ADVERTISEMENT

ಡುರಾಂಡ್‌ ಕಪ್ ಫುಟ್‌ಬಾಲ್ ಟೂರ್ನಿ | ಸಾಮರ್ಥ್ಯ ಸುಧಾರಿಸುವ ವಿಶ್ವಾಸ –ಚೆಟ್ರಿ

ಅಭ್ಯಾಸ ನಡೆಸಿದ ಬಿಎಫ್‌ಸಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 18:24 IST
Last Updated 14 ಆಗಸ್ಟ್ 2022, 18:24 IST
ಸುನಿಲ್ ಚೆಟ್ರಿ
ಸುನಿಲ್ ಚೆಟ್ರಿ   

ಬೆಂಗಳೂರು: ಮುಂಬರುವ ಡುರಾಂಡ್‌ ಕಪ್‌ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ತೋರುವ ವಿಶ್ವಾಸವಿದೆ ಎಂದು ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ನಾಯಕ ಸುನಿಲ್ ಚೆಟ್ರಿ ಹೇಳಿದ್ದಾರೆ.

ಬಿಎಫ್‌ಸಿಯಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕಳೆದ ವರ್ಷ ನಮ್ಮ ಆಟಗಾರರು ಉತ್ತಮವಾಗಿ ಆಡಿದ್ದರು. ಈ ಬಾರಿ ಮತ್ತಷ್ಟು ಸುಧಾರಿಸಿಕೊಳ್ಳುತ್ತೇವೆ. ಸಾಧ್ಯವಾದಷ್ಟು ಶ್ರೇಷ್ಠ ಆಟವಾಡುವುದು ನಮ್ಮ ಗುರಿ‘ ಎಂದು ಚೆಟ್ರಿ ನುಡಿದರು.

ADVERTISEMENT

ಡುರಾಂಡ್‌ ಕಪ್ ಟೂರ್ನಿಯು ಮಂಗಳವಾರ ಕೋಲ್ಕತ್ತದಲ್ಲಿ ಆರಂಭ ವಾಗಲಿದೆ. ಇದೇ 17ರಂದು ಬಿಎಫ್‌ಸಿ ತನ್ನ ಮೊದಲ ಪಂದ್ಯದಲ್ಲಿ ಜಮ್ಶೆಡ್‌ಪುರ ತಂಡವನ್ನು ಎದುರಿ ಸಲಿದೆ.

ಕೃಷ್ಣ ಬಲ: ಇಂಡಿಯನ್ ಸೂಪರ್‌ ಲೀಗ್‌ನ(ಐಎಸ್‌ಎಲ್‌) ಕಳೆದ ಮೂರು ಆವೃತ್ತಿಗಳಲ್ಲಿ ಪ್ರಶಸ್ತಿ ಬರ ಎದುರಿಸಿರುವ ಬಿಎಫ್‌ಸಿ ಈ ವರ್ಷ ರಾಯ್‌ಕೃಷ್ಣ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಫಿಜಿ ರಾಷ್ಟ್ರೀಯ ತಂಡದ ಕೃಷ್ಣ ಈ ಹಿಂದೆ ಎಟಿಕೆ ಮೋಹನ್ ಬಾಗನ್ (ಎಟಿಕೆಎಂಬಿ) ತಂಡದಲ್ಲಿದ್ದರು. ಜೆವಿ ಹೆರ್ನಾಂಡೀಸ್‌, ಪ್ರಬೀರ್ ದಾಸ್‌ ಮತ್ತು ಸಂದೇಶ್ ಜಿಂಗಾನ್ ಕೂಡ ಬಿಎಫ್‌ಸಿಗೆ ಸೇರಿದ್ದು ಬಲ ಹೆಚ್ಚಿದೆ.

ಫಿಫಾ ಬೆದರಿಕೆ;ಚಿಂತೆ ಬೇಡ: ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಅನ್ನು (ಎಐಎಫ್‌ಎಫ್‌) ನಿಷೇಧಿಸುವುದಾಗಿ ಫಿಫಾ ಎಚ್ಚರಿಸಿರುವ ಕುರಿತು ಪ್ರತಿಕ್ರಿಯಿಸಿದ ಸುನಿಲ್‌, ‘ಅದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಸಾಮರ್ಥ್ಯ ಸುಧಾರಿಸುಕೊಳ್ಳುವತ್ತ ಗಮನಹರಿಸಿ. ಆ ವಿಷಯ ನಮ್ಮ ನಿಯಂತ್ರಣದಲ್ಲಿ ಇಲ್ಲ‘ ಎಂದು ಸಹ ಆಟಗಾರರಿಗೆ ಕಿವಿಮಾತು ಹೇಳಿದರು. ಎಐಎಫ್‌ಎಫ್‌ ಕಾರ್ಯಚಟುವಟಿಕೆಯಲ್ಲಿ ಮೂರನೇ ವ್ಯಕ್ತಿಯ ‘ಪ್ರಭಾವ‘ದ ಹಿನ್ನೆಲೆಯಲ್ಲಿ ಮಂಡಳಿಯ ಮೇಲೆ ನಿಷೇಧ ಹೇರುವುದಾಗಿ ಅಂತರರಾಷ್ಟ್ರೀಯ ಫುಟ್‌ಬಾಲ್ ಫೆಡರೇಷನ್‌ (ಫಿಫಾ) ಬೆದರಿಕೆ ಹಾಕಿತ್ತು.

ಕೆಎಸ್‌ಎಫ್‌ಎ ಕ್ರೀಡಾಂಗಣದಲ್ಲಿ ಬಿಎಫ್‌ಸಿ ಆಟಗಾರರು ತಾಲೀಮು ನಡೆಸಿದರು. ಸುದ್ದಿಗೋಷ್ಠಿಯಲ್ಲಿ ರಾಯ್‌ಕೃಷ್ಣ, ತಂಡದ ಸಿಇಒ ಮಂದಾರ್ ತಮ್ಹಾನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.