ADVERTISEMENT

ತಂಡದಲ್ಲಿ ಒಗ್ಗಟ್ಟಿದೆ, ಹೊರಗಿನ ಶಕ್ತಿಗಳಿಂದ ಒಡಕು ಮೂಡಿಸುವ ಯತ್ನ: ರೊನಾಲ್ಡೊ

ಏಜೆನ್ಸೀಸ್
Published 9 ಡಿಸೆಂಬರ್ 2022, 4:17 IST
Last Updated 9 ಡಿಸೆಂಬರ್ 2022, 4:17 IST
ರೊನಾಲ್ಡೊ ಗುರುವಾರ ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ
ರೊನಾಲ್ಡೊ ಗುರುವಾರ ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ   

ದೋಹಾ: ‘ಪೋರ್ಚುಗಲ್‌ ತಂಡದಲ್ಲಿ ಒಗ್ಗಟ್ಟು ಇದೆ. ಹೊರಗಿನ ಶಕ್ತಿಗಳು ತಂಡದಲ್ಲಿ ಒಡಕು ಉಂಟುಮಾಡಲು ಪ್ರಯತ್ನಿಸುತ್ತಿವೆ’ ಎಂದು ಸ್ಟಾರ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿದ್ದಾರೆ.

ಸ್ವಿಟ್ಜರ್ಲೆಂಡ್‌ ವಿರುದ್ದದ ಪ್ರೀ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ ರೊನಾಲ್ಡೊ ಅವರನ್ನು ಹೊರಗಿಡಲಾಗಿತ್ತು. ಇದರಿಂದ ಕೋಚ್‌ ಫೆರ್ನಾಂಡೊ ಸಂಟೋಸ್‌ ಜೊತೆ ವಾಗ್ವಾದ ನಡೆಸಿ ವಿಶ್ವಕಪ್‌ ಟೂರ್ನಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಮರಳುವುದಾಗಿ ಅವರು ಬೆದರಿಕೆಯೊಡ್ಡಿದ್ದಾರೆ ಎಂದು ಪೋರ್ಚುಗಲ್‌ನ ಮಾಧ್ಯಮಗಳು ವರದಿ ಮಾಡಿದ್ದವು.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸ್ಪಷ್ಟೀಕರಣ ನೀಡಿರುವ ರೊನಾಲ್ಡೊ, ‘ತಂಡದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ’ ಎಂದಿದ್ದಾರೆ.

ADVERTISEMENT

ರೊನಾಲ್ಡೊ ಅವರು ತಂಡ ತೊರೆಯುವ ನಿರ್ಧಾರ ತಳೆದಿದ್ದಾರೆ ಎಂಬ ವರದಿಯನ್ನು ಪೋರ್ಚುಗಲ್‌ ಫುಟ್‌ಬಾಲ್‌ ಸಂಸ್ಥೆ ಕೂಡಾ ಅಲ್ಲಗಳೆದಿತ್ತು. ‘ರೊನಾಲ್ಡೊ ಅವರು ಯಾವುದೇ ಸಂದರ್ಭದಲ್ಲೂ ರಾಷ್ಟ್ರೀಯ ತಂಡಕ್ಕೆ ಆಡಲು ಸಿದ್ಧರಿದ್ದಾರೆ‘ ಎಂದು ಹೇಳಿದೆ.

ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ರೊನಾಲ್ಡೊ ಬದಲು ಕಣಕ್ಕಿಳಿದಿದ್ದ ಗೊನ್ಸಾಲೊ ರಾಮೋಸ್‌ ಅವರು ಹ್ಯಾಟ್ರಿಕ್‌ ಗೋಲು ಗಳಿಸಿ ಮಿಂಚಿದ್ದರು. ಮೊರೊಕ್ಕೊ ವಿರುದ್ಧ ನಡೆಯಲಿರುವ ಕ್ವಾರ್ಟರ್‌ ಫೈನಲ್‌ನಲ್ಲೂ ರೊನಾಲ್ಡೊ ಬದಲು ರಾಮೋಸ್‌ ಆಡುವ ಸಾಧ್ಯತೆಯೇ ಅಧಿಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.