ADVERTISEMENT

Fifa World Cup 2022: ಬ್ರೆಜಿಲ್‌ ‘ಭಯ’ದಲ್ಲಿ ಕ್ರೊವೇಷ್ಯಾ

ಕ್ವಾರ್ಟರ್‌ ಫೈನಲ್‌ ಪಂದ್ಯ ಇಂದು; ಮೋಡಿ ಮಾಡುವರೇ ನೇಮರ್‌?

ರಾಯಿಟರ್ಸ್
Published 9 ಡಿಸೆಂಬರ್ 2022, 3:40 IST
Last Updated 9 ಡಿಸೆಂಬರ್ 2022, 3:40 IST
ನೇಮರ್‌ –ಎಎಫ್‌ಪಿ ಚಿತ್ರ
ನೇಮರ್‌ –ಎಎಫ್‌ಪಿ ಚಿತ್ರ   

ದೋಹಾ: ‘ಕ್ವಾರ್ಟರ್‌ ಫೈನಲ್‌ನಲ್ಲಿ ನಮ್ಮ ಎದುರಾಳಿಯಾಗಿರುವ ಬ್ರೆಜಿಲ್‌ ತಂಡ ಭಯ ಹುಟ್ಟಿಸುವಂತಿದೆ’ ಎಂಬುದು ಕ್ರೊವೇಷ್ಯಾ ತಂಡದ ಕೋಚ್‌ ಜ್ಲಾಟ್ಕೊ ಡಾಲಿಚ್‌ ಅವರ ಹೇಳಿಕೆ.

ಬ್ರೆಜಿಲ್‌ ತಂಡ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ 4–1 ರಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿದಾಗ ಅವರು ಈ ಹೇಳಿಕೆ ನೀಡಿದ್ದರು. ಅಲ್‌ ರಯಾನ್‌ನ ಎಜುಕೇಷನ್‌ ಸಿಟಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಕ್ರೊವೇಷ್ಯಾ ಆಟಗಾರರು ಭಯದಿಂದಲೇ ಬ್ರೆಜಿಲ್‌ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯದ ವೇಳೆ ಹೊಂದಿದ್ದ ಬಲವನ್ನು ಇನ್ನಷ್ಟು ಹೆಚ್ಚಿಸಿಕೊಂಡು ಬ್ರೆಜಿಲ್‌ ಆಡಲಿದೆ. ಏಕೆಂದರೆ ಗಾಯದ ಸಮಸ್ಯೆಯಿಂದ ಬಳಲಿದ್ದ ಎಲ್ಲ ಆಟಗಾರರೂ ಚೇತರಿಸಿಕೊಂಡಿದ್ದಾರೆ.

ADVERTISEMENT

ಲೆಫ್ಟ್‌ ಬ್ಯಾಕ್‌ನಲ್ಲಿ ಆಡುವ ಡಿಫೆಂಡರ್‌ ಅಲೆಕ್ಸ್‌ ಸ್ಯಾಂಡ್ರೊ ಅವರು ಕ್ರೊವೇಷ್ಯಾ ವಿರುದ್ಧದ ಪಂದ್ಯಕ್ಕೆ ಲಭ್ಯರಾಗಿದ್ದು, ಕೋಚ್‌ ಟೀಟೆ ಅವರು ಪೂರ್ಣ ಸಾಮರ್ಥ್ಯದ ತಂಡವನ್ನೇ ಮೊದಲ ಇಲೆವೆನ್‌ನಲ್ಲಿ ಕಣಕ್ಕಿಳಿಸಲಿದ್ದಾರೆ. ಇದರಿಂದ ಕ್ರೊವೇಷ್ಯಾ ತಂಡಕ್ಕೆ ಕಠಿಣ ಸವಾಲು ಎದುರಾಗಲಿದೆ.

ಗಾಯದ ಕಾರಣ ಎರಡು ಲೀಗ್‌ ಪಂದ್ಯಗಳಿಂದ ಹೊರಗುಳಿದಿದ್ದ ನೇಮರ್‌ ಮತ್ತು ಡಿಫೆಂಡರ್‌ ಡ್ಯಾನಿಲೊ ಅವರು ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಆಡಿದ್ದರು. ಬಲಗಾಲಿಗೆ ಆಗಿದ್ದ ಗಾಯ, ಆಟಕ್ಕೆ ಸ್ವಲ್ಪವೂ ಅಡ್ಡಿ ಉಂಟುಮಾಡುತ್ತಿಲ್ಲ ಎಂಬುದನ್ನು ನೇಮರ್‌ ಕಳೆದ ಪಂದ್ಯದಲ್ಲಿ ತೋರಿಸಿಕೊಟ್ಟಿದ್ದರು. ಅಂಗಳದಲ್ಲಿ ಇದ್ದ 80 ನಿಮಿಷಗಳಲ್ಲೂ ಚುರುಕಿನ ಆಟವಾಡಿದ್ದರು.

ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಬ್ರೆಜಿಲ್‌ ಪರ ಅತಿಹೆಚ್ಚು ಗೋಲು ಗಳಿಸಿರುವ ದಿಗ್ಗಜ ಆಟಗಾರ ಪೆಲೆ (77 ಗೋಲು) ಅವರ ದಾಖಲೆ ಸರಿಗಟ್ಟಲು ನೇಮರ್‌ಗೆ ಇನ್ನೊಂದು ಗೋಲಿನ ಅಗತ್ಯವಿದೆ. ಆದ್ದರಿಂದ ಅವರು ಈ ಪಂದ್ಯದಲ್ಲಿ ಮತ್ತಷ್ಟು ಹುಮ್ಮಸ್ಸು, ಛಲದೊಂದಿಗೆ ಆಡುವ ಸಾಧ್ಯತೆಯಿದೆ.

ಐವರು ಘಟಾನುಘಟಿ ಆಟಗಾರರೊಂದಿಗೆ ಬ್ರೆಜಿಲ್‌ ನಡೆಸುವ ಆಕ್ರಮಣವನ್ನು ತಡೆಯಲು ಕ್ರೊವೇಷ್ಯಾಕ್ಕೆ ಭಾರೀ ಸಾಹಸ ಮಾಡಬೇಕಿದೆ. 2018ರ ಟೂರ್ನಿಯ ರನ್ನರ್ಸ್‌ ಅಪ್‌ ಆಗಿರುವ ಕ್ರೊವೇಷ್ಯಾ, ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಜಪಾನ್‌ ತಂಡವನ್ನು ಮಣಿಸಿತ್ತು.

ಅನುಭವಿಗಳಾದ ಲುಕಾ ಮಾಡ್ರಿಚ್, ಡೆಜಾನ್ ಲೊವ್ರೆನ್, ಇವಾನ್‌ ಪೆರಿಸಿಚ್‌ ಮತ್ತು ಮಾರ್ಸೆಲೊ ಬ್ರೊಜೊವಿಚ್‌ ಅವರನ್ನೊಳಗೊಂಡ ಕ್ರೊವೇಷ್ಯಾ ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿದೆ.

‘ಬ್ರೆಜಿಲ್‌ ತಂಡ ವಿಶ್ವದ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದು, ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದೆ. ನಾವು ಕೂಡಾ ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿಯುವೆವು’ ಎಂದು ಕೋಚ್‌ ಜ್ಲಾಟ್ಕೊ ಡಾಲಿಚ್‌ ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ ಇವೆರಡು ತಂಡಗಳು ಎರಡು ಸಲ ಪರಸ್ಪರ ಪೈಪೋಟಿ ನಡೆಸಿದ್ದು, ಎರಡೂ ಸಲ ಬ್ರೆಜಿಲ್‌ ಗೆದ್ದಿದೆ. 2006ರ ಟೂರ್ನಿಯಲ್ಲಿ 1–0 ರಲ್ಲಿ ಹಾಗೂ 2014ರ ಟೂರ್ನಿಯಲ್ಲಿ 3–1 ರಲ್ಲಿ ಜಯ ಸಾಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.