚಾಂಪಿಯನ್ ತಂಡಕ್ಕೆ ಅವಕಾಶ
ನವದೆಹಲಿ
: ಐ–ಲೀಗ್‌ನಲ್ಲಿ ಚಾಂಪಿಯನ್ ಆಗುವ ತಂಡಕ್ಕೆ ಐಎಸ್‌ಎಲ್‌ನಲ್ಲಿ ಆಡಲು ಅವಕಾಶ ನೀಡುವ ಕುರಿತು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್ (ಎಐಎಫ್‌ಎಫ್‌) ನಿರ್ಧಾರ ಕೈಗೊಂಡಿದ್ದು 2023ರ ಆವೃತ್ತಿಯಿಂದ ಇದು ಜಾರಿಗೆ ಬರಲಿದೆ ಎಂದು ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.