ADVERTISEMENT

Fifa World Cup: ಸೆಮಿ ಕನಸಲ್ಲಿ ಮೆಸ್ಸಿ ಬಳಗ, ನೆದರ್ಲೆಂಡ್ಸ್‌ ವಿರುದ್ಧ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 3:41 IST
Last Updated 9 ಡಿಸೆಂಬರ್ 2022, 3:41 IST
ಲಯೊನೆಲ್‌ ಮೆಸ್ಸಿ –ಎಎಫ್‌ಪಿ ಚಿತ್ರ
ಲಯೊನೆಲ್‌ ಮೆಸ್ಸಿ –ಎಎಫ್‌ಪಿ ಚಿತ್ರ   

ದೋಹಾ: ಲಯೊನೆಲ್‌ ಮೆಸ್ಸಿ ಎಂಬ ಆಟಗಾರನ ‘ಮ್ಯಾಜಿಕ್‌ ಕಾಲು‘ಗಳ ಮೇಲೆ ಭರವಸೆಯಿಟ್ಟಿರುವ ಅರ್ಜೆಂಟೀನಾ ಒಂದೆಡೆಯಾದರೆ, ಇತಿಹಾಸವು ತನ್ನೊಂದಿಗೆ ಇದೆ ಎಂಬ ಆತ್ಮವಿಶ್ವಾಸವನ್ನು ಹೊಂದಿರುವ ನೆದರ್ಲೆಂಡ್ಸ್‌ ತಂಡ ಮತ್ತೊಂದೆಡೆ.

ದೋಹಾದ ಲುಸೈಲ್ ಕ್ರೀಡಾಂಗಣದಲ್ಲಿ ಶುಕ್ರವಾರ ತಡರಾತ್ರಿ ಇವೆರಡು ತಂಡಗಳು ಫಿಫಾ ವಿಶ್ವಕಪ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಎದುರಾಗಲಿದ್ದು, ಫುಟ್‌ಬಾಲ್‌ ಪ್ರೇಮಿಗಳು ಮತ್ತೊಂದು ರೋಚಕ ಹೋರಾಟದ ನಿರೀಕ್ಷೆಯಲ್ಲಿದ್ಧಾರೆ.

ವಿಶ್ವಕಪ್‌ ಟೂರ್ನಿ ಸೇರಿದಂತೆ ಒಟ್ಟಾರೆಯಾಗಿ ಇವೆರಡು ತಂಡಗಳು ಒಂಬತ್ತು ಸಲ ಮುಖಾಮುಖಿಯಾಗಿದ್ದು, ನೆದರ್ಲೆಂಡ್ಸ್‌ ತಂಡ ನಾಲ್ಕು ಗೆಲುವುಗಳನ್ನು ಪಡೆದು ಮೇಲುಗೈ ಹೊಂದಿದೆ. ಇತಿಹಾಸದ ಬಲ ತನ್ನೊಂದಿಗಿದ್ದರೂ, ಶುಕ್ರವಾರ ಗೆಲುವು ಸುಲಭವಲ್ಲ ಎಂಬುದರ ಅರಿವು ತಂಡಕ್ಕಿದೆ.

ADVERTISEMENT

ಈ ಪಂದ್ಯವು ಫುಟ್‌ಬಾಲ್‌ನ ಸಾರ್ವಕಾಲೀಕ ಶ್ರೇಷ್ಠ ಫಾರ್ವರ್ಡ್‌ ಆಟಗಾರರಲ್ಲೊಬ್ಬರಾದ ಮೆಸ್ಸಿ ಮತ್ತು ಆಧುನಿಕ ಫುಟ್‌ಬಾಲ್‌ನ ಅತ್ಯುತ್ತಮ ಡಿಫೆಂಡರ್‌ಗಳ ನಡುವಿನ ಹೋರಾಟ ಎನಿಸಿಕೊಂಡಿದೆ. ಮೆಸ್ಸಿ ಅವರು ವರ್ಜಿಲ್‌ ವಾನ್‌ ಡೈಕ್‌ ನೇತೃತ್ವದ ನೆದರ್ಲೆಂಡ್ಸ್‌ ರಕ್ಷಣಾ ವಿಭಾಗದ ಜತೆ ಪೈಪೋಟಿ ನಡೆಸಲಿದ್ದಾರೆ.

ಅದೇ ರೀತಿ ಯುವ ಕೋಚ್‌ ಮತ್ತು ಅನುಭವಿ ಕೋಚ್‌ ನಡುವಿನ ಹೋರಾಟದಿಂದಲೂ ಪಂದ್ಯ ಮಹತ್ವ ಪಡೆದುಕೊಂಡಿದೆ. ಅರ್ಜೆಂಟೀನಾ ತಂಡದ ಕೋಚ್‌ 44 ವರ್ಷದ ಲಯೊನೆಲ್‌ ಸ್ಕಾಲೊನಿ ಮತ್ತು ನೆದರ್ಲೆಂಡ್ಸ್‌ ಕೋಚ್‌ 71 ವರ್ಷದ ಲೂಯಿಸ್‌ ವಾನ್‌ ಗಾಲ್‌ ಅವರು ಈ ಪಂದ್ಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.

‘ಮೆಸ್ಸಿ ಅತ್ಯಂತ ಅಪಾಯಕಾರಿ ಆಟಗಾರ ಎಂಬುದು ಗೊತ್ತಿದೆ. ಗೋಲು ಹೊಡೆಯುವ ಜತೆಗೆ ಗೋಲಿಗೆ ಅವಕಾಶ ಸೃಷ್ಟಿಸುವಲ್ಲೂ ಪಳಗಿದ್ದಾರೆ. ಆದರೆ ಚೆಂಡು ಅವರಿಗೆ ಸಿಗದಂತೆ ನೋಡಿಕೊಂಡರೆ ನಮಗೆ ಗೆಲ್ಲುವ ಅವಕಾಶವಿದೆ’ ಎಂದು ವಾನ್‌ ಗಾಲ್‌ ಹೇಳಿದ್ದಾರೆ.

ಕಳೆದ ವರ್ಷ ಯೂರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ ಸೋತ ಬಳಿಕ ಆಡಿದ 19 ಪಂದ್ಯಗಳಲ್ಲಿ ಅಜೇಯ ದಾಖಲೆಯನ್ನು ಹೊಂದಿರುವ ನೆದರ್ಲೆಂಡ್ಸ್‌ ತಂಡವು ಕೋಡಿ ಗಾಕ್ಪೊ ಮತ್ತು ಮೆಂಫಿಸ್‌ ಡೆಪೆ ಮೇಲೆ ಭರವಸೆಯಿಟ್ಟಿದೆ. ಇವರು ಅರ್ಜೆಂಟೀನಾ ರಕ್ಷಣಾ ವಿಭಾಗಕ್ಕೆ ಅಗ್ನಿಪರೀಕ್ಷೆ ಒಡ್ಡಲಿದ್ದಾರೆ.

ಅರ್ಜೆಂಟೀನಾ ತಂಡದ ಏಂಜೆಲ್‌ ಡಿ ಮರಿಯಾ ಗಾಯದಿಂದ ಚೇತರಿಸಿಕೊಂಡಿದ್ದರೂ, ಕ್ವಾರ್ಟರ್‌ ಫೈನಲ್‌ನಲ್ಲಿ ಆಡುವುದು ಖಚಿತವಾಗಿಲ್ಲ. ತೊಡೆಯ ಗಾಯಕ್ಕೆ ಒಳಗಾಗಿದ್ದ ಅವರು ಆಸ್ಟ್ರೇಲಿಯಾ ವಿರುದ್ಧ ಆಡಿರಲಿಲ್ಲ.

2014ರ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಇವೆರಡು ತಂಡಗಳು ನಿಗದಿತ ಹಾಗೂ ಹೆಚ್ಚುವರಿ ಅವಧಿಯ ಬಳಿಕ ಗೋಲುರಹಿತ ಡ್ರಾ ಸಾಧಿಸಿದ್ದವು. ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾ ಗೆಲುವು ಪಡೆದಿತ್ತು. ಆ ಸೋಲಿಗೆ ಮುಯ್ಯಿ ತೀರಿಸುವ ಅವಕಾಶ ನೆದರ್ಲೆಂಡ್ಸ್‌ಗೆ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.