ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಕೇಶಾಮ್ ಬಿಕೇಶ್ ಸಿಂಗ್ ಗಳಿಸಿದ ನಾಲ್ಕು ಗೋಲುಗಳ ಬಲದಿಂದ ಮಣಿಪುರ ತಂಡವು ನಗರದಲ್ಲಿ ನಡೆಯುತ್ತಿರುವ 13 ವರ್ಷದೊಳಗಿನ ಬಾಲಕರ ಸಬ್ ಜೂನಿಯರ್ (ಟಿಯರ್1) ರಾಷ್ಟ್ರೀಯ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ 8–0ಯಿಂದ ಗುಜರಾತ್ ತಂಡವನ್ನು ಸುಲಭವಾಗಿ ಮಣಿಸಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಮಣಿಪುರ ತಂಡದ ಪರ ಕೇಶಾಮ್ (29ನೇ, 52ನೇ, 60ನೇ ಮತ್ತು 62ನೇ ನಿಮಿಷ) ಗೋಲುಗಳ ಸುರಿಮಳೆಗೈದರು. ಉಳಿದಂತೆ ಲೈಶ್ರಾಮ್ ಮಹೇಶ್ ಸಿಂಗ್ (8ನೇ), ಡೆನ್ನಿಸನ್ ಪುಖ್ರಂಬಮ್ (26ನೇ), ಸುಸಾನ್ ವೈಖೋಮ್ (75ನೇ) ಮತ್ತು ಸಾಪ್ ಸರ್ಜಿತ್ ಸಿಂಗ್ (85ನೇ) ಅವರು ತಲಾ ಒಂದು ಗೋಲು ಗಳಿಸಿದರು.
ಬಿ ಗುಂಪಿನ ಮತ್ತೊಂದು ಪಂದ್ಯದಲ್ಲಿ ಕೇರಳ ತಂಡವು 3–0 ಗೋಲುಗಳಿಂದ ಜಾರ್ಖಂಡ್ ತಂಡವನ್ನು ಸೋಲಿಸಿತು. ಕೇರಳದ ಪರ ಎ.ಎಂ.ಆರ್. ಅಜೀಂ ಎಂ. (45ನೇ), ಜಗನ್ ಕೃಷ್ಣ ಕೆ. (76ನೇ) ಮತ್ತು ಅಲೇಖ್ ಕೆ.ವಿ. (86ನೇ) ತಲಾ ಒಂದು ಗೋಲು ತಂದಿತ್ತರು.
ಡಿ ಗುಂಪಿನ ಪಂದ್ಯದಲ್ಲಿ ಪಶ್ಚಿಮ ಬಂಗಾಳ ತಂಡವು 5–1ರಿಂದ ಮಹಾರಾಷ್ಟ್ರ ತಂಡವನ್ನು ಮಣಿಸಿತು. ಪಶ್ಚಿಮ ಬಂಗಾಳ ಪರ ಅಂಶು ರೈ (13ನೇ, 56ನೇ, 69ನೇ) ಹ್ಯಾಟ್ರಿಕ್ ಗೋಲು ಗಳಿಸಿದರು. ಅಂಕೆತ್ ಸ್ವರ್ (10ನೇ) ಮತ್ತು ಸೂರ್ಯ ಬಿಸ್ವಾಸ್ (44ನೇ) ತಲಾ ಒಂದು ಗೋಲು ತಂದಿತ್ತರು. ಮಹಾರಾಷ್ಟ್ರದ ಪರ ಏಕೈಕ ಗೋಲನ್ನು ದೀಪಕ್ ಕನೌಜಿಯಾ (40ನೇ) ದಾಖಲಿಸಿದರು.
ಗುಂಪಿನ ಮತ್ತೊಂದು ಹಣಾಹಣಿಯಲ್ಲಿ ಗೋವಾ ತಂಡವು 4–0ಯಿಂದ ಉತ್ತರ ಪ್ರದೇಶ ತಂಡವನ್ನು ಸೋಲಿಸಿತು. ಗೋವಾ ತಂಡದ ಜೋಸೆಫ್ ಡಿಕಾಸ್ಟಾ(45ನೇ, 58ನೇ, 83ನೇ) ಹ್ಯಾಟ್ರಿಕ್ ಗೋಲು ದಾಖಲಿಸಿದರೆ, ಅನೋಶ್ ಫ್ರೆನೋಯ್ ವಾಜ್ (72ನೇ) ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.