ADVERTISEMENT

ಕೋವಿಡ್–19: ವಿಶ್ವಕಪ್ ಫುಟ್‌ಬಾಲ್ ಅರ್ಹತಾ ಪಂದ್ಯಗಳಿಗೆ ಧಕ್ಕೆ?

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 18:44 IST
Last Updated 5 ಮಾರ್ಚ್ 2020, 18:44 IST
   

ಹಾಂಕಾಂಗ್: ಕೋವಿಡ್–19 ಆತಂಕದ ಹಿನ್ನೆಲೆಯಲ್ಲಿ ವಿಶ್ವಕಪ್‌ ಮತ್ತು ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳನ್ನು ಮುಂದೂಡುವ ಬಗ್ಗೆ ಅಂತರರಾಷ್ಟ್ರೀಯ ಫುಟ್‌ಬಾಲ್ ಫೆಡರೇಷನ್ (ಫಿಫಾ) ಮತ್ತು ಏಷ್ಯನ್ ಫುಟ್‌ಬಾಲ್‌ ಕಾನ್ಫೆಡರೇಷನ್ (ಎಎಫ್‌ಸಿ) ಚಿಂತನೆ ನಡೆಸಿವೆ.

ಗುರುವಾರ ಜಂಟಿ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಲಾಗಿದ್ದು ‘ಏಷ್ಯಾದ ಫುಟ್‌ಬಾಲ್ ಆಡುವ ರಾಷ್ಟ್ರಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಅವರ ಅಭಿಪ್ರಾಯ ಪಡೆದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ವಿವರಿಸಲಾಗಿದೆ.

‘ಫುಟ್‌ಬಾಲ್‌ನಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರು ಚೆನ್ನಾಗಿರಬೇಕು ಎಂದು ಫಿಫಾ ಹಾಗೂ ಎಎಫ್‌ಸಿ ಬಯಸುತ್ತದೆ. ಹೀಗಾಗಿ 2022ರ ವಿಶ್ವಕಪ್ ಹಾಗೂ 2023ರ ಎಎಫ್‌ಸಿ ಏಷ್ಯಾಕಪ್ ಟೂರ್ನಿಯ ಅರ್ಹತಾ ಪಂದ್ಯಗಳ ವೇಳಾಪಟ್ಟಿ ಬಗ್ಗೆ ಗಂಭೀರವಾಗಿ ಯೋಚಿಸಲಾಗಿದೆ. ಕೋವಿಡ್‌ನಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವ ಚೀನಾ ಮತ್ತು ದಕ್ಷಿಣ ಕೊರಿಯಾ ನಡುವೆ ಒಲಿಂಪಿಕ್ಸ್ ಮಹಿಳೆಯರ ಪ್ಲೇ ಆಫ್ ಪಂದ್ಯದ ಬಗ್ಗೆ ಮತ್ತು ತುರ್ಕಮೆನಿಸ್ಥಾನದಲ್ಲಿ ನಡೆಯಲಿರುವ ಎಎಫ್‌ಸಿ ಫುಟ್ಸಾಲ್ ಚಾಂಪಿಯನ್‌ಷಿಪ್‌ ಬಗ್ಗೆಯೂ ನಿರ್ಧಾರ ಕೈಗೊಳ್ಳಬೇಕಾಗಿದೆ’ ಎಂದು ತಿಳಿಸಲಾಗಿದೆ.

ADVERTISEMENT

ವಿಶ್ವಕಪ್ ಮತ್ತು ಏಷ್ಯಾಕಪ್ ಟೂರ್ನಿಯ ಏಷ್ಯಾದ ಮುಂದಿನ ಪಂದ್ಯಗಳು ಇದೇ 26 ಮತ್ತು 31ರಂದು ನಡೆಯಬೇಕಾಗಿದ್ದು ಮಹಿಳೆಯರ ಒಲಿಂಪಿಕ್ಸ್ ಪ್ಲೇ ಆಫ್ ಪಂದ್ಯಗಳು ಏಪ್ರಿಲ್ 9 ಮತ್ತು 14ರಂದು ನಡೆಯಬೇಕಾಗಿದೆ.

ಹಸ್ತಲಾಘವಬೇಡ: ಸೂಚನೆ
ನವದೆಹಲಿ: ಕೋವಿಡ್–19 ಭೀತಿಯ ಹಿನ್ನೆಲೆ ಯಲ್ಲಿ ಅಥ್ಲೀಟ್‌ ಗಳು ಪರಸ್ಪರ ಹಸ್ತಲಾಘವ ಮಾಡಬಾರದು ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

‘ಕ್ರೀಡಾಪಟುಗಳ ಸುರಕ್ಷತೆಯ ದೃಷ್ಟಿಯಿಂದ ಇಂತಹ ಕ್ರಮಗಳು ಮುಖ್ಯ. ಪರಸ್ಪರ ಭೇಟಿಯಾದಾಗ ಹಸ್ತಲಾಘವ ಮತ್ತು ಆಲಂಗಿಸಿಕೊಳ್ಳುವುದು ಬೇಡ’ ಎಂದು ಗುರುವಾರ ಸಲಹೆ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ನಮಸ್ತೆ, ಸಲಾಂ, ಜೈ ಹಿಂದ್‌ ಮತ್ತಿತರ ಸ್ಥಳೀಯ ರೂಢಿಗಳ ಸಂದೇಶಗಳ ಮೂಲಕ ಪರಸ್ಪರ ಅಭಿವಂದಿಸಬಹುದು’ ಎಂದಿದ್ದಾರೆ.

ಹಿಂದೆ ಸರಿದ ಆರ್ಚರಿ ತಂಡ: ಬ್ಯಾಂಕಾಕ್‌ನಲ್ಲಿ ನಡೆಯ ಲಿರುವ ಏಷ್ಯಾ ಕಪ್ ಆರ್ಚರಿ ಚಾಂಪಿಯ್‌ಷಿಪ್‌ನಿಂದ ಭಾರತ ಆರ್ಚರಿ ತಂಡಗಳು ಹಿಂದೆ ಸರಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.