ADVERTISEMENT

ಐಎಸ್‌ಎಲ್‌: ಸಿಎಫ್‌ಸಿಯಲ್ಲಿ ಥಾಪ ಆಡುವುದು ಖಚಿತ

ಪಿಟಿಐ
Published 20 ಆಗಸ್ಟ್ 2020, 15:06 IST
Last Updated 20 ಆಗಸ್ಟ್ 2020, 15:06 IST
ಚೆನ್ನೈಯಿನ್ ಎಫ್‌ಸಿ ತಂಡದ ಅನಿರುದ್ಧ ಥಾಪ
ಚೆನ್ನೈಯಿನ್ ಎಫ್‌ಸಿ ತಂಡದ ಅನಿರುದ್ಧ ಥಾಪ   

ಚೆನ್ನೈ: ಮಿಡ್‌ಫೀಲ್ಡರ್ ಅನಿರುದ್ಧ ಥಾಪ ಸೇರಿದಂತೆ ಭಾರತ ಫುಟ್‌ಬಾಲ್ ತಂಡದ ಒಟ್ಟು ಹತ್ತು ಆಟಗಾರರು ಈ ಬಾರಿಯ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಖಚಿತ ಎಂದು ಚೆನ್ನೈಯಿನ್ ಎಫ್‌ಸಿ ಗುರುವಾರ ತಿಳಿಸಿದೆ.

ಥೊಯ್ ಸಿಂಗ್‌, ಧನಪಾಲ್ ಗಣೇಶ್‌, ಶ್ರೀನಿವಾಸನ್ ಪಾಂಡ್ಯನ್, ಎಡ್ವಿನ್ ಸಿಡ್ನಿ ವನ್ಸ್‌ಪೌಲ್‌, ವಿಶಾಲ್ ಕೇತ್‌, ಲಾಲಿಯಂಗ್ಜುಲಾ ಚಾಂಗ್ಟೆ, ದೀಪ‍ಕ್ ತಂಗ್ರಿ ಮತ್ತು ರಹೀಮ್ ಅಲಿ ಅವರು ತಂಡದಲ್ಲಿ ಇರುತ್ತಾರೆ ಎಂದು ಐಎಸ್‌ಎಲ್‌ನಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ ಚೆನ್ನೈಯಿನ್ ಎಫ್‌ಸಿ ತಿಳಿಸಿದೆ. ಪ್ರತಿಭಾವಂತ ಮಿಡ್‌ಫೀಲ್ಡರ್ ಅಭಿಜಿತ್ ಸರ್ಕಾರ್ ಕೂಡ ಚೆನ್ನೈಯಿನ್ ತಂಡವನ್ನು ಸೇರಲಿದ್ದಾರೆ. ಕಳೆದ ವರ್ಷ ಅವರು ಐ ಲೀಗ್‌ನಲ್ಲಿ ಈಸ್ಟ್ ಬೆಂಗಾಲ್ ತಂಡವನ್ನು ಪ್ರತಿನಿಧಿಸಿದ್ದರು.

2016ರಲ್ಲಿ 18 ವರ್ಷದವರಾಗಿದ್ದಾಗ ಈ ಕ್ಲಬ್ ಸೇರಿದ ಥಾಪ ದೀರ್ಘ ಕಾಲದ ಒಪ್ಪಂದವನ್ನು ಹೊಂದಿದ್ದು ಐದನೇ ವರ್ಷ ತಂಡವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. 2018ರಲ್ಲಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ ಉದಯೋನ್ಮುಖ ಆಟಗಾರ ಪ್ರಶಸ್ತಿ ಗಳಿಸಿದ್ದರು. ಚೆನ್ನೈಯಿನ್‌ ಎಫ್‌ಸಿಗಾಗಿ ಅವರು ಈಗಾಗಲೇ 68 ಪಂದ್ಯಗಳನ್ನು ಆಡಿದ್ದಾರೆ.

ADVERTISEMENT

‘ಕಳೆದ ಬಾರಿ ಉತ್ತಮ ಸಾಮರ್ಥ್ಯ ತೋರಿದ ತಂಡವನ್ನು ಇನ್ನಷ್ಟು ಬಲಪಡಿಸುವುದು ನಮ್ಮ ಉದ್ದೇಶ. ಥಾಪ ಒಳಗೊಂಡಂತೆ ಪ್ರತಿಭಾವಂತರು ಇರುವುದರಿಂದ ಈ ಆಶಯಕ್ಕೆ ಬಲ ಬಂದಿದೆ’ ಎಂದು ಕ್ಲಬ್‌ನ ಸಹ ಮಾಲೀಕ ವೀತಾ ದಾನಿ ಅಭಿಪ್ರಾಯಪಟ್ಟರು.

ಕೋವಿಡ್–19 ಪಿಡುಗಿನಿಂದಾಗಿ ಈ ಬಾರಿ ಐಎಸ್‌ಎಲ್ ಟೂರ್ನಿಯ ಎಲ್ಲ ಪಂದ್ಯಗಳನ್ನು ಗೋವಾದ ಮೂರು ಕ್ರೀಡಾಂಗಣಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು ಚೆನ್ನೈಯಿನ್ ಎಫ್‌ಸಿ ‘ತವರಿನ’ ಒಂಬತ್ತು ಪಂದ್ಯಗಳನ್ನು ಬ್ಯಾಂಬೊಲಿಮ್‌ನ ಜಿಎಂಸಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಆಡಲಿದೆ. ಮುಂಬೈ ಸಿಟಿ ಎಫ್‌ಸಿ, ಕೇರಳ ಬ್ಲಾಸ್ಟರ್ಸ್ ಎಫ್‌ಸಿ ಮತ್ತು ಒಡಿಶಾ ಎಫ್‌ಸಿಗೂ ಇದು ತವರಿನ ಕ್ರೀಡಾಂಗಣ ಆಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.